ಘಟಪ್ರಭಾ:ಜನರ ನೆಮ್ಮದಿ ಕೆಡಸುತ್ತಿರುವ ಮಲ್ಲಾಪೂರ ಪಿ.ಜಿ ಗ್ರಾಮದ ನೆಮ್ಮದಿ ಕೇಂದ್ರ
ಜನರ ನೆಮ್ಮದಿ ಕೆಡಸುತ್ತಿರುವ ಮಲ್ಲಾಪೂರ ಪಿ.ಜಿ ಗ್ರಾಮದ ನೆಮ್ಮದಿ ಕೇಂದ್ರ
ವಿಶೇಷ ವರದಿ : ದಿಲಾವರ ಬಾಳೇಕುಂದ್ರಿ . ಘಟಪ್ರಭಾ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಮಾ 4 :
ಇಲ್ಲಿಯ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಆವರಣದಲ್ಲಿರುವ ನೆಮ್ಮದಿ ಕೇಂದ್ರದ ಸಿಬ್ಬಂದಿ ಜನರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ.
ಈ ನೆಮ್ಮದಿ ಕೇಂದ್ರದ ಸಿಬ್ಬಂದಿ ಜನರ ನೆಮ್ಮದಿ ಕೆಡಿಸಿದಂತಾಗಿದ್ದು, ದಿನನಿತ್ಯ ನೂರಾರು ಜನ ಇಲ್ಲಿ ತಮ್ಮ ಜಮೀನಿನ ಉತಾರ ಜಾತಿ ಆದಾಯ ಪ್ರಮಾಣ ಪತ್ರ, ಜನನ ಮತ್ತು ಮರಣ ದಾಖಲೆಗಳು ಸೇರಿದಂತೆ ಅನೇಕ ಸರ್ಕಾರಿ ದಾಖಲೆಗಳನ್ನು ಪಡೆಯಲು ಬರುತ್ತಾರೆ.
ಆದರೆ ಇಲ್ಲಿ ಎನ್.ಜಿ.ಓ ಮೂಲಕ ಕೆಲಸ ಮಾಡುತ್ತಿರುವ ರೇವಪ್ಪ ಖಡಕಬಾವಿ ಎಂಬುವವರು ಜನರಿಂದ ಬೇಕಾ ಬಿಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ. ಜನನ ಮತ್ತು ಮರಣ ಪ್ರಮಾಣ ಪತ್ರಕ್ಕೆ ಸರ್ಕಾರ 10 ರೂಪಾಯಿ ಶುಲ್ಕ ನಿಗದಿಪಡಿಸಿದೆ ಆದರೆ ಇವರು ಜನರಿಂದ 30 ರೂಪಾಯಿ ವಸೂಲಿ ಮಾಡುತ್ತಿದ್ದಾರೆ.
ಅದಲ್ಲದೆ ಒಂದೇ ದಾಖಲಾತಿಯ ಹೆಚ್ಚು ಪ್ರತಿಗಳು ಅಗತ್ಯವಿರುವವರು ಪ್ರತಿ ಜನ್ಮ ಅಥವಾ ಮರಣ ದಾಖಲೆಗೆ 30 ರೂ.ಗಳನ್ನು ಕೊಡಬೇಕು. ಒಂದು ವೇಳೆ 10 ಪ್ರತಿಗಳು ಅಗತ್ಯವಿರುವವರು 100 ರೂ.ಗಳ ಬದಲಾಗಿ 300 ರೂಪಾಯಿಗಳನ್ನು ನೀಡಬೇಕಾಗಿದೆ.
ಇತ್ತೀಚಿಗೆ ಒರ್ವ ವ್ಯಕ್ತಿ ತಮ್ಮ ತಂದೆಯ ಮರಣ ಪ್ರಮಾಣ ಪತ್ರವನ್ನು ಪಡೆಯಲು ಹೋದಾಗ 10 ಪ್ರತಿಗಳಿಗೆ 300 ರೂ.ಗಳನ್ನು ತೆಗೆದುಕೊಂಡಿದ್ದಾರೆ. ನಂತರ ಸದರಿ ಪ್ರಮಾಣ ಪತ್ರದಲ್ಲಿ ಕೆಲವು ತಿದ್ದುಪಡಿ ಇದ್ದಕಾರಣ ಮತ್ತೆ ಅದೇ ಪ್ರಮಾಣ ಪತ್ರ ನೀಡಲು ನಮ್ಮಿಂದ 300 ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಸಾರ್ವಜನಿಕರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ . ಇದಲ್ಲದೆ ಇತರೆ ದಾಖಲಾತಿಗಳಿಗೂ ನಿಗದಿಕ್ಕಿಂತ ಹೆಚ್ಚು ಹಣ ವಸೂಲು ಮಾಡಲಾಗುತ್ತದೆ. ಇದರಿಂದ ಬೇಸತ್ತಿರುವ ಜನ ನೆಮ್ಮದಿ ಕೇಂದ್ರಕ್ಕೆ ಮತ್ತು ಇದರ ಮೇಲಾಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಕೇಂದ್ರದಲ್ಲಿ ಯಾವುದೇ ದರ ಪಟ್ಟಿಯ ನಾಮಫಲಕವನ್ನು ಹಾಕಿಲ್ಲ. ಅದಲ್ಲದೇ ನೆಮ್ಮದಿ ಕೇಂದ್ರಕ್ಕೂ ನಾಮಫಲಕ ಇಲ್ಲ. ಮೇಲಾಧಿಕಾರಿಗಳು ಈ ಕೇಂದ್ರದ ಬಗ್ಗೆ ನಿರ್ಲಕ್ಷ್ಯ ತೋರಿರುವುದು ಮತ್ತು ಸಿಬ್ಬಂದಿ ಈ ರೀತಿ ರಾಜಾರೋಷವಾಗಿ ಹಣ ವಸೂಲಿ ಮಾಡುತ್ತಿರುವುದನ್ನು ಗಮನಿಸಿದರೆ ಈ ಅಕ್ರಮದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಕೈವಾಡ ಇರಬಹುದೆಂದು ಜನ ಆಡಿಕೊಳ್ಳುತ್ತಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಗೋಕಾಕ ತಹಶೀಲ್ದಾರರು ಈ ನೆಮ್ಮದಿ ಕೇಂದ್ರದಲ್ಲಿ ನಡೆಯುತ್ತಿರುವ ಜನರ ಸುಲಿಗೆಯನ್ನು ತಡೆಯಬೇಕು ಅಂತಾ ಸಾರ್ವಜನಿಕರ ಆಗ್ರಹವಾಗಿದೆ.
“ನೆಮ್ಮದಿ ಕೇಂದ್ರದ ಸಿಬ್ಬಂದಿ ಎನ್.ಜಿ.ಓ ಮೂಲಕ ಬಂದಿರುತ್ತಾರೆ. ಜನರಿಂದ ನಿಗದಿಕ್ಕಿಂತ ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಹಾಗೇನಾದರೂ ಕಂಡು ಬಂದಲ್ಲಿ ತಪ್ಪಿತಸ್ತರ ಮೇಲೆ ಕ್ರಮ ಕೈಗೊಳ್ಳಲಾಗುವುದು”.
ತಳವಾರ, ಉಪ ತಹಶೀಲ್ದಾರರು ಗೋಕಾಕ
“ಮಲ್ಲಾಪೂರ ಪಿ.ಜಿ ನೆಮ್ಮದಿ ಕೇಂದ್ರದಲ್ಲಿ ಜನರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗುತ್ತಿದೆ. ಜನರಿಗೆ ದರಗಳು ಗೊತ್ತಿಲ್ಲದ ಕಾರಣ ಜನ ಮೋಸ ಹೋಗುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು”.
ಅಪ್ಪಾಸಾಬ ಮುಲ್ಲಾ, ತಾಲೂಕಾ ಅಧ್ಯಕ್ಷರು ಕನ್ನಡ ಸೇನೆ