ಬೆಂಗಳೂರು:ನೇರವಾಗಿಯೇ ರೈತರಿಂದ ಮೆಕ್ಕೆಜೋಳ ಖರೀದಿಗೆ ಮುಂದಾದ ಕೆಎಂಎಫ್ : ಪ್ರತಿ ಕ್ವಿಂಟಲ್‍ಗೆ 1760 ರೂ. ದರ ನಿಗದಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ನೇರವಾಗಿಯೇ ರೈತರಿಂದ ಮೆಕ್ಕೆಜೋಳ ಖರೀದಿಗೆ ಮುಂದಾದ ಕೆಎಂಎಫ್ : ಪ್ರತಿ ಕ್ವಿಂಟಲ್‍ಗೆ 1760 ರೂ. ದರ ನಿಗದಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಬೆಂಗಳೂರು ಎ 30 :
ಪಶು ಆಹಾರ ಉತ್ಪಾದನೆಗೆ ಅಗತ್ಯವಿರುವ ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ನಾವೇ ಖರೀದಿ ಮಾಡಿಕೊಳ್ಳುತ್ತಿದ್ದು, ಅದಕ್ಕಾಗಿ ಪ್ರತಿ ಕ್ವಿಂಟಲ್‍ಗೆ 1760 ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಈ ಬಗ್ಗೆ ಗುರುವಾರ ಸಂಜೆ ಹೊರಡಿಸಿದ ಮಾಧ್ಯಮ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಅವರು, ಕೋವಿಡ್-19 ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಮೆಕ್ಕೆಜೋಳವನ್ನು ಬೆಳೆದ ರೈತರು ಸೂಕ್ತ ಮಾರುಕಟ್ಟೆ ಇಲ್ಲದೇ, ಯೋಗ್ಯ ದರವು ಸಿಗದೇ ತೊಂದರೆಯಲ್ಲಿರುವುದಾಗಿ ತಿಳಿದುಬಂದಿದ್ದರಿಂದ ಸ್ವತಃ ತಾವೇ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವಿ ಮಾಡಿಕೊಂಡಿರುವುದಾಗಿ ಹೇಳಿದರು.
ಕರ್ನಾಟಕ ಹಾಲು ಮಹಾಮಂಡಳಿಯ 5 ಪಶು ಆಹಾರ ಘಟಕಗಳಿಂದ ವಾರ್ಷಿಕ 6.50 ರಿಂದ 7.00 ಲಕ್ಷ ಟನ್ ಪಶು ಆಹಾರ ಉತ್ಪಾದನೆ ಮಾಡುತ್ತಿದೆ. ಇದಕ್ಕಾಗಿ ವಾರ್ಷಿಕ 2.20 ಲಕ್ಷ ಟನ್‍ಗಳಷ್ಟು ಮೆಕ್ಕೆಜೋಳದ ಅವಶ್ಯಕತೆ ಇರುತ್ತದೆ. ಮೆಕ್ಕೆಜೋಳವನ್ನು ಪಾರದರ್ಶಕ ಕಾಯ್ದೆಯಡಿ ಟೆಂಡರ್ ಕರೆದು ಖರೀದಿಸಲಾಗುತ್ತಿದ್ದು, ವಾರ್ಷಿಕವಾಗಿ ಬೇಕಾಗುವ ಪ್ರಮಾಣವನ್ನು ಮೆಕ್ಕೆಜೋಳದ ಸುಗ್ಗಿ ಕಾಲವಾದ ಅಕ್ಟೋಬರ್‍ನಿಂದ ಫೆಬ್ರುವರಿ ತಿಂಗಳಲ್ಲಿ ಖರೀದಿಸಿ ದಾಸ್ತಾನು ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಈ ವರ್ಷವೂ ಸಹ ನವ್ಹೆಂಬರ್ ತಿಂಗಳವರೆಗೆ ಬೇಕಾಗುವ ಅಗತ್ಯ ಪ್ರಮಾಣದ ಮೆಕ್ಕೆಜೋಳವನ್ನು ಟೆಂಡರ್ ಮೂಲಕ ಖರೀದಿಗೆ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ ಎಂದಿರುವ ಅವರು, ಪಶು ಆಹಾರ ಘಟಕದಲ್ಲಿ 20 ಸಾವಿರ ಟನ್‍ಗಳಷ್ಟು ರೈತರಿಂದ ನೇರವಾಗಿ ಖರೀದಿ ಮಾಡಿ ಆ ಕ್ಷಣವೇ ರೈತರಿಗೆ ನೇರವಾಗಿ ಬಿಲ್ ಪಾವತಿಸಲಾಗುವುದು ಎಂದು ಅವರು ಹೇಳಿದರು.
ಇದಕ್ಕಾಗಿ ಅವಶ್ಯಕವಿರುವ 38 ಕೋಟಿ ರೂ.ಗಳಷ್ಟು ಹಣವನ್ನು ತೊಡಗಿಸಿ ಈಗ ಖರೀದಿಸುವ ಮೆಕ್ಕೆಜೋಳವನ್ನು ಅಕ್ಟೋಬರ್ ಮತ್ತು ನವ್ಹೆಂಬರ್ ತಿಂಗಳಲ್ಲಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಇದರಿಂದ ಮಾರುಕಟ್ಟೆ ತೊಂದರೆಯಲ್ಲಿರುವ ರೈತರಿಗೆ ಸಹಾಯ ಮಾಡಿದಂತಾಗುತ್ತದೆ. ಮತ್ತು ಯಾವುದೇ ದಲ್ಲಾಳಿಗಳ ಮಧ್ಯಸ್ಥಿಕೆ ಇದರಲ್ಲಿ ಇಲ್ಲದಿರುವುದರಿಂದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭಾಂಶವಾಗಲಿದೆ. ಈ ಖರೀದಿಯನ್ನು ನಾವೇ ರೈತರಿಂದ ಮಾಡುತ್ತಿರುವುದರಿಂದ ಎಪಿಎಂಸಿ ಸೆಸ್‍ನಿಂದ ವಿನಾಯತಿ ದೊರೆಯಲಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಲಾಕ್‍ಡೌನ್‍ನಿಂದ ಉಂಟಾದ ಆರ್ಥಿಕ ಸಮಸ್ಯೆ ನಿವಾರಣೆಗೆ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ರೂಪಿಸಿ ಹಾಲು ಉತ್ಪಾದಕರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಾಲಚಂದ್ರ ಜಾರಕಿಹೊಳಿ ಕೃತಜ್ಞತೆ ಸಲ್ಲಿಸಿದ್ದಾರೆ.
ಮೇ ತಿಂಗಳವರೆಗೆ ಮುಂದುವರಿಕೆ : ಪ್ರಸ್ತುತ ಕೋವಿಡ್-19 ಲಾಕ್‍ಡೌನ್ ಪರಿಸ್ಥಿತಿ ಮುಂದುವರೆದಿರುವ ಹಿನ್ನೆಲೆಯಲ್ಲಿ ಪಶು ಆಹಾರದ ಪ್ರತಿ ಟನ್‍ಗೆ ನೀಡಿದ್ದ 500 ರೂ. ರಿಯಾಯತಿಯನ್ನು ಕೆಎಂಎಫ್‍ನ ಹೈನುಗಾರ ರೈತರ ಹಿತದೃಷ್ಟಿಯಿಂದ ಮೇ ತಿಂಗಳವರೆಗೆ ಮುಂದುವರೆಸಲಾಗಿದೆ. ಇದರಿಂದಾಗಿ ಫೆಬ್ರುವರಿ ತಿಂಗಳಿನಿಂದ ಮೇ ತಿಂಗಳವರೆಗೆ ಒಟ್ಟಾರೆ 10 ಕೋಟಿ ರೂ.ಗಳಷ್ಟು ರೈತರಿಗೆ ರಿಯಾಯತಿ ನೀಡಿದಂತಾಗುತ್ತದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.