ಗೋಕಾಕ:ಕೊರೋನಾ ವೈರಸ್ ಬಗ್ಗೆ ಜಾಗೃತಿ ವಹಿಸಿ : ಜೆ.ಡಿ.ಎಸ್. ಮುಖಂಡ ಅಶೋಕ ಪೂಜಾರಿ ವಿನಂತಿ
ಕೊರೋನಾ ವೈರಸ್ ಬಗ್ಗೆ ಜಾಗೃತಿ ವಹಿಸಿ : ಜೆ.ಡಿ.ಎಸ್. ಮುಖಂಡ ಅಶೋಕ ಪೂಜಾರಿ ವಿನಂತಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ 27:
ಮನುಕುಲದ ಅಸ್ಥಿತ್ವವನ್ನೇ ಪ್ರಶ್ನಿಸುವಂತಹ ರೀತಿಯಲ್ಲಿ ಭಯ ಸೃಷ್ಠಿಸಿರುವ ಮಹಾಮಾರಿ ಕೊರೋನಾ (ಕೊವಿಡ್19) ಎಂಬ ವೈರಸ್ ರೋಗ ಈ ಶತಮಾನ ಕಂಡ ಬೀಕರ ರೋಗಾಣುವಾಗಿದ್ದು, ಅದಕ್ಕೆ ಸೂಕ್ತ ಚಿಕಿತ್ಸೆಯ ಔಷದೋಪಚಾರ ಪರಿಹಾರ ಸಿಗದ ಈ ಸಂದರ್ಭದಲ್ಲಿ ಸರಕಾರ ಸೂಚಿಸಿರುವಂತೆ ಸ್ವಯಂ ದಿಗ್ಭಂದನೆಯಿಂದ ಮಾತ್ರ ನಮ್ಮನ್ನು ನಾವು ವೈರಸ್‍ದಿಂದ ರಕ್ಷಿಸಿಕೊಳ್ಳಲು ಸಾಧ್ಯವೆಂಬ ವಾಸ್ತವ ಸತ್ಯವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ. ಅದೇ ಕಾರಣದಿಂದ ಇದು ಕೇವಲ ಸರಕಾರದ ನಿರ್ದೇಶನ ಅಥವಾ ಆದೇಶವೆಂಬ ಭ್ರಮೆಯಿಂದ ಹೊರಬಂದು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮಾಡಬೇಕಾದ ಅನಿವಾರ್ಯ ಕಾರ್ಯ ಎಂಬ ಭಾವನೆಯಿಂದ ಕಾರ್ಯಪ್ರವೃತ್ತರಾಗಬೇಕೆಂದು ಜೆ.ಡಿ.ಎಸ್. ಮುಖಂಡ ಅಶೋಕ ಪೂಜಾರಿ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಅವರು ಇತ್ತೀಚಿನ ಶತಮಾನಗಳಲ್ಲಿ ಇಡೀ ವಿಶ್ವವೇ ಕರೋನಾ ವೈರಸ್ ಬೀತಿಗೆ ಒಳಗಾಗಿದೆ. ವೈಜ್ಞಾನಿಕವಾಗಿ ಮುಂದುವರೆದ ದೇಶಗಳೇ ಈ ವೈರಸ್‍ದಿಂದ ತತ್ತರಿಸಿದ್ದು, ಸೂಕ್ತ ಔಷದೋಪಚಾರ ಕಂಡು ಹಿಡಿಯಲು ಹರಸಾಹಸ ನಡೆಸುತ್ತಿದ್ದರೂ ಸಹ ಇನ್ನೂ ಪ್ರಯೋಜನವಾಗಿಲ್ಲ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಸಹ ದಿನನಿತ್ಯ ಅನೇಕ ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಕೇವಲ ಸರಕಾರದ ಸಿಬ್ಬಂದಿಯಿಂದ ಮಾತ್ರ ಸೂಕ್ತ ಪರಿಹಾರದ ಕಾರ್ಯಗಳನ್ನು ಕೈಗೊಳ್ಳುವದು ಕಷ್ಟಸಾಧ್ಯವಾಗಿದೆ. ಅದೇ ಕಾರಣದಿಂದ ಯಾವುದೇ ತರಹದ ಸರಕಾರದ ಸಹಾಯ ಸೌಲಭ್ಯ ನಿರೀಕ್ಷಿಸದೇ ವೈಧ್ಯಕೀಯ ಇಲಾಖೆಯ ಸೂಕ್ತ ನಿರ್ದೇಶನಗಳನ್ನು ಪಾಲಿಸಿ ಸ್ವಯಂ ಪ್ರೇರಣೆಯಿಂದ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಲು ಮುಂದೆಬರುವ ಸೇವಾ ಸಂಸ್ಥೆಗಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಕುರಿತು ಸರಕಾರ ಮತ್ತು ಜಿಲ್ಲಾಢಳಿತ ಚಿಂತನೆ ಮಾಡಬೇಕಾದ ಅವಶ್ಯಕತೆಯಿದೆ ಎಂದು ಅವರು ಸರಕಾರವನ್ನು ಕೋರಿದ್ದಾರೆ.
ತಮ್ಮ ಜೀವನದ ಸುರಕ್ಷತೆಯನ್ನು ಪರಿಗಣಿಸಿ ಅನೇಕ ಆಸ್ಪತ್ರೆಗಳು, ವೈಧ್ಯರು ಮತ್ತು ಸಿಬ್ಬಂದಿ ರೋಗಿಗಳ ಉಪಚಾರಕ್ಕೆ ಹಿಂದೇಟು ಹಾಕುತ್ತಿವೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿದ್ದು, ಈ ಕುರಿತು ಖಾಸಗಿ ಆಸ್ಪತ್ರೆಗಳು, ವೈಧ್ಯರು ಮತ್ತು ಸಿಬ್ಬಂದಿ ತಮ್ಮ ನಿಷ್ಕಾಮ ಸೇವೆಯಿಂದ ಮಾನವೀಯತೆಯನ್ನು ಮೆರೆಯಬೇಕೆಂದು ವಿನಂತಿಸಿದ್ದಾರೆ.