RNI NO. KARKAN/2006/27779|Wednesday, December 25, 2024
You are here: Home » breaking news » ಬೆಟಗೇರಿ:ಸೌತೆಕಾಯಿ, ಹಸಿ ಮೆಣಸಿನಕಾಯಿ, ತಪ್ಪಲ ಪಲ್ಯೆ… ತಗೊಳ್ಳಿ : ಮಕ್ಕಳ ಸಂತೆಯಲ್ಲಿ ಭರದ ಮಾರಾಟ

ಬೆಟಗೇರಿ:ಸೌತೆಕಾಯಿ, ಹಸಿ ಮೆಣಸಿನಕಾಯಿ, ತಪ್ಪಲ ಪಲ್ಯೆ… ತಗೊಳ್ಳಿ : ಮಕ್ಕಳ ಸಂತೆಯಲ್ಲಿ ಭರದ ಮಾರಾಟ 

ಸೌತೆಕಾಯಿ, ಹಸಿ ಮೆಣಸಿನಕಾಯಿ, ತಪ್ಪಲ ಪಲ್ಯೆ… ತಗೊಳ್ಳಿ : ಮಕ್ಕಳ ಸಂತೆಯಲ್ಲಿ ಭರದ ಮಾರಾಟ

 

 

ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ

 
ಅಡಿವೇಶ ಮುಧೋಳ.

 
ತಾಜಾ ತಾಜಾ ಬೆಂಡೆಕಾಯಿ, ಬದನೆಕಾಯಿ, ಸೌತೆಕಾಯಿ, ಹಸಿ ಮೆಣಸಿನಕಾಯಿ, ತಪ್ಪಲ ಪಲ್ಯೆ… ತಗೊಳ್ಳಿ… ತಗೊಳ್ಳಿ… ಎಂದು ಕೂಗುವ ಶಾಲಾ ಮಕ್ಕಳು, ಚೌಕಾಶಿ ಮಾಡುವ ಗ್ರಾಹಕರು… ಇದೇನು.! ಎಲ್ಲಿ ಅನ್ನುತ್ತಿರಾ.? ಇದು ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ಶ್ರೀ ಕನಕ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳಾದ ಶ್ರೀ ಸಂಗೊಳ್ಳಿ ರಾಯಣ್ಣ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಶ್ರೀ ವೈ.ಎಲ್.ಸಣ್ಣಕ್ಕಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗಾಗಿ ಗುರುವಾರಂದು ಆಯೋಜಿಸಿದ ಮಕ್ಕಳ ಸಂತೆಯಲ್ಲಿ ಕಂಡು ಬಂದ ದೃಶ್ಯವಿದು.
ಈ ಶಾಲಾ ವಿದ್ಯಾರ್ಥಿಗಳ ಸಂತೆಯಲ್ಲಿ ಈರುಳ್ಳಿ, ಬದನೆ, ಚವಳಿ, ಬೆಂಡೆ, ಸೌತೆಕಾಯಿ, ಬಟಾಟೆ, ಗಜ್ಜರಿ, ಬಾಳೆಹಣ್ಣು, ಸೇಬು, ನುಗ್ಗಿಕಾಯಿ, ಕರಿಬೇವು, ಕೂತಬಂರಿ, ಎಳೆನೀರು, ಬಜಿ, ಎಗ್ಗರೈಸ್ ಸೇರಿದಂತೆ ವಿವಿಧ ತಿಂಡಿ-ತಿನಸು, ತರ-ತರಹದ ಸೊಪ್ಪು ಏನುಂಟು ಏನಿಲ್ಲಾ…
ವಿದ್ಯಾರ್ಥಿಗಳು ಸಂತೆಗೆ ಬಂದ ಗ್ರಾಹಕರನ್ನು ಸೆಳೆಯುವುದು, ಮನವರಿಕೆ ಮಾಡುವುದು, ಚೌಕಾಶಿ ಮಾಡುವುದು, ತಕ್ಕಡಿ ನಿರ್ವಹಣೆ, ಚಿಲ್ಲರೆ ಹಣದ ವಿನಿಮಯ, ಸ್ವಚ್ಛತೆಯ ಪರಿಕಲ್ಪನೆ, ಪ್ಲಾಸ್ಟಿಕ್ ಬ್ಯಾಗಗಳ ಬಗ್ಗೆ ಜಾಗೃತಿ ಮೂಡಿಸಿ ಬಟ್ಟೆ ಚೀಲಗಳಲ್ಲಿ ತರಕಾರಿ ಒಯ್ಯಲು ಮಕ್ಕಳ ಸಂತೆಯಲ್ಲಿ ಮಾರಾಟ ಮನ ಮುಟ್ಟುವಂತಿತ್ತು.
ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಗ್ರಾಮದ ತರಕಾರಿ ಬೆಳೆಗಾರ ರೈತರಲ್ಲಿ, ಮಾರುಕಟ್ಟೆಗೆ ಹೋಗಿ, ಯಾರ್ಯಾರೂ ಎಂತಹ ತರಕಾರಿ ತರಬೇಕು ಅಂತಾ ತಾವೇ ನಿರ್ಧರಿಸಿ ತಂದಿದ್ದರು. ಅಲ್ಲದೇ ಶಾಲೆಯ ಆವರಣದ ನಿರ್ಧರಿತ ಜಾಗೆಯಲ್ಲಿ ತಮ್ಮ ತಮ್ಮ ತರಕಾರಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟು ಸಂತೆಗೆ ಬಂದ ಗ್ರಾಹಕರಿಗೆ ಮಾರಿ, ನೋಡುಗರ, ತರಕಾರಿ ಕೊಂಡುಕೊಳ್ಳುವ ಗ್ರಾಹಕರ ಗಮನ ಸೆಳೆದರು.
ಪ್ರಾಥಮಿಕ-ಪ್ರೌಢ ಶಿಕ್ಷಣದ ಕಲಿಕಾ ಹಂತದಲ್ಲಿರುವ ಮಕ್ಕಳಿಗೆ ವ್ಯಾಪಾರ, ವಾಣಿಜ್ಯ, ಮಾರುಕಟ್ಟೆ, ಮಾರಾಟ, ಬೆಲೆ ನಿಗದಿ, ಚೌಕಾಸಿ, ಸರಕು ಸಾಗಾಟ, ಹೂಡಿಕೆ, ಲಾಭ, ನಷ್ಟಗಳು ಸೇರಿದಂತೆ ವಿವಿಧ ವಿಷಯಗಳ ಸಮಗ್ರ ಹಾಗೂ ಪ್ರಾತ್ಯಕ್ಷಿಕೆ ತರಬೇತಿ ನೀಡುವ ಉದ್ದೇಶದಿಂದ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಂತೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಸ್ಥಳೀಯ ಶ್ರೀ ಕನಕ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಮಂಜುನಾಥ ಸಣ್ಣಕ್ಕಿ ತಿಳಿಸಿದರು.
ಹಲವು ದಿನಗಳ ಮೊದಲೇ ಸಂತೆ ಆಯೋಜನೆಯ ಕುರಿತು ತಿಳಿಸಲಾಗಿತ್ತು. ಶಾಲಾ ಮಕ್ಕಳ ಪಾಲಕರು, ಸ್ಥಳೀಯರು, ಶಾಲೆಯ ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಶಾಲೆಯ 300ಕ್ಕೂ ಹೆಚ್ಚು ಮಕ್ಕಳು, ಅಪಾರ ಸಂಖ್ಯೆಯಲ್ಲಿ ಸ್ಥಳೀಯರು ಈ ಸಂತೆಯಲ್ಲಿ ಪಾಲ್ಗೊಂಡು ತರಕಾರಿ ಸೇರಿದಂತೆ ವಿವಿಧ ವಸ್ತು, ತಿಂಡಿ ತಿನಸುಗಳನ್ನು ಖರೀದಿಸಿ, ಮುಗ್ಧ ಮಕ್ಕಳ ಸಂತೆಯಲ್ಲಿ ಖುಷಿಯಿಂದ ಸಂಭ್ರಮಿಸಿದರು.
ಶಾಲಾ ಮಕ್ಕಳ ಸಂತೆಗೆ ಚಾಲನೆ: ಕೌಜಲಗಿ ಗ್ರಾಮದ ಶಿಕ್ಷಣಪ್ರೇಮಿ ಡಾ.ಅನಿತಾ ಸಣ್ಣಕ್ಕಿ ಅವರು ಇಲ್ಲಿಯ ಕನಕ ಶಿಕ್ಷಣ ಸಂಸ್ಥೆಯ ಶಾಲೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಮಕ್ಕಳ ಸಂತೆಯನ್ನು ಉದ್ಘಾಟಿಸಿ, ಮಕ್ಕಳ ಸಂತೆಗೆ ಚಾಲನೆ ನೀಡಿ ಮಾತನಾಡಿ, ರೈತರು ಮತ್ತು ತರಕಾರಿ ವ್ಯಾಪಾರಸ್ಥರ ಹಾಗೂ ಮಾರುಕಟ್ಟೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮ ಸ್ತುತ್ಯಾರ್ಹವಾದದು ಎಂದರು.
ಮೆಳವಂಕಿ ಜಿಪಂ ಸದಸ್ಯೆ ಶಶಿಕಲಾ ಸಣ್ಣಕ್ಕಿ, ಕೌಜಲಗಿ ಜಿಪಂ ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ ಮುಖ್ಯತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಸ್ಥಳೀಯ ಶ್ರೀ ಕನಕ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಮಂಜುನಾಥ ಸಣ್ಣಕ್ಕಿ, ಗ್ರಾಪಂ ಮಾಜಿ ಅಧ್ಯಕ್ಷ ನೀಲಪ್ಪ ಕೇವಟಿ, ರಾಯಪ್ಪ ಬಳೊಲದಾರ, ಗಣ್ಯರು, ಶಾಲೆಯ ಮುಖ್ಯೋಪಾಧ್ಯಯರು, ವಿದ್ಯಾರ್ಥಿ ಪಾಲಕರು, ಶಿಕ್ಷಕರು, ಸ್ಥಳೀಯರು, ಇತರರು ಇದ್ದರು.

Related posts: