ಗೋಕಾಕ:ಅಧಿಕಾರಿಗಳ ನಿರ್ಲಕ್ಷದಿಂದ ಸಂತ್ರಸ್ಥರಿಗೆ ಅನ್ಯಾಯ : ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಅಧಿಕಾರಿಗಳ ನಿರ್ಲಕ್ಷದಿಂದ ಸಂತ್ರಸ್ಥರಿಗೆ ಅನ್ಯಾಯ : ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ, 11 ;-
ತಾಲೂಕಿನ ಮೆಳವಂಕಿ ಗ್ರಾಮದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಸರ್ವೇ ಕಾರ್ಯದಲ್ಲಿ ಅಧಿಕಾರಿಗಳ ನಿರ್ಲಕ್ಷದಿಂದ ಸಂತ್ರಸ್ಥರಿಗೆ ಅನ್ಯಾಯವಾಗಿದ್ದು, ಅದನ್ನು ಸರಿಪಡಿಸುವಂತೆ ಆಗ್ರಹಿಸಿ ಮೆಳವಂಕಿ ಗ್ರಾಮದ ನೆರೆ ಸಂತ್ರಸ್ಥರು ಹಾಗೂ ಮುಖಂಡರು ಮಂಗಳವಾರದಂದು ಸಂಜೆ ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಿಜವಾದ ನೆರೆ ಸಂತ್ರಸ್ಥರಿಗೆ ಪರಿಹಾರ ಸಿಕ್ಕಿರುವುದಿಲ್ಲ. ಕಳೆದ 6 ತಿಂಗಳಿನಿಂದ ತಹಶೀಲ್ದಾರ ಕಚೇರಿಗೆ ಮನವಿ ಮಾಡಿದರೂ ತಹಶೀಲ್ದಾರ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರಿಪಡಿಸಲು ಹೇಳಿದರೂ ತಹಶೀಲ್ದಾರ ನಿರ್ಲಕ್ಷ ಮಾಡುತ್ತಿದ್ದಾರೆ. ನೆರೆ ಸಂತ್ರಸ್ಥರಾದ ಎ ವರ್ಗದ 78, ಬಿ ವರ್ಗದ 205, ಸಿ ವರ್ಗದ 305 ಸಂತ್ರಸ್ಥರಿಗೆ ಸಂಪೂರ್ಣವಾಗಿ ಪರಿಹಾರ ನೀಡಲಾಗಿಲ್ಲ. ಈ ಸರ್ವೇ ಸಮಯದಲ್ಲಿ ಆಯ್ಕೆಗೊಂಡ 189 ಫಲಾನುಭವಿಗಳನ್ನು ರದ್ದುಪಡಿಸಿದ್ದು, ಅವುಗಳನ್ನು ಸಿ ವರ್ಗದಿಂದ ಎ ವರ್ಗಕ್ಕೆ ಸೇರಿಸುತ್ತೇವೆ ಎಂದು ಹೇಳಿದ ಅಧಿಕಾರಿಗಳು ಈಗ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸಂತ್ರಸ್ಥರಿಗೆ ನ್ಯಾಯ ಒದಗಿಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ, ನೀರಾವರಿ ಸಚಿವ ರಮೇಶ ಜಾರಕಿಹೊಳಿ, ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಒತ್ತಾಯಿಸಲಾಗುವುದು ಎಂದು ಸಂತ್ರಸ್ಥರು ಹಾಗೂ ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ, ಬಸನಗೌಡ ಪಾಟೀಲ, ಸತ್ತೆಪ್ಪ ಬಬಲಿ, ಬಿ.ಬಿ.ಬೀರನಗಡ್ಡಿ, ರಾಮಪ್ಪಾ ಕಾಪಶಿ, ಅಪ್ಪಯ್ಯ ಅಗ್ನೆಪ್ಪನವರ, ಭೀಮಪ್ಪ ಚಿಪ್ಪಲಕಟ್ಟಿ, ಮಹಾದೇವಪ್ಪ ಪತ್ತಾರ ಸೇರಿದಂತೆ ಅನೇಕರು ಇದ್ದರು.