ಗೋಕಾಕ:ಪೋಲೀಸರ್ ಕ್ರಮವನ್ನು ಖಂಡಿಸಿ ನಗರಸಭೆ ಮುಂದೆ ಬೀದಿ ಬದಿ ವ್ಯಾಪಾರಸ್ಥರು ಧೀಡಿರ ಪ್ರತಿಭಟನೆ
ಪೋಲೀಸರ್ ಕ್ರಮವನ್ನು ಖಂಡಿಸಿ ನಗರಸಭೆ ಮುಂದೆ ಬೀದಿ ಬದಿ ವ್ಯಾಪಾರಸ್ಥರು ಧೀಡಿರ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಜೂ 12 :
ಪೋಲೀಸರ್ ಕ್ರಮವನ್ನು ಖಂಡಿಸಿ ಬೀದಿ ಬದಿ ವ್ಯಾಪಾರಸ್ಥರು ಧೀಡಿರ ನಗರಸಭೆ ಮುಂದೆ ಕುಳಿತು ಧರಣಿ ನಡೆಸಿದ ಘಟನೆ ಶುಕ್ರವಾರದಂದು ಜರುಗಿತು.
ನಗರದ ಅಪ್ಸರಾ ಖೂಟ ಹಾಗೂ ತರಕಾರಿ ಮಾರ್ಕೆಟನಲ್ಲಿ ವ್ಯಾಪಾರ ಮಾಡುತ್ತಿದ್ದ ಜನರ ಮೇಲೆ ಕೆಲವೊಂದು ಪೋಲೀಸರು ಲಾಠಿ ಬೀಸಿ ಹಲ್ಲೆ ಮಾಡುತ್ತಿದ್ದು ಅಲ್ಲದೇ ತರಕಾರಿಗಳನ್ನು ರಸ್ತೆಗೆ ಚೆಲ್ಲಿ ಹಾಳು ಮಾಡುತ್ತಿದ್ದಾರೆಂದು ಆರೋಪಿಸಿರುವ ಪ್ರತಿಭಟನಾಕಾರರು ನಾವು ಈಗಾಗಲೇ ನೆರೆ ಹಾಗೂ ಕೊರೋನಾ ಲಾಕ್‍ಡೌನ್ ಬಿಕ್ಕಟಿನಿಂದಾಗಿ ತೀವ್ರವಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದೇವೆ. ಈಗ ಸಾಲವನ್ನು ಮಾಡಿ ವ್ಯಾಪಾರ ಆರಂಭಿಸಿದ್ದು, ಪೋಲೀಸರು ನಮ್ಮ ಮೇಲೆ ದೌರ್ಜನ್ಯವನ್ನು ಎಸಗುತ್ತಿದ್ದಾರೆಂದು ಆರೋಪಿಸಿದರಲ್ಲದೆ ಇದು ಹೀಗೆಯೇ ಮುಂದುವರೆದರೆ ನಾವು ಭಿಕ್ಷಾಟನೆ ಮಾಡಬೇಕಾಗುತ್ತದೆ. ವ್ಯಾಪಾರ ಮಾಡಲು ನಗರಸಭೆಯಿಂದ ಕರ ವಸೂಲಿಯನ್ನು ಮಾಡುತ್ತಿದ್ದು ನಮಗೆ ಸೂಕ್ತ ರಕ್ಷಣೆಯನ್ನು ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ಶಿವಾನಂದ ಹಿರೇಮಠ ಅವರು ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು. ಅವರು ಕೊರೋನಾ ಸಂದರ್ಭದಲ್ಲಿ ಸರ್ಕಾರ ನೀಡಿದ ನಿರ್ದೇಶನಗಳನ್ನು ವ್ಯಾಪಾರಸ್ಥರು ಪಾಲಿಸಬೇಕು. ಜನದಟ್ಟನೆ ಹಾಗೂ ಸಂಚಾರಕ್ಕೆ ಅಡೆತಡೆಯಾಗುತ್ತದೆ ಎಂದು ಇಂಥ ಕ್ರಮಕ್ಕೆ ಪೋಲೀಸರು ಮುಂದಾಗಿರಬಹುದು. ಯಾವುದಕ್ಕೂ ಪೋಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ವಹಿಸಲಾಗುವುದು. ವ್ಯಾಪಾರಸ್ಥರು ಕೂಡಾ ಸಾಮಾಜಿಕ ಕಳಕಳಿಯನ್ನು ಹೊಂದಿ ಅಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ತಿಳಿಸಿದಾಗ ಪ್ರತಿಭಟನಾಕರರು ಪ್ರತಿಭಟನೆಯನ್ನು ಹಿಂಪಡೆದರು.
ಪ್ರತಿಭಟನೆಯಲ್ಲಿ ಅಬ್ದುಲ್ ನೂರಸಾನ್, ಮುಸ್ತಾಫ ಅತ್ತಾರ, ತೌಸಿಫ ಮುಲ್ಲಾ, ಜಯಪ್ಪ ನರಗುಂದ, ಮಾಳವ್ವ ದ್ಯಾಮಕ್ಕಗೋಳ, ನಾಗೇಶ ಕಾಂಬಳೆ, ರಮಜಾನ ಸನದಿ, ಅನ್ವರಹುಸೇನ್ ಶಿರೋಳಕರ, ಇಕ್ಬಾಲ್ ಕುರಬೇಟ, ಯಲ್ಲವ್ವ ಭಜಂತ್ರಿ, ಅಲ್ಲಪ್ಪ ಬಡಗಾಂವಿ, ರಾಜನಬಿ ಪಟೇಲ್, ಲಕ್ಷ್ಮೀ ಗದಾಡಿ, ತಾರೇಶ ಭಜಂತ್ರಿ, ಯಾಸೀನ ಪಟೇಲ್, ಆಸೀಫ ಅರಳಿಕಟ್ಟಿ, ಹಬೀಬ ಜಗದಾಳ ಸೇರಿದಂತೆ ನೂರಾರು ಬೀದಿ ಬದಿ ವ್ಯಾಪಾರಸ್ಥರು ಇದ್ದರು.