ಗೋಕಾಕ:ಗೋಕಾಕದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಣೆ
ಗೋಕಾಕದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ.25 :
18 ವರ್ಷ ಮೇಲ್ಪಟ್ಟ ಎಲ್ಲರೂ ವಿವೇಚನಾಶೀಲರಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನೂ ಗಟ್ಟಿಗೊಳಿಸುವಂತೆ ಡಿವಾಯ್‍ಎಸ್‍ಪಿ ಪ್ರಭು ಡಿ.ಟಿ. ಹೇಳಿದರು.
ಶನಿವಾರದಂದು ನಗರದ ಜಿಇಎಸ್‍ನ ಸಭಾ ಭವನದಲ್ಲಿ ಜೆಎಸ್‍ಎಸ್ ಮಹಾವಿದ್ಯಾಲಯ, ತಾಲೂಕಾಡಳಿತ, ತಾಲೂಕ ಪಂಚಾಯತ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಜೆಸಿಐ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶ ಹಾಗೂ ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಲು ಯೋಗ್ಯವಾದ ಸರ್ಕಾರವನ್ನು ಆಯ್ಕೆ ಮಾಡುವಂತಹ ಅಧಿಕಾರವನ್ನು ಮತದಾರರಿಗೆ ನೀಡಿದ್ದು ತಮ್ಮ ಅಮೂಲ್ಯವಾದ ಮತವನ್ನು ಮಾರಾಟ ಮಾಡದೇ ತಮ್ಮ ಹಕನ್ನು ಅಧಿಕಾರಯುತವಾಗಿ ಚಲಾಯಿಸಬೇಕು. ಮತದಾನದ ಬಗ್ಗೆ ಅಸಡ್ಡೆ, ತಿರಸ್ಕಾರ ಮಾಡಬೇಡಿ, ಹಿಂದೆ ನಿರ್ದಿಷ್ಠ ಜನರಿಗೆ ಸೀಮಿತವಾದ ಮತದಾನದ ಹಕ್ಕು ಇಂದು 18 ವರ್ಷ ಮೇಲ್ಪಟ್ಟ ಎಲ್ಲ ವರ್ಗದವರಿಗೂ ದೊರತಿದ್ದು, ಅದನ್ನು ಚುನಾವಣೆಯಲ್ಲಿ ಚಲಾಯಿಸುವಂತೆ ಕರೆ ನೀಡಿದರು.
ವೇದಿಕೆ ಮೇಲೆ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಜೆಸಿಐ ಸಂಸ್ಥೆಯ ಅಧ್ಯಕ್ಷ ರಜನಿಕಾಂತ ಮಾಳೋದೆ, ಪ್ರಭಾರಿ ಪೌರಾಯುಕ್ತ ಎಮ್.ಎನ್.ಸಗರೇಕರ, ಪ್ರಾಚಾರ್ಯ ಡಾ.ಎಸ್.ಎಸ್.ತೇರದಾಳ, ಉಪಪ್ರಾಚಾರ್ಯ ಸಿ.ಬಿ.ಕೌಜಲಗಿ, ಉಪನ್ಯಾಸಕ ಡಾ. ಬಿ.ಎಮ್.ತುರಡಗಿ ಇದ್ದರು. ಉಪನ್ಯಾಸಕ ಡಾ.ಎಸ್.ಬಿ.ಹೊಸಮನಿ ಸ್ವಾಗತಿಸಿದರು, ಎ.ಕೆ.ಕಿಳ್ಳಿಕೇತ ವಂದಿಸಿದರು.
ನಂತರ ರಾಷ್ಟ್ರೀಯ ಮತದಾರರ ದಿನಾಚರಣೆಯ ನಿಮಿತ್ಯ ನಗರದ ಪ್ರಮುಖ ರಸ್ತೆಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಬಿತ್ತಿ ಪತ್ರದೊಂದಿಗೆ ಜಾಥಾ ಜರುಗಿತು.