ಗೋಕಾಕ:ಕೃಷಿ ಹೊಂಡದಲ್ಲಿ ಬಿದ್ದು ಒಂದೇ ಕುಟುಂಬದ ನಾಲ್ಕು ಮಕ್ಕಳ ಸಾವು: ಅಜ್ಜನಕಟ್ಟಿ ಗ್ರಾಮದಲ್ಲಿ ಘಟನೆ
ಕೃಷಿ ಹೊಂಡದಲ್ಲಿ ಬಿದ್ದು ಒಂದೇ ಕುಟುಂಬದ ನಾಲ್ಕು ಮಕ್ಕಳ ಸಾವು: ಅಜ್ಜನಕಟ್ಟಿ ಗ್ರಾಮದಲ್ಲಿ ಘಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ.4-
ಒಂದೇ ಕುಟುಂಬದ ನಾಲ್ಕು ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ತಾಲೂಕಿನ ಅಜ್ಜನಕಟ್ಟಿ ಗ್ರಾಮದಲ್ಲಿ ಶನಿವಾರದಂದು ಮಧ್ಯಾನ್ಹ ಸಂಭವಿಸಿದೆ.
ಬಾಗವ್ವ (6), ತಾಯಮ್ಮ ಉರ್ಫ ಸುಪ್ರೀತ (5), ಮಾಳಪ್ಪ (4), ರಾಜಶ್ರೀ ಉರ್ಫ ರಾಧಿಕಾ (ಎರಡೂವರೆ ವರ್ಷ) ತಂದೆ ಕರೆಪ್ಪ ಜಕ್ಕಣ್ಣವರ ಎಂಬವನ ಮಕ್ಕಳು ಗ್ರಾಮದ ಮನೆಯಿಂದ ತೋಟದ ಮನೆಯಲ್ಲಿ ಇದ್ದ ಅಜ್ಜ-ಅಜ್ಜಿ ಮನೆಗೆ ಬರುತ್ತಿರುವಾಗ ಒಂದು ಮಗುವನ ಕೈಯಲ್ಲಿದ್ದ ಮೊಬೈಲ್ ಅಕಸ್ಮಿಕವಾಗಿ ಕೃಷಿ ಹೊಂಡದಲ್ಲಿ ಬಿದ್ದಿದ್ದರಿಂದ ಅದನ್ನು ಹಿಡಿಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದಿದೆ. ಅದನ್ನು ಹಿಡಿಯಲು ಹೋಗಿ ಇತರ ಮೂರೂ ಮಕ್ಕಳು ಕೂಡಾ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿವೆ. ಮಕ್ಕಳ ಅಜ್ಜಿ ನೀರಿಗಾಗಿ ಕೃಷಿ ಹೊಂಡಕ್ಕೆ ಬಂದಾಗ ಒಂದು ಮಗುವಿನ ಶವ ನೀರಿನಲ್ಲಿ ಬಿದ್ದಿರುವದನ್ನು ಕಂಡು ಅಕ್ಕಪಕ್ಕದ ಹೊಲದವರನ್ನು ಕರೆದು ಶವವನ್ನು ಹೊರತೆಗೆಯಲಾಗಿದೆ. ನಂತರ ಇತರ ಮಕ್ಕಳನ್ನು ಸಹ ಹುಡುಕಿ ನೀರಿನಿಂದ ಹೊರ ತೆಗೆಯಲಾಗಿದೆ.
ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಗೋಕಾಕ ಡಿವೈಎಸ್‍ಪಿ ಪ್ರಭು ಡಿ.ಟಿ. ಹಾಗು ಸಿಪಿಐ ಗೋಪಾಲ ರಾಠೋಡ ಭೇಟಿ ನೀಡಿದ್ದಾರೆ.
ಈ ಬಗ್ಗೆ ಗ್ರಾಮೀಣ ಪೋಲೀಸ ಠಾಣೆಯ ಪಿಎಸ್‍ಐ ನಾಗರಾಜ ಖಿಲಾರೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.