ಘಟಪ್ರಭಾ:ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಬೆಳೆಸಿಕೊಳ್ಳಬೇಕು : ದಯಾನಂದ ಬೆಳಗಾವಿ ಶರಣರು
ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಬೆಳೆಸಿಕೊಳ್ಳಬೇಕು : ದಯಾನಂದ ಬೆಳಗಾವಿ ಶರಣರು
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಮಾ 5 :
ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ದಯಾನಂದ ಬೆಳಗಾವಿ ಶರಣರು ಹೇಳಿದರು.
ಗುರುವಾರ ಸಮೀಪದ ಶಿಂದಿಕುರಬೇಟ ಗ್ರಾಮದ ಡಾ: ಅಂಬೇಡ್ಕರ ಸಮತಾ ಶಿಕ್ಷಣ ಸಮಿತಿಯ ಎಸ್‍ಎಚ್‍ಎಸ್ ಮಾಧ್ಯಮಿಕ ಶಾಲೆಯ 30ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಮಕ್ಕಳಿಗಾಗಿ ಆಸ್ತಿ ಮಾಡದೇ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವ ಜವಾಬ್ದಾರಿಯನ್ನು ಪಾಲಕರು ಬೆಳೆಸಿಕೊಳ್ಳಬೇಕು. ಶಿಕ್ಷಕರು, ವಿದ್ಯಾರ್ಥಿಗಳ ಸಾಮಥ್ರ್ಯದ ಅನುಗುಣವಾಗಿ ಶಿಕ್ಷಣ ನೀಡಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಮಕ್ಕಳಿಗೆ ನೀಡಿದಾಗ ಮಾತ್ರ ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳಬಹುದು. ಬರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎದೆಗುಂದದೆ ಧೈರ್ಯದಿಂದ ಪರೀಕ್ಷೆಯನ್ನು ಬರೆಯಿರಿ. ಉನ್ನತ ವ್ಯಾಸಂಗ ಪಡೆದು ಉನ್ನತ ಹುದ್ದೆಯನ್ನು ಗಿಟ್ಟಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಈ ಶಾಲೆಯಲ್ಲಿ ಹಲವಾರು ವರ್ಷಗಳಿಂದ ಶಿಕ್ಷಕರಾಗಿ ಉಚಿತವಾಗಿ ಸೇವೆ ಸಲ್ಲಿಸಿದ ಭೀಮಪ್ಪ ಕಳಸನ್ನವರ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡಾ ಚಟುವಟಿಕೆಯಲ್ಲಿ ವಿಜೇತಗೊಂಡ ವಿದ್ಯಾರ್ಥಿಗಳಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ವಿಠ್ಠಲದೇವರ ದೇವಋಷಿಗಳಾದ ಮುರೇಪ್ಪ ಪೂಜೇರಿ ವಹಿಸಿದ್ದರು. ಅಧ್ಯಕ್ಷತೆಯನ್ನು ಜ್ಯೋತೆಪ್ಪ ಬಂತಿ ವಹಿಸಿದ್ದರು. ವೇದಿಕೆ ಮೇಲೆ ಮಾರುತಿ ಜಾಧವ, ಮಹಾಂತೇಶ ಹಳ್ಳಿ, ನಾಗಲಿಂಗ ಪೋತದಾರ, ಬಿ.ಎಂ.ಕಳಸನ್ನವರ, ವಿಠ್ಠಲ ಕಾಶಪ್ಪಗೋಳ, ರಾಮಪ್ಪ ಕಟ್ಟಿಕಾರ, ಬಾಬು ಫಣಿಬಂದ, ಮಲ್ಲಪ್ಪ ಬೋಳನೆತ್ತಿ, ರಾಜು ನಿಲಜಗಿ, ವಿಠ್ಠಲ ಹೊನಕುಪ್ಪಿ, ಎಂ.ಆರ್.ಕಡಕೋಳ, ಮಿಟ್ಟುಸಾಬ ಬಾಗವಾಲೆ,ಸಿದ್ದಪ್ಪ ಸತ್ತಿಗೇರಿ ಸೇರಿದಂತೆ ಇತರರು ಇದ್ದರು.
ಪಿ.ಎಚ್.ಗೋಸಬಾಳ ಸ್ವಾಗತಿಸಿದರು. ಎಂ.ಎಸ್.ಬೆಳಗಲಿ ನಿರೂಪಿಸಿದರು. ಎಸ್.ಎನ್.ವಡರಟ್ಟಿ ವಂದಿಸಿದರು.