ಬೆಳಗಾವಿ:ಬಿಜೆಪಿಯ ಸುಳ್ಳು ನಡೆಯದು : ಕಾರ್ಯಕರ್ತರ ಸಮಾವೇಶದಲ್ಲಿ ಎಐಸಿಸಿ ಕಾರ್ಯದರ್ಶಿ ಸತೀಶ
ಬಿಜೆಪಿಯ ಸುಳ್ಳು ನಡೆಯದು : ಕಾರ್ಯಕರ್ತರ ಸಮಾವೇಶದಲ್ಲಿ ಎಐಸಿಸಿ ಕಾರ್ಯದರ್ಶಿ ಸತೀಶ
ಬೆಳಗಾವಿ ಅ 21: ಕಾಂಗ್ರೆಸ್ ಸರ್ಕಾರ ಕಳೆದ 4 ವರ್ಷಗಳಲ್ಲಿ ನುಡಿದಂತೆ ನಡೆದಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜನಪರ, ಅಭಿವೃದ್ಧಿ ಪರ ಕೆಲಸಗಳಾಗಿದ್ದು, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿಯ ಅಲದಾಳ ತೋಟದ ಮನೆಯ ಅಂಗಳದಲ್ಲಿ ಸೋಮವಾರ ಯಮಕನಮರಡಿ ಕ್ಷೇತ್ರದ ಭೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ 4 ವರ್ಷದ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕೆಲಸ ಆಗಬೇಕು ಎಂದು ಆಶಿಸಿದರು.
ಕಳೆದ ಬಾರಿ ಯಮಕನಮರಡಿ ಕ್ಷೇತ್ರದಲ್ಲಿ ಸಾರಾಯಿ, ದುಡ್ಡು ಹಂಚಿಲ್ಲ. ಆದರೆ ನಂಬಿದ ಜನ ನನ್ನ ಕೈ ಬಿಟ್ಟಿಲ್ಲ. ಕಳೆದ ಬಾರಿ 26000 ಮತಗಳ ಅಂತರದಿಂದ ಗೆಲ್ಲಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಗೆಲುವಿನ ಅಂತರ 45- 55 ಸಾವಿರಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಶಾಸಕ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ತಾವು ಈ ಬಾರಿಯೂ ಕ್ಷೇತ್ರದಲ್ಲಿ ದುಡ್ಡು ಹಂಚುವುದಿಲ್ಲ, ಸಾರಾಯಿ ಹಂಚುವುದಿಲ್ಲ. ಆದರೆ ಸಂಘಟನೆ ಮತ್ತು ಕಾರ್ಯಕರ್ತರ ಬಲ ನಂಬಿಕೊಂಡು ಚುನಾವಣೆ ಎದುರಿಸುತ್ತೇನೆ ಎಂದು ಹೇಳಿದ ಅವರು, ಕಾಂಗ್ರೆಸ್ ಕಾರ್ಯಕರ್ತರ ಸಮಸ್ಯೆಗಳನ್ನು ಅಧ್ಯಯನ ಮಾಡಿ ಮತ್ತು ಪರಿಹಾರ ಮಾರ್ಗ ಕಂಡುಕೊಳ್ಳುವುದು, ಕಾರ್ಯಕರ್ತರ ಅಭಿಪ್ರಾಯ ಆಧರಿಸಿ ಚುನಾವಣೆ ರಣತಂತ್ರ ರೂಪಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ರೈತರು, ಬಡವರು, ಸಾಮಾಜಿಕ ನ್ಯಾಯದ ಪರ ಕಳೆದ 4 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಆದರೆ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಸುಳ್ಳು ಹೇಳುವುದೇ ಸಾಧನೆ ಎಂದುಕೊಂಡಿದೆ. ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನೇ ತನ್ನದೆಂದು ಹೇಳಿಕೊಳ್ಳಿಕೊಳ್ಳುತ್ತಿದೆ. ಆಧಾರ್ ಕಾರ್ಡ್ ನೀಡುವುದರಿಂದ ಹಿಡಿದು ಅಡಿಗೆ ಅನಿಲ ವಿತರಣೆ ವರೆಗೆ ಯೋಜನೆಯ ಹೆಸರು ಬದಲಾಯಿಸಿ ತನ್ನ ಸಾಧನೆ ಎಂದು ಬಿಜೆಪಿ ಪ್ರಚಾರ ನಡೆಸಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 477 ರೂ. ಇದ್ದ ಸಿಲಿಂಡರ್ ಬೆಲೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ 770 ರೂ.ಗೆ ಏರಿಕೆಯಾಗಿದೆ. ಪ್ರತಿ ಸಿಲಿಂಡರ್ ಗೆ 300 ರೂ. ಬೆಲೆ ಏರಿಸಿ, ಅಡಿಗೆ ಅನಿಲದ ಸಬ್ಸಿಡಿ ತೆಗೆದುಹಾಕಲಾಗಿದೆ. ಈಗ 1000 ರೂ. ವೆಚ್ಚದಲ್ಲಿ ಅಡಿಗೆ ಅನಿಲ ವಿತರಿಸುವ ಮೂಲಕ ಬಡವರ ಪರ ಎಂದು ತೋರಿಸಿಕೊಳ್ಳಲು ಹೊರಟಿದೆ. ಕೇಂದ್ರದ ಈ ನೀತಿ ಬಡವರ ಪರ, ಶೋಷಿತರ ಪರ ಆಗಲು ಸಾಧ್ಯವಿಲ್ಲ. ಹಾಗಾಗಿ ಕಾಂಗ್ರೆಸ್ ಸರ್ಕಾರದ ಸಾಧನೆಗೆ ಹೋಲಿಸಿದರೆ ಬಿಜೆಪಿ ಸರ್ಕಾರದ ಸಾಧನೆ ಏನೂ ಇಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳನ್ನು ಸುತ್ತು ಹಾಕಿದರು. ಬಂಡವಾಳ ಹೂಡಿಕೆಗೆ ಮನವೊಲಿಸುವುದು, ದೇಶದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದು ಈ ವಿದೇಶ ಪ್ರವಾಸದ ಉದ್ದೇಶವಾಗಿತ್ತು. ಇದಕ್ಕೆ ಸಾಕಷ್ಟು ಪ್ರಚಾರ ನೀಡಲಾಯಿತು. ಆದರೆ ಕಳೆದ ಮೂರು ವರ್ಷಗಳಲ್ಲಿ 4 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ, ಅದಕ್ಕಿಂತ ಹೆಚ್ಚು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಇದು ಬಿಜೆಪಿ ಸರ್ಕಾರದ ಸಾಧನೆ ಎಂದು ಶಾಸಕ ಸತೀಶ ಜಾರಕಿಹೊಳಿ ಲೇವಡಿ ಮಾಡಿದರು.
ಯಮಕನಮರಡಿ ಕ್ಷೇತ್ರದ ಕಾರ್ಯಕರ್ತರು ಚುರುಕಿನಿಂದ ಕೆಲಸ ಮಾಡುತ್ತಾರೆ. ಮರದ ಕೆಳಗೆ, ವಾಹನಗಳಲ್ಲಿ, ಕಿ.ಮೀ. ಆಚೆ ನಿಂತು ಭಾಷಣ ಕೇಳಿದರೂ ಅವರಿಗೆ ತಲುಪಬೇಕಾದ ಸಂದೇಶ ತಲುಪಿರುತ್ತದೆ. ಕಾರ್ಯಕರ್ತರು ಸೂಕ್ಷ್ಮಗ್ರಾಹಿಗಳಾಗಿದ್ದಾರೆ. ಯಮಕನಮರಡಿ ಕ್ಷೇತ್ರದ ಕಾರ್ಯಕರ್ತರಿಗೆ 4 ಜಿ ತರಬೇತಿ ಸಿಕ್ಕಿದೆ ಎಂದು ಕ್ಷೇತ್ರದ ಕಾರ್ಯಕರ್ತರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಶಾಸಕ ಸತೀಶ ಜಾರಕಿಹೊಳಿ, ಸಚಿವ ಸ್ಥಾನ ಇದ್ದರೂ, ಇಲ್ಲದಿದ್ದರೂ ಕ್ಷೇತ್ರದ ಮತದಾರರೊಂದಿಗೆ ಕೆಲಸ ಮಾಡುವುದರಲ್ಲಿ ಖುಷಿ ಇದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು. ಕೇಂದ್ರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಸರ್ಕಾರ ಅಧಿಕಾರ ಹಿಡಿಯುವುವಲ್ಲಿಯವರೆಗೆ ಕಾಂಗ್ರೆಸ್ ಸಂಘಟನೆ ಬಲಗೊಳಿಸಬೇಕು ಎಂದು ಶಾಸಕ ಸತೀಶ ಹೇಳಿದರು.
ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಸುಳ್ಳು ಹೇಳುವುದರಲ್ಲಿ ಬಿಜೆಪಿಯವರನ್ನ ಮೀರಿಸಿದವರಿಲ್ಲ. ಕಾಂಗ್ರೆಸ್ ಸರ್ಕಾರವನ್ನು ಭ್ರಷ್ಟ ಎಂದು ಹೇಳಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರಲ್ಲದೇ, ಬಿಜೆಪಿ ಆಡಳಿತಾವಧಿಯಲ್ಲಿ 17 ಸಚಿವರು, ಶಾಸಕರ ವಿರುದ್ಧ ಎಫ್ ಐಆರ್ ಇದ್ದವು. ಗುಜರಾತ್ ಸಂಪುಟದಲ್ಲಿದ್ದಾಗ ಭ್ರಷ್ಟಾಚಾರದ ಆರೋಪ ಹೊತ್ತೇ ಈಗಿನ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೂರು ತಿಂಗಳು ಜೈಲು ಕಂಡು ಬಂದಿದ್ದರು ಎಂದು ಜರಿದರಲ್ಲದೇ, ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ, ಶಾಸಕ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಬಿಜೆಪಿ ಕುತಂತ್ರಗಳನ್ನು ತಡೆಯಲು ಭೂತ್ ಮಟ್ಟದಲ್ಲಿ ಕಾಂಗ್ರೆಸ್ ಸಮಿತಿಗಳನ್ನು ರಚಿಸಲಾಗಿದೆ. ಒಂದು ಭೂತ್ ಗೆ 200 ಮನೆ ಬರುತ್ತಿದ್ದು, ಪ್ರತಿ ಭೂತ್ ಮಟ್ಟದಲ್ಲಿ ಒಬ್ಬರು ಅಧ್ಯಕ್ಷರೂ ಸೇರಿ 13 ಪದಾಧಿಕಾರಿಗಳಿರುತ್ತಾರೆ. ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ನಿಷ್ಠರಾಗಿ ಕೆಲಸ ಮಾಡಿ ಗೆಲ್ಲಿಸಬೇಕು ಎಂದರು.
2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವಲ್ಲಿ ಶಾಸಕ ಸತೀಶ ಜಾರಕಿಹೊಳಿ ಅವರ ಕೊಡುಗೆ ಇದೆ. ಕಾಂಗ್ರೆಸ್ ನುಡಿದಂತೆ ನಡೆದಿದ್ದು, ರಾಜ್ಯದಲ್ಲಿ ಅಭಿವೃದ್ಧಿಪರ, ಜನಪರ ಕೆಲಸ ಆಗಿವೆ. ಆದರೆ 2014ರ ವಿಧಾನಸಭೆ ಚುನಾವಣೆ ಅವಧಿಯಲ್ಲಿ ನೀಡಿದ ಆಶ್ವಾಸನೆಗಳನ್ನು ಬಿಜೆಪಿ ಈಡೇರಿಸಿಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಎಐಸಿಸಿ ಕಾರ್ಯದರ್ಶಿ ಮತ್ತು ಬೆಳಗಾವಿ ವಿಭಾಗ ಕಾಂಗ್ರೆಸ್ ಉಸ್ತುವಾರಿ ಮಾಣಿಕಂ ಟ್ಯಾಗೋರ್ ಮಾತನಾಡಿ, ಶಾಸಕ ಸತೀಶ ಜಾರಕಿಹೊಳಿ ಅವರು ದಕ್ಷಿಣ ಭಾರತದ ಹಿಂದುಳಿದ ವರ್ಗಗಳ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರ ಸಂಘಟನಾ ಶೈಲಿ, ಚಾತುರ್ಯ, ಕ್ಷೇತ್ರದಲ್ಲಿ ಅವರು ಮಾಡಿದ ಕೆಲಸಗಳು, ಕಾರ್ಯಕರ್ತರೊಂದಿಗಿನ ಸಂಬಂಧಗಳು, ಚುನಾವಣೆ ರಣ ತಂತ್ರಗಳ ಬಗ್ಗೆ ಎಐಸಿಸಿ ಗುರುತಿಸಿ, ಅವರಿಗೆ ಕಾರ್ಯದರ್ಶಿ ಸ್ಥಾನ ನೀಡಿದೆ. ಶಾಸಕ ಸತೀಶ ಅವರ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಾಗಿದ್ದು, ಮತದಾರರು ಈ ಬಾರಿ ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು.
ಎಐಸಿಸಿ ಎಸ್ ಸಿ ಘಟಕದ ಉಪಾಧ್ಯಕ್ಷ ಬೆಲ್ಲಯ್ಯ ನಾಯ್ಕ, ಯಮಕನಮರಡಿ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ, ಕೆಪಿಸಿಸಿ ಕಾರ್ಯದರ್ಶಿ ಟಿ.ಎನ್.ಈಶ್ವರ, ಕೆಪಿಸಿಸಿ ಕಾರ್ಯಾಧ್ಯಕ್ಷೆ ರುಕ್ಮಿಣಿ ಸಾವುಕಾರ, ಮಾಜಿ ಸಚಿವರಾದ ಎ.ಬಿ.ಪಾಟೀಲ, ವೀರಕುಮಾರ ಪಾಟೀಲ ಮತ್ತಿತರರು ಮಾತನಾಡಿದರು.
ಮಾಜಿ ಶಾಸಕ ಆರ್.ವಿ.ಪಾಟೀಲ, ಅಪ್ಪಾಸಾಹೇಬ ದೇಸಾಯಿ, ಲಕ್ಷ್ಮಣರಾವ್ ಚಿಂಗಳೆ, ಈರಗೌಡ ಪಾಟೀಲ, ಸುನೀಲ ಹಂಪಣ್ಣವರ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಕೃಷ್ಣಾ ಅನಗೋಳಕರ, ಫಕ್ಕೀರವ್ವ ಹಂಚಿನಮನಿ, ದಸ್ತಗೀರ ಐನಾಪುರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಬಿಸಿರೊಟ್ಟಿ, ಮಹಾವೀರ ಮೊಹಿತೆ ಮತ್ತಿತರರು ಇದ್ದರು.
ಗ್ರಾಮೀಣ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಾಧರಸ್ವಾಮಿ ತವಗಮಠ ಸ್ವಾಗತಿಸಿದರು