RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ವಿರೋಧಿಗಳ ಮಾತು ಕೇಳದೆ ಚುರುಕಾಗಿ ಕಾರ್ಯನಿರ್ವಹಿಸಿ : ಅಧಿಕಾರಿಗಳಿಗೆ ಸಚಿವ ರಮೇಶ ವಾರ್ನಿಂಗ್

ಗೋಕಾಕ:ವಿರೋಧಿಗಳ ಮಾತು ಕೇಳದೆ ಚುರುಕಾಗಿ ಕಾರ್ಯನಿರ್ವಹಿಸಿ : ಅಧಿಕಾರಿಗಳಿಗೆ ಸಚಿವ ರಮೇಶ ವಾರ್ನಿಂಗ್ 

ವಿರೋಧಿಗಳ ಮಾತು ಕೇಳದೆ ಚುರುಕಾಗಿ ಕಾರ್ಯನಿರ್ವಹಿಸಿ : ಅಧಿಕಾರಿಗಳಿಗೆ ಸಚಿವ ರಮೇಶ ವಾರ್ನಿಂಗ್

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 29 :

ನಮ್ಮ ವಿರೋಧಿಗಳ ಮಾತುಗಳನ್ನು ಕೇಳದೆ ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರು ಸಮನ್ವಯತೆಯಿಂದ ಚುರುಕಾಗಿ ಗಟ್ಟಿಯಾಗಿ ನಿಂತು ಕಾರ್ಯನಿರ್ವಹಿಸಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಶನಿವಾರದಂದು ನಗರಸಭೆ ಸಭಾಂಗಣದಲ್ಲಿ ಗ್ರಾಮದೇವತೆಯರ ಜಾತ್ರಾ ನಿಮಿತ್ಯವಾಗಿ ಹಮ್ಮಿಕೊಂಡ ಪೂರ್ವಭಾಂವಿ ಸಭೆಯಲ್ಲಿ ನಗರಸಭೆ ಅಧಿಕಾರಿಗಳ ಹಾಗೂ ನಗರಸಭೆ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು  ಮಾತನಾಡಿದರು.
ಅಭಿವೃದ್ದಿ ಕಾರ್ಯದಲ್ಲಿ ನಮ್ಮ ವಿರೋಧಿಗಳು ನಮ್ಮ ತಪ್ಪುಗಳ ಬಗ್ಗೆ ಎತ್ತಿ ತೋರಿಸುವ ಕಾರ್ಯವನ್ನು ನಾವು ಸ್ವಾಗತಿಸುತ್ತೇವೆ. ಕಳೆದ 20 ವರ್ಷಗಳಿಂದ ಸಹೋದರ ಲಖನ್ ಜಾರಕಿಹೊಳಿ   ಆಡಳಿತದಿಂದ ನಗರಸಭೆ ಆಡಳಿತ ಹಾಳಾಗಿದ್ದ ಪರಿಣಾಮ ಉಪ-ಚುನಾವಣೆಯಲ್ಲಿ ನಮಗೆ ನಗರದಲ್ಲಿ ಕಡಿಮೆ ಮತಗಳು ಬಂದಿವೆ. ನಾವು ನಂಬಿದವರೇ ನಮಗೆ ಮೋಸ ಮಾಡಿದ್ದಾರೆ. ತಾವು ಮಾಡಿದ್ದ ತಪ್ಪನ್ನು ನಮ್ಮ ತಲೆಗೆ ಕಟ್ಟಿದ್ದಾರೆ. ಅವರು ಮಾಡಿದ ಅವ್ಯವಹಾರದ ಕರ್ಮಕಾಂಡದ ಬಗ್ಗೆ ತನಿಖೆ ನಡೆಸಲಾಗುವುದು. ಇಂಥವರಿಂದ ನಗರಸಭೆ ಅಧಿಕಾರಿಗಳು ಮತ್ತು ನಗರಸಭೆ ಸದಸ್ಯರು ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಸಚಿವರು ಸಹೋದರನ ವಿರುದ್ಧ ಹರಿಹಾಯ್ದರು.
    ಪ್ರಾಮಾಣಿಕವಾಗಿ ಜನರ ಸಮಸ್ಯೆಗಳಿಗೆ ಸ್ವಂದಿಸಿ ಕಾರ್ಯ ಮಾಡುವ ಅಧಿಕಾರಿಗಳು ಮಾತ್ರ ನಗರಸಭೆಯಲ್ಲಿ ಮುಂದುವರೆಯಬೇಕು. ಬಡವರಿಗೆ ಅನ್ಯಾಯವಾಗಲು ನಾವು ಬಿಡುವದಿಲ್ಲ,  ವಿರೋಧಿಗಳ ಮಾತು ಕೇಳಿ ಕಾರ್ಯಮಾಡುವ ಅಧಿಕಾರಿಗಳು ಜಾಗೆ ಖಾಲಿ ಮಾಡಿ, ಇನ್ನು ಮುಂದೆ ಇಲ್ಲಿ ಯಾವುದೇ ಅವ್ಯವಹಾರ ನಡೆದರೇ ಅದಕ್ಕೆ ಸಂಬಂಧಿಸಿದ ಅಧಿಕಾರಿಯನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದರು.
ಪ್ರತಿ 5 ವರ್ಷಗಳಿಗೊಮ್ಮೆ ಜರಗುವ ಗೋಕಾಕ ಗ್ರಾಮ ದೇವತೆಯರ ಜಾತ್ರೆಯು ಇದೆ ಜೂನ ತಿಂಗಳಲ್ಲಿ ಜರುಗಲಿದ್ದು, ಅಲ್ಲಿಯವರೆಗೆ ನಗರದಲ್ಲಿ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮಾಡಲಾಗುವದು. ಅಧಿಕಾರಿಗಳು ಸಹ ತಮ್ಮ ಮನೆ ಕೆಲಸ ಎಂದು ಭಾವಿಸಿ ಕುಡಿಯುವ ನೀರು, ರಸ್ತೆ, ಗಟಾರು, ಮೂವಿಂಗ ಟಾಯ್ಲೆಟ್ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳನ್ನು ಜನರಿಗೆ ತೊಂದರೆಯಾಗದ ರೀತಿಯಲ್ಲಿ ಒದಗಿಸಲು ಕ್ರಮ ವಹಿಸಬೇಕು.
ಪ್ರವಾಹದ ಸಂದರ್ಭದಲ್ಲಿ ಹಾನಿಗೊಳಗಾದ 24*7 ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿ ಮಾಡಿ ಬಾಕಿ ಉಳಿದ 3200 ಜನರಿಗೆ ನೀರಿನ ನಳಗಳ ಜೋಡನೆ ಕಾರ್ಯ ತ್ವರಿತವಾಗಿ ಜೋಡಿಸಬೇಕು. 24*7 ನೀರು ಪೂರೈಕೆಯ ಜವಾಬ್ದಾರಿ ಹೊತ್ತಿರುವ ಜೈನ್ ಕಂಪನಿಯ ವಿರುದ್ಧ ಅನೇಕ ದೂರುಗಳು ಬಂದಿವೆ. ಅವರಿಗೆ ತಪ್ಪುಗಳನ್ನು ತಿದ್ದಿಕೊಳ್ಳಲು ಸಮಯಾವಕಾಶ ನೀಡಿದರೂ ಯಾವುದೇ ಪ್ರಯೋಜನೆಯಾಗಿಲ್ಲ. ಬರುವ ಮಂಗಳವಾರ ಉನ್ನತ ಮಟ್ಟದ ಸಭೆಯನ್ನು ಕರೆದು ಇವರ ಮೇಲೆ ಕಾನೂನು ಕ್ರಮ ಜರುಗಿಸಿ ಇವರಿಗೆ ಕೊಕ್ ನೀಡಲು ಅಧಿಕಾರ ಮಟ್ಟದಲ್ಲಿ ಚಿಂತನೆ ನಡೆಸಲಾಗುವುದು. ಆದಷ್ಟು ಬೇಗ ಇದಕ್ಕೆ ತಾರ್ಕಿಕ ಅಂತ್ಯ ಹಾಡಲಾಗುವದು ಎಂದು  ಸಚಿವರು ಹೇಳಿದರು

ಶೀಘ್ರದಲ್ಲಿಯೇ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ: ಕಳೆದ ಒಂದುವರೆ ವರ್ಷಕ್ಕೂ ಹೆಚ್ಚು ಕಾಲ ನ್ಯಾಯಾಲಯದಲ್ಲಿ ಇದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಬರುವ ಮಾರ್ಚ್ 5 ರ ನಂತರ ಇತ್ಯರ್ಥಗೊಳ್ಳಲಿದ್ದು, ಆದಷ್ಟು ಬೇಗ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಿ ಗೋಕಾಕ ನಗರದ ಅಭಿವೃದ್ಧಿಗೆ ಪೂರಕವಾದಂತಹ ಕಾರ್ಯಗಳನ್ನು ಮಾಡಲಾಗುವದು. ಗೋಕಾಕ ನಗರಸಭೆಯನ್ನು ಮಾದರಿಯನ್ನಾಗಿ ಮಾಡಲು ನಗರ ಸಭೆ ಸದಸ್ಯರು ಕೂಡಾ ನಮ್ಮೊಂದಿಗೆ ಗಟ್ಟಿಯಾಗಿ ನಿಂತು ಸಾಥ ನೀಡಬೇಕೆಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.
ನಗರಸಭೆ ಸದಸ್ಯ ಎಸ್.ಎ.ಕೋತವಾಲ ಹಾಗೂ ಪೌರಾಯುಕ್ತ ಎಸ್.ಎಮ್.ಹಿರೇಮಠ ಅವರು ಮಾತನಾಡಿ ಗ್ರಾಮ ದೇವತೆಯರ ಜಾತ್ರೆಯಲ್ಲಿ ಯಾವುದೇ ರೀತಿಯ ತೊಂದರೆಗಳು ಆಗದಂತೆ ಮುಂಜಾಗೃತೆಯನ್ನು ವಹಿಸಲಾಗಿದ್ದು. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ನಗರಸಭೆ ಕಾರ್ಯನಿರತವಾಗಿದ್ದು. ಇನ್ನೂ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಳ್ಳಲು ಅನುದಾನದ ಕೊರತೆ ಇದ್ದು ಸರ್ಕಾರದ ಮಟ್ಟದಲ್ಲಿ ಸಚಿವರು ವಿಶೇಷ ಆಸಕ್ತಿಯನ್ನು ವಹಿಸಿ ಅನುದಾನ ಬಿಡುಗಡೆ ಮಾಡಿಸುವಂತೆ ಸಚಿವರಲ್ಲಿ ಒತ್ತಾಯಿಸಿದರು.
ಸಭೆಯಲ್ಲಿ ಕೆಯುಆಯ್‍ಡಿಎಫ್‍ಸಿ ಕಾರ್ಯನಿರ್ವಾಹಕ ಅಭಿಯಂತರ ಹಾದಿಮನಿ ಸೇರಿದಂತೆ ನಗರಸಭೆ ಅಧಿಕಾರಿಗಳು, ಸದಸ್ಯರು ಇದ್ದರು. ಎಮ್.ಎನ್.ಸಾಗರೆಕರ ಸ್ವಾಗತಿಸಿ ವಂದಿಸಿದರು.

Related posts: