ಮೂಡಲಗಿ:ಸಮೀಪದ ಸುಣಧೋಳಿ ಗ್ರಾಮದ ಶ್ರೀ ಜಡಿಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ರದ್ದು : ಶ್ರೀ ಅಭಿನವ ಶಿವಾನಂದ ಸ್ವಾಮಿಜೀ
ಸಮೀಪದ ಸುಣಧೋಳಿ ಗ್ರಾಮದ ಶ್ರೀ ಜಡಿಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ರದ್ದು : ಶ್ರೀ ಅಭಿನವ ಶಿವಾನಂದ ಸ್ವಾಮಿಜೀ
ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಮಾ 29 :
ಸಮೀಪದ ಸುಣಧೋಳಿಗ್ರಾಮದ ಪವಾಡ ಪುರುಷ ಶ್ರೀ ಜಡಿಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ರದ್ದು ಮಾಡಲಾಗಿದೆ ಎಂದು ಶ್ರೀ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಅಭಿನವ ಶಿವಾನಂದ ಸ್ವಾಮಿಜೀ ತಿಳಿಸಿದ್ದಾರೆ.
ಅವರು ಶ್ರೀಮಠದಲ್ಲಿ ಹಮ್ಮಿಕೊಂಡ ಪ್ರಮುಖರ ಸಭೆಯಲ್ಲಿ ಮಾತನಾಡಿ, ಎಲ್ಲ ರಾಷ್ಟ್ರದಲ್ಲಿ ಮಹಾಮಾರಿ ಕೋರೊನ ವೈರಾಸ್ ವ್ಯಾಪಕವಾಗಿ ಹರಡುತ್ತಿದ್ದು ವೈರಾಸ್‍ನಿಂದ ಮರಣ ಮೃದಂಗ ಮುಂದುವರಿಯುತ್ತಿದ್ದಂತೆ ಎಚ್ಚೆತ್ತ ಸರ್ಕಾರ ರೋಗ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಜನತೆ ಉಳುವಿಗಾಗಿ ಜನತಾ ಕಪ್ರ್ಯೂ ಮೂಲಕ ದೇಶವನ್ನು 21ದಿನ ಲಾಕ್‍ಡೌನ್ ಮಾಡಿದ್ದು ಜನರ ಹಿತಶಕ್ತಿಗಾಗಿ ಪ್ರತಿಯೊಬ್ಬ ನಾಗರೀಕರು ಸರ್ಕಾರದ ಆದೇಶ ಪಾಲಿಸಬೇಕು, ಅದ್ದರಿಂದ ಸುಣಧೋಳಿ ಗ್ರಾಮದಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ಜರುಗುತ್ತಿದ್ದ ಪವಾಡ ಪುರುಷ ಶ್ರೀ ಜಡಿಸಿದ್ದೇಶ್ವರ ಜಾತ್ರಾ ಮಹೋತ್ಸವ ಮತ್ತು ಹಗ್ಗವಿಲ್ಲದೆ ಚಲಿಸುವ ರಥೋತ್ಸವವನ್ನು ಈ ವರ್ಷ ಗ್ರಾಮದ ಗುರು ಹಿರಿಯರ, ಮುಖ್ಯಸ್ಥರ, ಸ್ವಯಂಸೇವಕರ ಹಾಗೂ ಭಕ್ತರ ಜೊತೆ ಚರ್ಚಿಸಿ ಏ.12ರಂದು ನಡೆಯಬೇಕಿದ್ದ ಜಾತ್ರಾ ಮಹೋತ್ಸವವನ್ನು ರದ್ದು ಮಾಡಲು ತಿರ್ಮಾನಿಸಲಾಗಿದೆ.
ಶ್ರೀ ಮಠದಿಂದ ಜಾತ್ರಾ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಸಾಂಕೇತಿಕವಾಗಿ ಗದ್ದುಗೆ ಮತ್ತು ರಥಕ್ಕೆ ಪೂಜೆ ಮಾಡಲಾಗುವುದು. ಭಕ್ತರು ಜಾತ್ರೆಯ ಪ್ರಯುಕ್ತ ಕ್ಷೇತ್ರಕ್ಕೆ ಬರುವುದು ಬೇಡ. ರಾಜ್ಯ, ಹೊರರಾಜ್ಯದಿಂದ ಬರುವ ಭಕ್ತರು ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಬಂದು ದರ್ಶನ ಪಡೆದುಕೊಳ್ಳಿ ಎಂದು ಹೇಳಿದರು.
ಸಭೆಯಲ್ಲಿ ಮುಖಂಡರಾದ ಸಿ.ಎಸ್.ವಾಲಿ, ಶಿವಕುಮಾರ ಅಂಗಡಿ, ಭೀಮಪ್ಪ ಹೊಟ್ಟಿಹೊಳಿ, ಚಂದ್ರಶೇಖರ ಗಾಣಿಗೇರ, ರುದ್ರಪ್ಪ ಹಳಿಂಗಳಿ, ಮಾರುತಿ ನಾಯ್ಕ್, ಮಲ್ಲಪ್ಪ ಢವಳೇಶ್ವರ, ಮುತ್ತು ಜಿಡ್ಡಿಮನಿ ಮತ್ತಿತರರು ಉಪಸ್ಥಿತರಿದ್ದರು.