ಗೋಕಾಕ:ಹಿಡಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ 2ಟಿಎಮ್‍ಸಿ ನೀರು ಬಿಡುಗಡೆ-ಕೆಎಂಎಫ್ ಅಧ್ಯಕ್ಷ ಬಾಲಚಂದ್ರ
ಹಿಡಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ 2ಟಿಎಮ್‍ಸಿ ನೀರು ಬಿಡುಗಡೆ-ಕೆಎಂಎಫ್ ಅಧ್ಯಕ್ಷ ಬಾಲಚಂದ್ರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಎ 16 :
ಸಾರ್ವಜನಿಕರಿಗೆ ಕುಡಿಯುವ ನೀರಿನ ಉದ್ದೇಶಕಾಗಿ ಹಿಡಕಲ್ ಜಲಾಶಯದ ಮೂಲಕ ಘಟಪ್ರಭಾ ಬಲದಂಡೆ ಕಾಲುವೆಗೆ ಗುರುವಾರ ಸಂಜೆಯಿಂದ ಮುಂದಿನ 10 ದಿನಗಳ ವರೆಗೆ ನೀರನ್ನು ಹರಿಸಲಾಗುತ್ತಿದೆ ಎಂದು ಕಹಾಮ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಗುರುವಾರದಂದು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಇಂದು ಸಂಜೆ ಆರು ಗಂಟೆಯಿಂದ ಘಟಪ್ರಭಾ ಬಲದಂಡೆ ಕಾಲುವೆಗೆ 2 ಟಿಎಂಸಿ ಮತ್ತು ಸಿಬಿಸಿ ಕಾಲುವೆಗೆ 5500 ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತದೆ ಎಂದು ಹೇಳಿದ್ದಾರೆ.
ಏ. 16 ರಿಂದ 26 ರ ವರೆಗೆ ಒಟ್ಟು 10 ದಿನಗಳವರೆಗೆ ಪ್ರತಿ ದಿನ 2 ಸಾವಿರ ಕ್ಯೂಸೆಕ್ಸ್‍ನಂತೆ ಎರಡು ಟಿಎಂಸಿ ನೀರು ಮತ್ತು ದಿನಾಲೂ 550 ಕ್ಯೂಸೆಕ್ಸ್ ನಂತೆ 10 ದಿನಗಳ ವರೆಗೆ ಚಿಕ್ಕೋಡಿ ಬ್ರ್ಯಾಂಚ್ ಕಿನಾಲಗೆ ನೀರನ್ನು ಹರಿಸಲು ಜಲ ಸಂಪನ್ಮೂಲಗಳ ಸಚಿವ ರಮೇಶ್ ಜಾರಕಿಹೊಳಿ ಅವರು ಈಗಾಗಲೇ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಈ ಕ್ರಮಕೈಗೊಳ್ಳಲಾಗಿದ್ದು, ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನೀರನ್ನು ಹರಿಸಲಾಗುತ್ತಿದೆ. ಈ ನೀರನ್ನು ಘಟಪ್ರಭಾ ಬಲದಂಡೆ ಕಾಲುವೆಯ ವ್ಯಾಪ್ತಿಯ ರೈತರು ಸದುಪಯೋಗಪಡಿಸಿಕೊಳ್ಳಬೇಕು. ಕೃಷಿ ಚಟುವಟಿಕೆಗಳ ಸಂದರ್ಭದಲ್ಲಿ ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ವಿನಂತಿಸಿಕೊಂಡಿರುವ ಅವರು, ರೈತಾಪಿ ವರ್ಗಕ್ಕೆ ಮತ್ತು ದನ-ಕರುಗಳಿಗೆ ಅನುಕೂಲ ಮಾಡಿಕೊಟ್ಟು ಕಾಲುವೆಗಳಿಗೆ ನೀರು ಹರಿಸಿರುವ ಸಚಿವ ರಮೇಶ ಜಾರಕಿಹೊಳಿ ಅವರನ್ನು ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿದ್ದಾರೆ.