ಕೌಜಲಗಿ: ಕೌಜಲಗಿಯಲ್ಲಿ ಬಸವರಾಜ ಶ್ರೀಗಳಿಂದ ವಿಶೇಷ ಲಿಂಗಪೂಜಾಚರಣೆ
ಕೌಜಲಗಿಯಲ್ಲಿ ಬಸವರಾಜ ಶ್ರೀಗಳಿಂದ ವಿಶೇಷ ಲಿಂಗಪೂಜಾಚರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಕೌಜಲಗಿ ಫೆ 25 :
ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದ ಜೋಡುನಂದಿ ವಿಗ್ರಹ ಸನ್ನಿಧಿಯಲ್ಲಿ ಶುಕ್ರವಾರ ಮಹಾಶಿವರಾತ್ರಿ ನಿಮಿತ್ತ ಕಳ್ಳಿಗುದ್ದಿ-ಕಪರಟ್ಟಿಯ ಬಸವರಾಜ ಹಿರೇಮಠ ಮಹಾಸ್ವಾಮಿಗಳಿಂದ ವಿಶೇಷ ಬಿಲ್ವಾರ್ಚನ ಕಾರ್ಯಕ್ರಮ ಜರುಗಿತು.
ಬೆಳಿಗ್ಗೆ ನಂದಿ ವಿಗ್ರಹಗಳಿಗೆ ಪಂಚಾಮೃತ ಅಭಿಷೇಕ ಪೂಜಾ ವಿಧಿ-ವಿಧಾನಗಳು ಏರ್ಪಟ್ಟವು. ಪೂಜೆಯ ನೇತೃತ್ವ ವಹಿಸಿದ್ದ ಬಸವರಾಜ ಸ್ವಾಮಿಗಳಿಗೆ ಭಕ್ತರು ರುದ್ರಾಕ್ಷಿ ಕಿರೀಟ ಧಾರಣ ಮಾಡಿ ಅಂಗೈಯಲ್ಲಿರುವ ಲಿಂಗಕ್ಕೆ ವಿಧವಿಧ ಪುಷ್ಪಾದಿಗಳಿಂದ ಪೂಜೆಗೈದರು. ಸುಮಾರು 3 ಗಂಟೆಗಳ ಕಾಲ ಶ್ರೀಗಳು ಪಟ್ಟಣದ ವಿವಿಧ ಭಕ್ತರಿಂದ ಅಷ್ಟೋತ್ತರ ಮಂತ್ರಗಳೊಂದಿಗೆ ಲಿಂಗಪೂಜೆ ಮಾಡಿಸಿದರು. 3 ಗಂಟೆಗಳ ಕಾಲ ರುದ್ರಾಕ್ಷಿ ಕಿರೀಟ ಧಾರಿಯಾಗಿ ಪದ್ಮಾಸನದಲ್ಲಿ ಏಕಚಿತ್ತತೆಯಿಂದ ಆರೂಢರಾಗಿದ್ದ ಬಸವರಾಜ ಶ್ರೀಗಳು ಪೂಜಾ ಕಾರ್ಯಕ್ರಮದ ಅಂತ್ಯದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿ, ಭಕ್ತ ಬಾಹ್ಯಪ್ರಪಂಚದ ತೊಳಲಾಟ-ಬಳಲಾಟದಲ್ಲಿಯೇ ಹೆಚ್ಚು ಕಾಲ ಕಳೆಯುವುದಕ್ಕಿಂತ ಅಂತರಂಗದ ಆನಂದತೆಗಾಗಿ ಸ್ವಲ್ಪ ಸಮಯ ಮೀಸಲಿಡಬೇಕು. ಬಹಿರಂಗದ ಆನಂದತೆಗಿಂತ ಅಂತರಂಗದ ಆನಂದತೆ ಭಕ್ತನಿಗೆ ಶ್ರೇಷ್ಠವಾಗಿದೆ. ಅದಕ್ಕೋಸ್ಕರ ತಮ್ಮ ಮನಸ್ಸನ್ನು ಏಕಾಗೃತೆಗೊಳಿಸಿಕೊಂಡು ಪೂಜಾ ವಿಧಾನದ ಮೂಲಕ ಶಿವನಲ್ಲಿ ಧ್ಯಾನಸ್ಥರಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಕಾಂತ ಪರುಶೆಟ್ಟಿ, ಶಿವಾನಂದ ಲೋಕನ್ನವರ, ನೀಲಪ್ಪ ಕೇವಟಿ, ಗಂಗಾಧರ ಲೋಕನ್ನವರ, ಬಸವರಾಜ ಸಜ್ಜನ, ಬಸಪ್ಪ ಕುಂದರಗಿ, ಅಶೋಕ ಹೊಸಮನಿ, ಬಸವರಾಜ ಹಿರೇಮಠ, ಅಜಯ ಲೋಕನ್ನವರ, ಮಲ್ಲಿಕಾರ್ಜುನ ವಿರಕ್ತಮಠ, ಸೊಗಲದ ಹಾಗೂ ಊರಿನ ಶಿವಭಕ್ತರು ಶ್ರೀಗಳ ಮಾರ್ಗದರ್ಶನದಲ್ಲಿ ಲಿಂಗಕ್ಕೆ ಪೂಜೆ ಸಲ್ಲಿಸಿದರು.