ಗೋಕಾಕ:ಇನ್ನು ದೊರೆಯದ ನೆರೆ ಪರಿಹಾರ : ಸರ್ವೆ ಕಾರ್ಯದಲ್ಲಿ ಅಧಿಕಾರಿಗಳು ತಾರತಮ್ಯ ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ
ಇನ್ನು ದೊರೆಯದ ನೆರೆ ಪರಿಹಾರ : ಸರ್ವೆ ಕಾರ್ಯದಲ್ಲಿ ಅಧಿಕಾರಿಗಳು ತಾರತಮ್ಯ ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 26 :
ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಪರಿಹಾರ ವಿತರಣೆ ಹಾಗೂ ಸರ್ವೆ ಕಾರ್ಯದಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದು ಅವುಗಳನ್ನು ಶೀಘ್ರದಲ್ಲಿಯೇ ಸರಿಪಡಿಸಿ ನೋಂದವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ತಾಲೂಕಿನ ತಳಕಟ್ನಾಳ ಗ್ರಾಮದ ಗ್ರಾಮಸ್ಥರು ತಹಶೀಲದಾರರಿಗೆ ಮನವಿ ಸಲ್ಲಿಸಿದರು.
ಮಂಗಳವಾರದಂದು ನಗರದ ಮಿನಿ ವಿಧಾನಸೌಧದ ಮುಂದೆ ತಾ.ಪಂ. ಸದಸ್ಯ ಲಕ್ಷ್ಮಣ ಮುಸಗುಪ್ಪಿ ನೇತೃತ್ವದಲ್ಲಿ ಸೇರಿದ ನೂರಾರು ತಳಕಟ್ನಾಳ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ಮಿನಿ ವಿಧಾನಸೌಧದ ಒಳಗೆ ಹೋಗುವ ಮುಖ್ಯ ಗೇಟ್‍ನ್ನು ಬಂದ್ ಮಾಡಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ತೀವ್ರತೆಯನ್ನು ಅರಿತು ಉಪತಹಶೀಲದಾರ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ಪ್ರತಿಭಟನಾಕಾರರು ಸ್ಥಳಕ್ಕೆ ಕೂಡಲೇ ತಹಶೀಲದಾರರು ಆಗಮಿಸಬೇಕೆಂದು ಒತ್ತಾಯಿಸಿದರು. ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರು ಜಿಲ್ಲಾಧಿಕಾರಿಗಳು ಕರೆದ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಪ್ರತಿಭಟನೆ ಮುಂದುವರೆಯುತ್ತಿದ್ದಂತೆ ಪ್ರತಿಭಟನಾಕಾರರೊಂದಿಗೆ ಸೇರಿದ ರೈತ ಸಂಘದ ಮುಖಂಡರು, ಪ್ರತಿಭಟನೆ ನಡೆಸಿ ಒಂದು ವಾರದೊಳಗಾಗಿ ನೆರೆ ಸಂತ್ರಸ್ತರಿಗೆ ಪರಿಹಾರ ದೊರಕದಿದ್ದಲ್ಲಿ ರೈತ ಸಂಘದ ನೇತೃತ್ವದಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸುವುದಗಾಗಿ ಉಪತಹಶೀಲದಾರ ವಾಯ್.ಎಲ್.ಡಬ್ಬನ್ನವರ ಅವರಿಗೆ ತಿಳಿಸಿ ಹಿರಿಯ ಅಧಿಕಾರಗಳ ಗಮನಕ್ಕೆ ತರುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಹಿಂಪಡೆದರು.
ಕಳೆದ ವರ್ಷ ಅಗಸ್ಟ್ ತಿಂಗಳಲ್ಲಿ ಬಂದ ಮಹಾಪೂರದಿಂದ ತಳಕಟ್ನಾಳ ಗ್ರಾಮದಲ್ಲಿ ಹಲವಾರು ಮನೆಗಳು ಬಿದ್ದಿದ್ದು, ಅವುಗಳ ಸರ್ವೆ ಮಾಡುವ ಕಾರ್ಯದಲ್ಲಿ ಅಧಿಕಾರಿಗಳು ತಾರತ್ಯಮ ಮಾಡಿದ್ದು, ಪರಿಹಾರಧನ ವಿತರಣೆಯಲ್ಲೂ ಕೂಡಾ ಸಂತ್ರಸ್ತರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೂಡಾ ನಮಗೆ ನ್ಯಾಯ ದೊರಕಿರುವದಿಲ್ಲ. ಕೂಡಲೇ ತಹಶೀಲದಾರ ಅವರು ಗ್ರಾಮಕ್ಕೆ ಆಗಮಿಸಿ ಹಾನಿಗೊಳಗಾದ ಸ್ಥಳಗಳ ಬಗ್ಗೆ ಪರಿಶೀಲನೆ ನಡೆಸಿ ನೆರೆ ಸಂತ್ರಸ್ತರಿಗೆ ನ್ಯಾಯವನ್ನು ಒದಗಿಸುವ ಕಾರ್ಯವನ್ನು ಮಾಡಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಗಣಪತಿ ಈಳಿಗೇರ, ಮಾರುತಿ ಸನದಿ, ರಮೇಶ ಗೂದಿಗೊಪ್ಪ, ಪರಶುರಾಮ ಹಳ್ಳಿ, ಬಾಳೇಶ ಬಾಗೇವಾಡಿ, ತಳಕಟ್ನಾಳ ಗ್ರಾಮದ ಮುಖಂಡರಾದ ಹಣಮಂತ ಹುಲಕುಂದ, ರಮೇಶ ಭಜಂತ್ರಿ, ನಾಗಪ್ಪ ಮಾದರ, ಆರ್.ವಿ.ದೊಡಮನಿ, ತಾಯವ್ವ ನಂದಿ, ರಾಮಪ್ಪ ನಾಯಿಕ, ಅರ್ಜುನ ನಂದಿ, ದುಂಡಪ್ಪ ಗುದಗನ್ನವರ, ಹೊಳೆಪ್ಪ ದೊಡಮನಿ, ಅಶೋಕ ಕಂಬಾರ, ಸಂಜು ಬಾಗೇವಾಡಿ, ನಿಂಗಪ್ಪ ಗೋಟುರ, ಲಖನ ಹುಲಕುಂದ, ರಾಜು ದೊಡಮನಿ, ರವಿ ಕಂಬಾರ ಸೇರಿದಂತೆ ನೂರಾರು ಮಹಿಳೆಯರು ಸೇರಿದಂತೆ ಅನೇಕರು ಇದ್ದರು.
ಬಾಕ್ಸ ಐಟಂ-1 ಪ್ರತಿಭಟನೆಯ ನಡೆದ ಸಂದರ್ಭದಲ್ಲಿ ತಾಲೂಕಿನ ಲೋಳಸೂರ ಗ್ರಾಮದ ರುಕ್ಸಾನಾ ಪಟೇಲ್ ಎಂಬ ಸಂತ್ರಸ್ತೆ ನೆರೆ ಪರಿಹಾರದ ಹಣಕ್ಕಾಗಿ ನಮಗೆ ಅಲೆದಾಡಿ ಸಾಕಾಗಿದೆ. ನಮಗೆ ಪರಿಹಾರ ಸಿಗುತ್ತಿಲ್ಲ ಎಂದು ಆರೋಪಿಸಿ ಉಪತಹಶೀಲದಾರರ ಮುಂದೆ ಬೊಬ್ಬೆ ಹೊಡೆದು ತನ್ನ ಆಕ್ರೋಶವನ್ನು ಹೊರಹಾಕಿದಳು. ಅವಳ ಬೊಬ್ಬೆ ಹೊಡೆಯುತ್ತಿರುವ ವಿಡಿಯೋದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲೆಡೆ ತಾಲೂಕಾಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಬಾಕ್ಸ್ ಐಟಂ-2: ಪ್ರತಿಭಟನೆಯಲ್ಲಿ ತಳಕಟ್ನಾಳ ಗ್ರಾಮದ ಹಣಮಂತ ಹುಲಕುಂದ ಎಂಬ ವೃದ್ಧನು ಮನೆ ಪರಿಹಾರಕ್ಕಾಗಿ ನಾವು ಅಲೆದಾಡಿ ಸಾಕಾಗಿದೆ. ನನ್ನ ಮಕ್ಕಳು ಸೇರಿದಂತೆ ನಮ್ಮ 4 ಮನೆಗಳು ಬಿದ್ದಿದ್ದು, ನಮಗೆ ನಯಾ ಪೈಸೆನೂ ಪರಿಹಾರ ಸಿಕ್ಕಿಲ್ಲ. ಈಗ ನಾವು ಮಕ್ಕಳು ಮರಿಗಳೊಂದಿಗೆ ಗುಡಿಸಲು ವಾಸಿಗಳಾಗಿದ್ದೇವೆ. ಸರ್ಕಾರ ಕೂಡಲೇ ಎಚ್ಚೆತ್ತು ನಮಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.