RNI NO. KARKAN/2006/27779|Saturday, October 19, 2024
You are here: Home » breaking news » ಬೆಳಗಾವಿ:ಕೋವಿಡ್-19 ನಿಯಂತ್ರಣ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸಭೆ

ಬೆಳಗಾವಿ:ಕೋವಿಡ್-19 ನಿಯಂತ್ರಣ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸಭೆ 

ಕೋವಿಡ್-19 ನಿಯಂತ್ರಣ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸಭೆ

 

 

ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಸೂಚನೆ

 

ನಮ್ಮ ಬೆಳಗಾವಿ ಇ – ವಾರ್ತೆ ಬೆಳಗಾವಿ, ಮಾ.31

 

ಜಿಲ್ಲೆಯಲ್ಲಿ ಇರುವ ಅಸಂಘಟಿತ ವಲಯದ ಕಾರ್ಮಿಕರ ಪಟ್ಟಿ ಮಾಡಿ ಸ್ವಯಂಸೇವಾ ಸಂಘ-ಸಂಸ್ಥೆಗಳ ನೆರವಿನಿಂದ ಅವರಿಗೆ ಊಟೋಪಹಾರದ ವ್ಯವಸ್ಥೆ ಮಾಡಬೇಕು. ಅದೇ ರೀತಿ ಇಟ್ಟಿಗೆ ಭಟ್ಟಿ, ಸವಿತಾ ಸಮಾಜ, ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ನಿರ್ಗತಿಕರನ್ನು ಗುರುತಿಸಿ ಸೌಲಭ್ಯ ಒದಗಿಸಬೇಕು ಎಂದು ಬೃಹತ್ ಮತ್ತು ಮಧ್ಯಮ‌ ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.

ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ (ಮಾ.೩೧) ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಜನಸಾಮಾನ್ಯರಿಗೆ ತೊಂದರೆಯಾಗದಂತೆ ನಗರ ಪ್ರದೇಶಗಳಲ್ಲಿ ಸಾಧ್ಯವಾದರೆ ಮನೆಮನೆಗೆ ದಿನಸಿ ಹಾಗೂ ತರಕಾರಿ ತಲುಪಿಸಲು ಕ್ರಮ ಕೈಗೊಳ್ಳಬೇಕು.
ಊಟೋಪಾಹಾರಗಳ ಪಾರ್ಸೆಲ್ ಒದಗಿಸಲು ಹೋಟೆಲ್ ನವರಿಗೆ ಆರಂಭಿಸಲು ಅವಕಾಶ ಕಲ್ಪಿಸಬೇಕು.
ಸರಕು ಸಾಗಾಣಿಕೆಗೆ ಸಂಬಂಧಿಸಿದಂತೆ ಲಾರಿ ಅಸೋಸಿಯೇಷನ್ ನವರ ಸಭೆ ಕರೆದು ಸರಕು ಸಾಗಾಣಿಕೆಗೆ ಮುಕ್ತ ಅವಕಾಶ ನೀಡಿರುವ ಬಗ್ಗೆ ಮನವರಿಕೆ ಮಾಡಬೇಕು ಹಾಗೂ ಪಾಸ್ ಒದಗಿಸಬೇಕು ಎಂದು ಸಚಿವ ಶೆಟ್ಟರ್ ತಿಳಿಸಿದರು.

ತುರ್ತು ಅಗತ್ಯವಿರುವ ವೈದ್ಯಕೀಯ ಸಲಕರಣೆ, ಸಾಮಗ್ರಿಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಅವರು, ಯಾವುದೇ ಕಾರಣಕ್ಕೂ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳಿಗ್ಗೆ ಹಾಗೂ ಸಂಜೆ ಒಂದೆರಡು ಗಂಟೆಗಳ ಕಾಲ ಖಾಸಗಿ ಕ್ಲಿನಿಕ್ ಆರಂಭಿಸಲು ಕ್ರಮ ವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಇದುವರೆಗೆ ಉತ್ತಮ ನಿರ್ವಹಣೆ. ಆದಾಗ್ಯೂ ಮುಂಬರುವ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಉದ್ಭವಿಸದಂತೆ ಜಿಲ್ಲಾಡಳಿತ ಹಾಗೂ ಉಳಿದ ಇಲಾಖೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು.
ಸ್ಯಾನಿಟೈಸರ್, ಮಾಸ್ಕ್, ಕೈಗವಸುಗಳು ಸಮರ್ಪಕವಾಗಿ ಒದಗಿಸಬೇಕು ಎಂದರು.

ಆಹಾರ ಸಾಮಗ್ರಿಗಳ ದಾಸ್ತಾನು ಮತ್ತು ಸರಬರಾಜು ಬಹಳ ಮುಖ್ಯ. ಇದರ ಬಗ್ಗೆ ನಿರಂತರ ನಿಗಾ ವಹಿಸಬೇಕು. ಅಗತ್ಯ ಪ್ರಮಾಣದಲ್ಲಿ ಪೂರೈಕೆಗೆ ಕ್ರ‌ಮ ಕೈಗೊಳ್ಳಬೇಕು ಎಂದು ಎಂದು ಸಚಿವ ಜಗದೀಶ್ ಶೆಟ್ಟರ್ ಅವರು ಸೂಚನೆ ನೀಡಿದರು.

ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಮಾತನಾಡಿ, ವಲಸೆ ಕಾರ್ಮಿಕರ ಸಂಚಾರ ತಡೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಸಾಮಗ್ರಿಗಳ ಸಾಗಾಣಿಕೆಗೆ ತೊಂದರೆಯಿಲ್ಲ ಎಂದರು.
ಸವಿತಾ ಸಮಾಜದ ಜನರ ಸಮಸ್ಯೆಗಳನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದರು.

ಪೌರ ಕಾರ್ಮಿಕರಿಗೆ ಮಾಸ್ಕ್, ಸೋಪ್ ವಿತರಿಸಲಾಗಿದ್ದು, ಇಂದಿನಿಂದ ಉಪಾಹಾರ ಕೂಡ ಪೂರೈಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತರಾದ ಜಗದೀಶ್ ವಿವರಿಸಿದರು.

ಜಿಲ್ಲೆಯಲ್ಲಿ ಇದುವರೆಗೆ ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ‌.ಮುನ್ಯಾಳ, ೩೮೩ ಜನರ ನಿಗಾ ವಹಿಸಲಾಗಿದೆ. ೨೧೭ ಜನರು ೧೪ ದಿನ ಕ್ವಾರಂಟೈನ್ ಪೂರ್ಣಗೊಳಿಸಿದ್ದು, ೮ ಜನರಿಗೆ ಬಿಮ್ಸ್ ನಲ್ಲಿ ಐಸೋಲೇಷನ್ ವಾರ್ಡನಲ್ಲಿ ಚಿಕಿತ್ಸೆ ನೀಡಲಾಗಿದೆ.
ಒಟ್ಟಾರೆ ೩೨ ಜನರು ೨೮ ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ ಎಂದು ವಿವರಿಸಿದರು.

೩೧೮ ಜನರಿಗೆ ಸ್ಟ್ಯಾಂಪಿಂಗ್ ಮಾಡಲಾಗಿದೆ. ಜಿಲ್ಲೆಯಿಂದ ಒಟ್ಟು ೨೧ ಜನರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಅದರಲ್ಲಿ ೧೮ ಜನರ ವರದಿ ನೆಗೆಟಿವ್ ಬಂದಿರುತ್ತವೆ ಎಂದು ವಿವರಿಸಿದರು.
ಬಿಮ್ಸ್ ನಿರ್ದೇಶಕರಾದ ಡಾ.ದಾಸ್ತಿಕೊಪ್ಪ ಅವರು, ಬಿಮ್ಸ್ ಅನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಬಿಮ್ಸ್ ಹಾಗೂ ಮಿಲಿಟರಿ ಆಸ್ಪತ್ರೆಯನ್ನು ಕೂಡ ಕೋವಿಡ್ ಆಸ್ಪತ್ರೆ ಎಂದು ಪರಿವರ್ತಿಸಬಹುದಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.

ಸಾವಿರ ಜನರಿಗೆ ಸಾಮೂಹಿಕ ಕ್ವಾರಂಟೈನ್ ವ್ಯವಸ್ಥೆ:

ಬೆಂಗಳೂರು ಹಾಗೂ ನೆರೆಯ ರಾಜ್ಯಗಳಿಂದ ರಾಜಸ್ತಾನ ಹಾಗೂ ಮಧ್ಯಪ್ರದೇಶದಿಂದ ಸುಮಾರು ಒಂದು ಸಾವಿರ ಕಾರ್ಮಿಕರು ಆಗಮಿಸಿದ್ದು, ಆರೋಗ್ಯ ತಪಾಸಣೆ ನಡೆಸಿ ಊಟೋಪಹಾರ ವ್ಯವಸ್ಥೆ ಮಾಡಲಾಗಿದೆ.
ಬೈಲಹೊಂಗಲ, ಹುಕ್ಕೇರಿ ಮತ್ತು ಕಿತ್ತೂರು ತಾಲ್ಲೂಕುಗಳಲ್ಲಿ ಸಾಮೂಹಿಕ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.

ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ಆಗಮಿಸುತ್ತಿರುವುದರಿಂದ ಬೆಂಗಳೂರು ಸೇರಿದಂತೆ ಆಯಾ ಜಿಲ್ಲೆಗಳಲ್ಲಿ ಅವರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡುವ ಮೂಲಕ ಕಾರ್ಮಿಕರ ಸಂಚಾರ ತಡೆಗಟ್ಟಬಹುದು ಎಂದರು.
ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ಭರವಸೆ ತಿಳಿಸಿದರು.
ಗೋವಾ ರಾಜ್ಯಕ್ಕೆ ಹೋಗುವ ಹಾಲು, ತರಕಾರಿ ಮತ್ತಿತರ ಸಾಮಗ್ರಿಗಳ ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಈ ಬಗ್ಗೆ ಗೋವಾ ಮುಖ್ಯಮಂತ್ರಿಗಳಿಗೂ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ನೆರೆಯ ರಾಜ್ಯಗಳ ಪೊಲಿಸ್ ಇಲಖೆಯ ಸಮನ್ವಯದೊಂದಿಗೆ ಗಡಿಯಲ್ಲಿ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.
ಶಾಸಕರಾದ ಅನಿಲ್ ಬೆನಕೆ, ಪೊಲೀಸ್ ಆಯುಕ್ತರಾದ ಬಿ‌.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು.

Related posts: