ಗೋಕಾಕ:ಅಭಿವೃದ್ಧಿಗಾಗಿ ತಮ್ಮ ಬದುಕನ್ನೇ ಮೀಸಲಾಗಿಟ್ಟಿದ್ದ ಧೀಮಂತ ನಾಯಕ ದಿ. ದೇವರಾಜ ಅರಸು : ಡಾ. ರಾಜೇಂದ್ರ ಸಣ್ಣಕ್ಕಿ
ಅಭಿವೃದ್ಧಿಗಾಗಿ ತಮ್ಮ ಬದುಕನ್ನೇ ಮೀಸಲಾಗಿಟ್ಟಿದ್ದ ಧೀಮಂತ ನಾಯಕ ದಿ. ದೇವರಾಜ ಅರಸು : ಡಾ. ರಾಜೇಂದ್ರ ಸಣ್ಣಕ್ಕಿ
ಗೋಕಾಕ.ಅ 20: ರಾಜ್ಯದ ಅಭಿವೃದ್ಧಿಗಾಗಿ ತಮ್ಮ ಬದುಕನ್ನೇ ಮೀಸಲಾಗಿಟ್ಟಿದ್ದ ಧೀಮಂತ ನಾಯಕ ದಿ. ದೇವರಾಜ ಅರಸು ಅವರು, ಸಮಾಜ ಸೇವೆಯೇ ದೇವರ ಸೇವೆಯಂದು ತಿಳಿದು ತಮ್ಮ ಅಧಿಕಾರಾವಧಿಯಲ್ಲಿ ನಾಡಿನ ಏಳ್ಗೆಗಾಗಿ ಶ್ರಮಿಸಿದ್ದಾರೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಅವರು ಭಾನುವಾರದಂದು ನಗರದ ತಾ.ಪಂ. ಸಭಾಭವನದಲ್ಲಿ ತಾಲೂಕಾ ಆಡಳಿತ, ತಾ.ಪಂ., ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದಿ. ಡಿ.ದೇವರಾಜ ಅರಸು ಅವರ 102ನೇ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ದಿ. ದೇವರಾಜ ಅರಸು ಅವರು ರಾಜ್ಯದಲ್ಲಿಯ ಹಿಂದುಳಿದ ವರ್ಗದ ಜನರಿಗೆ ನೀಡಿದ ಕೊಡುಗೆ ಅಪಾರವಾದದ್ದು, ಅಲ್ಲದೆ ಭೂ ಸುಧಾರಣಾ ಕಾನೂನುವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಕೃಷಿ ಕೂಲಿಕಾರರಿಗೆ ಭೂಮಿ ನೀಡಿ ಅವರನ್ನು ರೈತರನ್ನಾಗಿಸಿದ ಕೀರ್ತಿ ದಿ. ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಮೈಸೂರ ರಾಜ್ಯವನ್ನು ಕರ್ನಾಟಕ ರಾಜ್ಯವನ್ನಾಗಿ ಮರು ನಾಮಕರಣ, ದೇಶದಲ್ಲಿಯೇ ಮೊದಲ ಬಾರಿ ವೃಕ್ಷ ಸಂರಕ್ಷಣೆ ಹಾಗೂ ಜೀತದಾಳು ಕಾಯ್ದೆ ಸೇರಿದಂತೆ ಹಲವಾರು ಪರಿಣಾಮಕಾರಿ ಕಾಯ್ದೆಗಳನ್ನು ತರುವುದರೊಂದಿಗೆ ದೇಶದಲ್ಲಿಯೇ ಮಾದರಿ ಮುಖ್ಯಮಂತ್ರಿಯಗಿ ಕಾರ್ಯ ನಿರ್ವಹಿಸಿದ್ದರು.
ಸಮಾರಂಭವನ್ನು ತಾ.ಪಂ. ಅಧ್ಯಕ್ಷೆ ಸುನಂದಾ ಕರದೇಸಾಯಿ ಉದ್ಘಾಟಿಸಿದರು. ಜೆಎಸ್‍ಎಸ್ ಕಾಲೇಜಿನ ನಿವೃತ್ತ ಪ್ರಾದ್ಯಾಪಕ ಜಿ.ವಿ.ಮಳಗಿ ಅವರು ದಿ. ದೇವರಾಜ ಅರಸು ಅವರ ಕುರಿತು ಉಪನ್ಯಾಸ ನೀಡಿದರು.
ವೇದಿಕೆ ಮೇಲೆ ಜಿ.ಪಂ.ಸದಸ್ಯರಾದ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ಗೋವಿಂದ ಕೊಪ್ಪದ, ತಾ.ಪಂ. ಉಪಾಧ್ಯಕ್ಷ ವೈ.ಬಿ.ನಾಯಕ, ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ನಾಗನೂರ ಪ.ಪಂ.ಮುಖ್ಯಾಧಿಕಾರಿ ಎಮ್.ಎಚ್.ಅತ್ತಾರ, ತಾ.ಪಂ.ಸದಸ್ಯರಾದ ಸತ್ತೆಪ್ಪಾ ಬಬಲಿ, ಲಗಮಣ್ಣಾ ನಾಗನ್ನವರ, ರಂಗವ್ವಾ ಬೂದಿಗೊಪ್ಪ, ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ಎಫ್.ಜಿ.ಚಿನ್ನನ್ನವರ, ತಾಲೂಕಾ ವೈದ್ಯಾಧಿಕಾರಿ ಡಾ. ಆರ್.ಎಸ್.ಬೆಣಚಿನಮರಡಿ, ಹಿಂದುಳಿದ ವರ್ಗಗಳ ತಾಲೂಕಾ ವಿಸ್ತರಣಾ ಅಧಿಕಾರಿ ಎನ್.ಬಿ. ಜಾಬನ್ನವರ, ಅಲೆಮಾರಿ ಜನಾಂಗದ ಜಿಲ್ಲಾಧ್ಯಕ್ಷ ಅಮೃತ ದಪ್ಪಿನವರ ಇದ್ದರು.
ಬಿ.ಎ.ಮಾಲದಿನ್ನಿ ಸ್ವಾಗತಿಸಿ, ನಿರೂಪಿಸಿದರು. ಕೆ.ಬಿ.ದೇವಪ್ಪಗೋಳ ವಂದಿಸಿದರು.