ಮೂಡಲಗಿ:ಜೋಕಾನಟ್ಟಿ ಗ್ರಾಮ ದೇವರುಗಳ ಜಾತ್ರೆ ಎಲ್ಲರಿಗೂ ಮಾದರಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಜೋಕಾನಟ್ಟಿ ಗ್ರಾಮ ದೇವರುಗಳ ಜಾತ್ರೆ ಎಲ್ಲರಿಗೂ ಮಾದರಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಜ 12 :
ಭಂಡಾರದಿಂದ ಕೂಡಿರುವ ಜೋಕಾನಟ್ಟಿ ಗ್ರಾಮದೇವರುಗಳ ಜಾತ್ರೆ ಪ್ರತಿವರ್ಷ ಭಕ್ತಾಧಿಗಳನ್ನು ಆಕರ್ಷಿಸುತ್ತಿದ್ದು, ದೊಡ್ಡ ಜಾತ್ರೆಯಾಗಿ ಹೊರಹೊಮ್ಮುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಗೆ ಸಮೀಪದ ಜೋಕಾನಟ್ಟಿ ಗ್ರಾಮದಲ್ಲಿ ಶನಿವಾರ ಸಂಜೆ ಗ್ರಾಮದೇವರುಗಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲ ಜಾತಿ-ಜನಾಂಗದವರು ಸೇರಿಕೊಂಡು ವರ್ಷಕ್ಕೊಮ್ಮೆ ಜಾತ್ರೆ ಮಾಡುತ್ತಿರುವುದು ಇತರರಿಗೆ ಮಾದರಿ ಎಂದು ಹೇಳಿದರು.
ಜೋಕಾನಟ್ಟಿ ಗ್ರಾಮದಲ್ಲಿ ಎಲ್ಲರೂ ಕೂಡಿ ಎಲ್ಲ ದೇವರುಗಳ ಜಾತ್ರೆಯನ್ನು ಒಮ್ಮೆಲೆ ಮಾಡುತ್ತಿದ್ದಾರೆ. ಎಲ್ಲ ಸಮಾಜದ ಹಿರಿಯರು ಕೂಡಿಕೊಂಡು ಇಂತಹ ಪರಂಪರೆಯನ್ನು ಹಾಕಿರುವುದು ವಿಶೇಷವಾಗಿದೆ. ಪ್ರತಿವರ್ಷ ಜೋಕಾನಟ್ಟಿ ಗ್ರಾಮದಲ್ಲಿ ಭಂಡಾರದಿಂದ ಕೂಡಿರುವ ಜಾತ್ರೆಯನ್ನು ನೋಡಲಿಕ್ಕೆ ಭಕ್ತಾಧಿಗಳು ಕಾತುರದಿಂದ ಕಾಯುತ್ತಿರುವುದು ಜಾತ್ರೆಯ ವಿಶಿಷ್ಟತೆಯನ್ನು ಎತ್ತಿ ತೋರಿಸಿದೆ ಎಂದು ಹೇಳಿದರು.
ಜಾತ್ರೆಗಳು ನಮ್ಮ ಬಾಲ್ಯದ ಹಾಗೂ ಮಿತ್ರರ ಒಡನಾಟವನ್ನು ನೆನಪಿಸುತ್ತವೆ. ಬಾಲ್ಯದ ಸವಿನೆನಪುಗಳು ಜಾತ್ರೆಯಿಂದ ಮತ್ತೇ ಸ್ಮರಿಸುತ್ತವೆ. ಹಳೆಯ ಘಟನೆಗಳನ್ನು ಇವು ನಮಗೆ ನೆನಪು ಮಾಡಿಕೊಡುತ್ತವೆ. ಭಾರತೀಯ ಇತಿಹಾಸ ಹಾಗೂ ಸಂಸ್ಕøತಿಯ ಪರಂಪರೆಯನ್ನು ಎತ್ತಿ ತೋರಿಸುವ ಮೂಲಕ ನಮ್ಮ ದೇಶದ ಧಾರ್ಮಿಕತೆಯನ್ನು ಪ್ರತಿಪಾದಿಸುತ್ತವೆ ಎಂದು ಅವರು ಹೇಳಿದರು.
ಜೋಕಾನಟ್ಟಿ ಗ್ರಾಮದ ಅಭಿವೃದ್ಧಿಗಾಗಿ ಕಳೆದ ಒಂದುವರೆ ದಶಕದಿಂದ ಸರ್ಕಾರದ ಎಲ್ಲ ಇಲಾಖೆಗಳ ಅನುದಾನದಡಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಕ್ಷೇತ್ರದ ಸರ್ವತೋಮುಖ ಏಳ್ಗೆಗಾಗಿ ಹಲವಾರು ಯೋಜನೆಗಳನ್ನು ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ಅರಭಾವಿ ಮತಕ್ಷೇತ್ರದ ಸರ್ವಾಂಗೀಣ ಏಳ್ಗೆಗಾಗಿ ನಮ್ಮ ಸರ್ಕಾರದಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಂಡಿರುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಯೋಜನೆಗಳನ್ನು ವಿವರಿಸಿದರು.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಜಾತ್ರಾ ಕಮೀಟಿ ಮತ್ತು ಗ್ರಾಮಸ್ಥರು ಸತ್ಕರಿಸಿ ನೆನಪಿನ ಕಾಣಿಕೆ ನೀಡಿದರು. ಇದೇ ಸಂದರ್ಭದಲ್ಲಿ ಜಾನಪದ ಕಲಾ ಮೇಳಕ್ಕೆ ಬಾಲಚಂದ್ರ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಪ್ರಭಾಶುಗರ ನಿರ್ದೇಶಕರಾದ ಶಿದ್ಲಿಂಗಪ್ಪ ಕಂಬಳಿ, ಕೃಷ್ಣಪ್ಪ ಬಂಡ್ರೊಳ್ಳಿ, ಮುಖಂಡರಾದ ಭೀಮಶಿ ಮೋಕಾಶಿ, ಕುಬೇಂದ್ರ ತೆಗ್ಗಿ, ಪರಸಪ್ಪ ಬಬಲಿ, ನಾರಾಯಣ ಸನದಿ, ಅಮೃತ ದಪ್ಪಿನವರ, ಚಂದ್ರು ಬಿದರಿ, ಅಶೋಕ ಖಂಡ್ರಟ್ಟಿ, ಗಜಾನನ ಯರಗಣವಿ, ಎಂ.ಕೆ. ಕುಳ್ಳೂರ, ಸಾಬಪ್ಪ ಬಂಡ್ರೊಳ್ಳಿ, ಲೇಮನ್ನಾ ಕಂಬಳಿ, ತಾಲೂಕಾ ನಿವೃತ್ತ ಆರೋಗ್ಯಾಧಿಕಾರಿ ಡಾ.ಆರ್.ಎಸ್. ಬೆಣಚಿನಮರಡಿ, ಮಂಜುನಾಥ ಸಣ್ಣಕ್ಕಿ, ಉದ್ದಪ್ಪ ಹುಣಶ್ಯಾಳ, ವಿಠ್ಠಲ ಕಂಬಳಿ, ಸಿದ್ದಪ್ಪ ಕಂಬಳಿ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.