ಗೋಕಾಕ:ಡಿಕೆಶಿ ವಿರೋಧ ಮಾಡದಿದ್ದರೆ ನಾನು ದೊಡ್ಡ ಲೀಡರ್ ಆಗುತ್ತಿರಲಿಲ್ಲ : ಸಚಿವ ರಮೇಶ ಜಾರಕಿಹೊಳಿ ಅಭಿಮತ
ಡಿಕೆಶಿ ವಿರೋಧ ಮಾಡದಿದ್ದರೆ ನಾನು ದೊಡ್ಡ ಲೀಡರ್ ಆಗುತ್ತಿರಲಿಲ್ಲ : ಸಚಿವ ರಮೇಶ ಜಾರಕಿಹೊಳಿ ಅಭಿಮತ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 9 :
ಡಿಕೆಶಿ ವಿರೋಧ ಮಾಡದಿದ್ದರೆ ನಾನು ದೊಡ್ಡ ಲೀಡರ್ ಆಗುತ್ತಿರಲಿಲ್ಲ ಎಂದು ನೂತನ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು, ರವಿವಾರದಂದು ನಗರದಲ್ಲಿ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಅಭಿಮಾನದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ ಹೇಳುತ್ತೇನೆ. ಅವರು ವಿರೋಧ ಮಾಡದಿದ್ರೆ ಈಷ್ಟೇಲ್ಲಾ ಬೆಳವಣಿಗೆ ನಡೆಯಲು ಸಾದ್ಯವಾಗುತ್ತಿರಲಿಲ್ಲ, ದೇವರ ದಯೆ, ಕ್ಷೇತ್ರದ ಜನರ ಆಶಿರ್ವಾದದಿಂದ ಯಶಸ್ಸು ಸಿಕ್ಕಿದೆ ಎಂದರು. ಅದಕ್ಕಾಗಿ ಇಂದು ಡಿ ಕೆ ಶಿವಕುಮಾರಗೆ ಧನ್ಯವಾದ ತಿಳಿಸುತ್ತೇನೆ. ಕಾಂಗ್ರೇಸನಲ್ಲಿ ಇದ್ದ ನನಗೆ ನಾನು ಬಿಜೆಪಿ ಶಾಸಕನಾಗುತ್ತೆನೆ ಮತ್ತು ಸಚಿವನಾಗುತ್ತೆನೆ ಎಂದು ಕನಸಲ್ಲೂ ನೆನೆಸಿಕೊಂಡಿರಲಿಲ್ಲ ಎಂದರು.
ನನಗೆ ಬಂದ ಸಂಕಷ್ಟ ವೈರಿಗೂ ಬರಬಾರದು, ರಾಜಕೀಯದಲ್ಲಿ ನಾವು ನಡೆದಿದ್ದೇ ದಾರಿ ಅಂದುಕೊಂಡರೆ ತಪ್ಪು. ಸಂಜಯ ಪಾಟೀಲ ವಿಷಯದಲ್ಲಿ ನಾನು ತಪ್ಪು ಮಾಡಿದ್ದೇನೆ ಮುಂದಿನ ದಿನಗಳಲ್ಲಿ ಅದನ್ನು ಸರಿ ಪಡಿಸುತ್ತೇನೆ. ಪ್ರಮಾಣ ವಚನ ಸ್ವೀಕರಿಸುವಾಗ ಮನಸ್ಸು ಇರಲಿಲ್ಲ, ನನ್ನನ್ನು ನಂಬಿದ ಕುಮಟೊಳ್ಳಿ ಮತ್ತು ಇತರರು ಮಂತ್ರಿಯಾಗಲಿಲ್ಲ ಎನ್ನುವ ಕೊರಗು ಇತ್ತು. ಮಹೇಶ್ ಕುಮಟೊಳ್ಳಿ ಅವರು ಒತ್ತಾಯ ಮಾಡಿದ ಕಾರಣ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದೆ. ನಾನು ಮಂತ್ರಿಯಾಗಲು ಬಾಲಚಂದ್ರ ಜಾರಕಿಹೊಳಿ ಮತ್ತು ಮಹೇಶ್ ಕುಮಟೊಳ್ಳಿ ಕಾರಣ ಎಂದರು.
ನಮಗೆ ನೀರಾವರಿ ಖಾತೆಯಾದ್ರು ಸಿಗಲಿ, ಲೈಬ್ರರಿ ಖಾತೆಯಾದ್ರು ಸಿಗಲಿ ನಾನು ಯಡಿಯೂರಪ್ಪ ಮತ್ತು ಅಮೀತ ಷಾ ಅವರನ್ನು ನಂಬಿದ್ದೇನೆ ಮುಂದೆಯೂ ನಂಬುತ್ತೇನೆ ಎಂದರು.
ಮನೆತನದ ವಿಷಯ ಬಂದಾಗ ನಾವೆಲ್ಲರೂ ಒಂದೇ ರಾಜಕೀಯ ಬಂದಾಗ ನಾವೆಲ್ಲಾ ಬೇರೆ ಬೇರೆ. ಸತೀಶ್ ಜಾರಕಿಹೊಳಿ ಇಪ್ಪತ್ತು ವರ್ಷದಲ್ಲಿ ಮಾಡದ ಕಾರ್ಯವನ್ನು ನಾನು ಎರಡೇ ವರ್ಷದಲ್ಲಿ ಮಾಡಿ ತೋರಿಸಿದ್ದೇನೆ. ರಾಜಕೀಯ ಕ್ಷೇತ್ರದಲ್ಲಿ ಯಾವ ಹೊತ್ತಿನಲ್ಲಿ ಯಾವ ನಿರ್ಣಯ ತೆಗೆದುಕೊಳ್ಳಬೇಕು ಅನ್ನೋದು ಮುಖ್ಯ, ತಾಳ್ಮೆ ಇರಬೇಕು, ನಂಬಿದವರನ್ನು ಕೈಬಿಡಬಾರದು. ನನ್ನನ್ನು ವಿರೋಧಿಸಿದವರು ನನ್ನವರೇ ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡದೇ ಹೊಸ ಅದ್ಯಾಯ ಆರಂಭಿಸೋಣ. ನಾನು ಬಿಜೆಪಿ ನಾಯಕರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೆನೆ. ನಾನು ಬಿಜೆಪಿ ಬಿಡುವದಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಅಥಣಿ ಶಾಸಕ ಮಹೇಶ್ ಕುಮಟೊಳ್ಳಿ ಮಾತನಾಡಿ, ರಮೇಶ್ ಜಾರಕಿಹೊಳಿ ಬಿಜೆಪಿಗೆ ಬರುವ ಮೊದಲು ಕಾಂಗ್ರೆಸ್ ಪಕ್ಷದ ನಾಯಕರಿಗೆ ಬೆಳಗಾವಿ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ. ಗೋಕಾಕ್ ಬೆಂಕಿಯ ಚೆಂಡು ಎಂದು ಸೂಕ್ಷ್ಮವಾಗಿ ಹೇಳಿದ್ದೇವು ಆದ್ರೆ ಅವರು ಕೇಳಲಿಲ್ಲ ಹೀಗಾಗಿ ಅನಿವಾರ್ಯವಾಗಿ ಬಿಜೆಪಿಗೆ ಬರಬೇಕಾಯಿತು. ರಮೇಶ್ ಜಾರಕಿಹೊಳಿ ಅವರಿಗೆ ನೀರಾವರಿ ಖಾತೆಯನ್ನೇ ಕೊಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದೇವೆ ರಮೇಶ್ ಜಾರಕಿಹೊಳಿ ನೀರಾವರಿ ಮಂತ್ರಿಯಾದರೆ ಉತ್ತರ ಕರ್ನಾಟಕ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲಿವೆ ಎಂದು ಮಹೇಶ್ ಕುಮಟೊಳ್ಳಿ ವಿಶ್ವಾಸ ವ್ಯೆಕ್ತಪಡಿಸಿದರು
ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ತಾಕತ್ತನ್ನು ರಮೇಶ್ ಜಾರಕಿಹೊಳಿ ತೋರಿಸಿದ್ದಾರೆ, ಅವರು ಸಚಿವರಾಗಿದ್ದು, ಬೆಳಗಾವಿ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ನೀರಾವರಿ ಮಾಡುವ ಜೊತೆಗೆ ಮೂಲಭೂತ ಸೌಕರ್ಯಗಳನ್ನು ದೊರಕಿಸಿ ಕೊಡುವ ಮೂಲಕ ಅಭಿವೃದ್ಧಿಯ ಹರಿಕಾರರಾಗಬೇಕು ಅಭಿವೃದ್ಧಿಯ ಮೂಲಕ ಜಿಲ್ಲೆಯ ಜನರ ಋಣ ತೀರಿಸಬೇಕು ಎಂದರು.
ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಗೋಕಾಕಿಗೆ ವಿಶೇಷ ಸ್ಥಾನವಿದೆ, ರಾಜಕೀಯ ಪರಿವರ್ತನೆ ಆರಂಭವಾಗಿದ್ದು ಗೋಕಾಕಿನಿಂದ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಸಂಕಲ್ಪ ಮಾಡಿ ಅದನ್ನು ಈಡೇರಿಸಿದ ಗಂಡುಮೆಟ್ಟಿನ ನಾಯಕ ರಮೇಶ್ ಜಾರಕಿಹೊಳಿ ಅವರಾಗಿದ್ದು ನುಡಿದಂತೆ ನಡೆದು ಮಾಡಿದ ಸಂಕಲ್ಪವನ್ನು ಈಡೇರಿಸುವ ನಾಯಕತ್ವ ಹೊಂದಿರುವ ರಮೇಶ್ ಜಾರಕಿಹೊಳಿ ಅವರಿಗೆ ನೀರಾವರಿ ಇಲಾಖೆ ಸಿಗಲಿ ಉತ್ತರ ಕರ್ನಾಟಕದ ಬಗ್ಗೆ ಇರುವ ತಾರತಮ್ಯ ನಿವಾರಣೆಯಾಗಲಿ ಎಂದು ಮಹಾಂತೇಶ್ ಕವಟಗಿಮಠ ಹೇಳಿದರು.
ಸವದತ್ತಿ ಶಾಸಕ ಆನಂದ ಮಾಮನಿ ಮಾತನಾಡಿ, ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಸರ್ಕಾರದ ರಚನಾಮೂರ್ತಿಗಳು, ಸರ್ಕಾರದ ರಚನೆಯಲ್ಲಿ ಮುಖ್ಯ ಪಾತ್ರವಹಿಸಿ, ರಮೇಶ್ ಜಾರಕಿಹೊಳಿ ರಾಜ್ಯಮಟ್ಟದ ನಾಯಕರಾಗಿ ಹೊರಹೊಮ್ಮಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಿ ಮಾದರಿ ಸಚಿವರಾಗಲಿ ಎಂದು ಹಾರೈಸಿದರು.
ವೇದಿಕೆಯ ಮೇಲೆ ಬಿಜೆಪಿ ಮುಖಂಡರಾದ ಆನಂದ ಚೋಪ್ರಾ, ಅಶೋಕ ಅಸೋದೆ, ಮಲ್ಲಣ್ಣ ಯಾದವಾಡ, ಈರಣ್ಣ ಕಡಾಡಿ, ಜಯಾನಂದ ಮುನವಳ್ಳಿ, ಎಮ್ ಡಿ ಚುನಮರಿ, ಶಾಮಾನಂದ ಪೂಜೇರಿ, ಮಹಾಂತೇಶ ತಾಂವಶಿ, ಶಶಿಧರ ದೇಮಶೆಟ್ಟಿ, ವೀರುಪಾಕ್ಷ ಯಲಿಗಾರ, ಶಿವಾನಂದ ಡೋಣಿ, ಶಕೀಲ ಧಾರವಾಡಕರ ಸೇರಿದಂತೆ ಅನೇಕರು ಇದ್ದರು.