ಮೂಡಲಗಿ:ಬಡ ಕುಟುಂಬಗಳಿಗೆ ದಿನ ಬಳಕೆ ವಸ್ತುಗಳ ಕಿಟ್ ವಿತರಣೆ
ಬಡ ಕುಟುಂಬಗಳಿಗೆ ದಿನ ಬಳಕೆ ವಸ್ತುಗಳ ಕಿಟ್ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಎ 16 :
ಮಹಾಮಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಅರಭಾಂವಿ ಕ್ಷೇತ್ರದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸೂಚಿಸಿದ್ದು, ಅದರನ್ವಯ ಕ್ಷೇತ್ರದಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುತ್ತಿರುವುದಾಗಿ ಯುವ ಧುರೀಣ ನಾಗೇಶ್ ಶೇಖರಗೋಳ ಹೇಳಿದರು.
ಗುರುವಾರದಂದು ಪಟ್ಟಣದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರ ಅಭಿಮಾನಿಗಳು ಬಡ ಕುಟುಂಬಗಳಿಗೆ ಕೊಡ ಮಾಡಿದ ದಿನ ಬಳಕೆ ವಸ್ತುಗಳ ಕಿಟ್ ವಿತರಿಸಿ ಮಾತನಾಡಿದ ಅವರು, ಈ ಸಂಕಷ್ಟದ ಸಮಯದಲ್ಲಿ ಬಡ ಕುಟುಂಬಗಳಿಗೆ ಅಗತ್ಯವಿರುವ ನೆರವನ್ನು ಕಲ್ಪಿಸಿಕೊಡುತ್ತಿರುವ ದಾನಿಗಳ ಉದಾರತೆಯನ್ನು ಪ್ರಶಂಸಿಸಿದರು.
ಕೊರೋನಾದಂತಹ ಮಹಾಮಾರಿಯನ್ನು ಹಿಮ್ಮೆಟ್ಟಿಸಬೇಕಾಗಿದೆ. ಈ ಸೋಂಕು ಇಡೀ ಜಗತ್ತನ್ನೇ ಆವರಿಸಿದೆ. ಈ ರೋಗದ ನಿವಾರಣೆಗೆ ಉಭಯ ಸರಕಾರಗಳು ಪಣತೊಟ್ಟು ಹೋರಾಟ ಮಾಡುತ್ತಿವೆ. ನಮ್ಮ ಜೀವ ರಕ್ಷಣೆಯ ದೃಷ್ಟಿಯಿಂದ ದೇಶಾದ್ಯಂತ ಮೇ ತಿಂಗಳ 3 ರ ವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ವಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯೂ ಸಾಮಾಜಿಕ ಅಂತರ ಪಾಲಿಸಿದರೆ ಮಾತ್ರ ಇದನ್ನು ಹೋಗಲಾಡಿಸಲು ಸಾಧ್ಯ ಎಂದು ಹೇಳಿದರು.
ಕಹಾಮ ದೊಡ್ಡ ಜವಾಬ್ದಾರಿಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಹಿಸಿಕೊಂಡು ಅಲ್ಲಿಂದಲೇ ಕ್ಷೇತ್ರದ ಜನತೆಯ ಸುರಕ್ಷತೆಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಂಡು ನಮ್ಮ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದಾರೆ. ಮತಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಮಾಸ್ಕ್ ಗಳನ್ನು ವಿತರಿಸಲಾಗಿದೆ. ಸ್ಲಂ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಉಚಿತವಾಗಿ ಹಾಲನ್ನು ನೀಡಲಾಗುತ್ತಿದೆ. ಬಡ ಕುಟುಂಬಗಳಿಗೆ ಅಗತ್ಯವಿರುವ ದಿನ ಬಳಕೆಯ ವಸ್ತುಗಳನ್ನು ನಮ್ಮವರು ವಿತರಿಸುತ್ತಿದ್ದಾರೆ ಎಂದು ಹೇಳಿದರು.
ಈ ದಿನದಂದು ಬಡವರಿಗೆ ದಿನ ಬಳಸಿ ವಸ್ತುಗಳನ್ನು ನೀಡಿರುವ ಪುರಸಭೆ ಮಾಜಿ ಸದಸ್ಯ ಮರೆಪ್ಪ ಮರೆಪ್ಪಗೋಳ ಅವರ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು.
ಸಿಪಿಐ ವೆಂಕಟೇಶ ಮುರನಾಳ, ಪಿಎಸ್ಐ ಮಲ್ಲಿಕಾರ್ಜುನ ಸಿಂಧೂರ, ಮುಖಂಡ ಡಿ.ಕೆ.ನಾಯಿಕ, ಫಾಸ್ಟರ್ ಡ್ಯಾನ್ಯುಲ್ ಬಾಬು,ದಾನಿ ಮರೆಪ್ಪ ಮರೆಪ್ಪಗೋಳ, ರಮೇಶ ಸಣ್ಣಕ್ಕಿ, ವಿಜಯ ಮೂಡಲಗಿ, ಅನ್ವರ ನದಾಫ, ಬಸು ಜಂಡೆ ಕುರುಬರ, ಶಿವಬಸು ಜುಂಝರವಾಡ, ಶಾಬು, ಕಿರಣ ಸಣ್ಣಕ್ಕಿ, ಮಲೀಕ ಹುಣಶಾಳ, ಪುರಸಭೆಯ ಸದಸ್ಯರು, ದಲಿತ ಸಮುದಾಯದ ಮುಖಂಡರು ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಂಬೇಡ್ಕರ್ ನಗರ, ಜಂಡೆ ಕುರುಬರ ಓಣಿ, ಗಂಗಾ ನಗರ, ಕಜ್ಜಾಳ ಮರಡಿ, ರಾಜೀವ್ ಗಾಂಧಿ ನಗರ, ಬೀರಪ್ಪನ ಗುಡಿ, ಲಕ್ಷ್ಮಿ ನಗರ, ಶಿವಾಪೂರ ರಸ್ತೆಯ ನಿವಾಸಿಗಳಿಗೆ 200 ಕಿಟ್ ದಿನಸಿ ವಸ್ತುಗಳನ್ನು ಮರೆಪ್ಪ ಮರೆಪ್ಪಗೋಳ ನೀಡಿದರು.