ಗೋಕಾಕ:ಬಿಎಸ್‍ವೈರಿಂದ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಬಜೆಟ್ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹರ್ಷ.
ಬಿಎಸ್‍ವೈರಿಂದ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಬಜೆಟ್ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹರ್ಷ.
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 5 :
ಜಗಕ್ಕೆ ಅನ್ನ ನೀಡುವ ಅನ್ನದಾತನ ಹೆಸರಿನಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ನೇಗಿಲಯೋಗಿ ಬಿ.ಎಸ್. ಯಡಿಯೂರಪ್ಪನವರು ಇಂದು ಏಳನೇ ಬಾರಿಗೆ ಮಂಡಿಸಿರುವ ಮುಂಗಡ ಪತ್ರವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ದೊರೆತಿದೆ ಎಂದು ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಂಡಿಸಿರುವ 2020-21ನೇ ಸಾಲಿನ ಮುಂಗಡ ಪತ್ರಕ್ಕೆ ತಮ್ಮ ಪ್ರತಿಕ್ರಿಯೆ ನೀಡಿರುವ ಅವರು, ಎಲ್ಲ ವರ್ಗಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಿದ್ದಾರೆಂದು ಹೇಳಿದರು.
ಎಲ್ಲ ಕ್ಷೇತ್ರಗಳಿಗೆ ವಿಶೇಷ ಆಧ್ಯತೆ ನೀಡಿರುವ ಮುಖ್ಯಮಂತ್ರಿಗಳು ಕೃಷಿ ಕ್ಷೇತ್ರದ ಅಭ್ಯುದಯಕ್ಕಾಗಿ ವಿಶೇಷವಾಗಿ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಒಟ್ಟಾರೆ 32,259 ಕೋಟಿ ರೂ.ಗಳ ಅನುದಾನ ಘೋಷಿಸಿದ್ದಾರೆ. ರಾಜ್ಯದಲ್ಲಿ 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೊಸ ಏತ ನೀರಾವರಿ ಯೋಜನೆಗಳ ಅನುಷ್ಠಾನ, 2020-21ನೇ ಸಾಲಿನಲ್ಲಿ ಕಳಸಾ-ಬಂಡೂರಿ ನಾಲಾ ಯೋಜನೆಗೆ 500 ಕೋಟಿ ರೂ. ಅನುದಾನ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ 2600 ಕೋಟಿ ರೂ. ಮೀಸಲು, ಸಣ್ಣ ಮತ್ತು ಅತೀ ಸಣ್ಣ ಪ್ರಮಾಣದ ರೈತರಿಗೆ ಪ್ರತಿ ವರ್ಷ 10 ಸಾವಿರ ರೂ.ಗಳ ಸಹಾಯಧನ, ಮಣ್ಣು, ನೀರು ಪರೀಕ್ಷೆ ಮತ್ತು ರೈತರಿಗೆ ತಾಂತ್ರಿಕ ನೆರವು ನೀಡಲು ಸಂಚಾರಿ ಕೃಷಿ ಹೆಲ್ತ ಕ್ಲಿನಿಕ್, ಸಾವಯವ ಕೃಷಿ ಪ್ರೋತ್ಸಾಹಧನಕ್ಕೆ 200 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.
ಈ ಬಾರಿ ಒಟ್ಟು 2.37 ಲಕ್ಷ ಕೋಟಿ ರೂ. ಗಾತ್ರದ ಮುಂಗಡ ಪತ್ರ ಮಂಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು, ಜನಪರ ಹಾಗೂ ಅಭಿವೃದ್ಧಿಗೆ ಪೂರಕವಾದ ಮುಂಗಡ ಪತ್ರವನ್ನು ಮಂಡಿಸಿ ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಿಕೊಟ್ಟಿದ್ದಾರೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿ, ಸ್ವಾಗತಿಸಿದ್ದಾರೆ.