ಮೂಡಲಗಿ:ಕೊರೋನಾ ರೋಗ ಭೀತಿಯಿಲ್ಲದೇ ಪರೀಕ್ಷೆಗಳು ಸುಗಮ ರೀತಿಯಲ್ಲಿ ನಡೆಯಲು ಸಕಲ ಸಿದ್ದತೆ ಮಾಡಲಾಗಿದೆ
ಕೊರೋನಾ ರೋಗ ಭೀತಿಯಿಲ್ಲದೇ ಪರೀಕ್ಷೆಗಳು ಸುಗಮ ರೀತಿಯಲ್ಲಿ ನಡೆಯಲು ಸಕಲ ಸಿದ್ದತೆ ಮಾಡಲಾಗಿದೆ
ನಮ್ಮ ಬೆಳಗಾವಿ ಇ – ವಾರ್ತೆ ,ಮೂಡಲಗಿ ಜೂ 15 :
ಮಾರ್ಚ್ ತಿಂಗಳಲ್ಲಿ ಜರುಗಬೇಕಾಗಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಕೊರೋನಾ ವೈರಸ್ ಕೊವಿಡ್-19 ಹಿನ್ನೆಲೆಯಲ್ಲಿ ಮುಂದೂಡಿದ್ದ ಪರೀಕ್ಷೆಗಳು ಜೂನ್ 25 ರಿಂದ ಪ್ರಾರಂಭವಾಗಲಿವೆ. ಪರೀಕ್ಷಾರ್ಥಿಗಳಿಗೆ ಕೊರೋನಾ ರೋಗ ಭೀತಿಯಿಲ್ಲದೇ ಪರೀಕ್ಷೆಗಳು ಸುಗಮ ರೀತಿಯಲ್ಲಿ ನಡೆಯಲು ಸಕಲ ಸಿದ್ದತೆಗಳನ್ನು ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ಅವರು ಸೋಮವಾರ ನಗರದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಅತ್ಯಂತ ಗುಣಮಟ್ಟ ಹಾಗೂ ಪಾರದರ್ಶಕತೆಯಿಂದ ನಡೆಸುವ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಆರೋಗ್ಯ, ಪೊಲೀಸ್, ಸಾರಿಗೆ, ಪುರಸಭೆ, ಪಟ್ಟಣ ಪಂಚಾಯತ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆಗಳ ಸಹಕಾರದೊಂದಿಗೆ ಸ್ಕೌಟ ಮತ್ತು ಗೈಡ್ಸ ಮತ್ತು ಸೇವಾ ದಳಗಳ ಸಹಾಯದೊಂದಿಗೆ ವಿದ್ಯಾರ್ಥಿಗಳ ಆರೋಗ್ಯ ಹಿತ ದೃಷ್ಠಿಯಿಂದ ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಜರ ಮಾಡಿ ಪರೀಕ್ಷಾ ಕೇಂದ್ರದ ಒಳಗಡೆ ಬಿಡುವ ಜವಾಬ್ದಾರಿಯನ್ನು ನೀಡಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಗೂ 2 ಜೊತೆ ಮಾಸ್ಕಗಳನ್ನು ನೀಡಲಾಗುವದು ಎಂದರು.
ತಾಲೂಕಿನಲ್ಲಿ 18 ಪರೀಕ್ಷಾ ಕೇಂದ್ರಗಳು 8 ಉಪಕೇಂದ್ರಗಳಲ್ಲಿ ಒಟ್ಟು 6063 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ತಾಲೂಕಿನ 1024 ವಿದ್ಯಾರ್ಥಿಗಳು ಕೆ.ಎಸ್.ಆರ್.ಟಿ.ಸಿ ವಾಹನ, 3464 ಮಕ್ಕಳು ಸ್ವಂತ ವಾಹನ, 377 ಖಾಸಗಿ ಶಾಲಾ ವಾಹನ, 1198 ವಿದ್ಯಾರ್ಥಿಗಳು ಕಾಲ ನಡಿಗೆ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಲಿದ್ದಾರೆ. ಪರೀಕ್ಷಾ ಸಿಬ್ಬಂದಿಯವರ ಸುರಕ್ಷತೆಗಾಗಿ ಮಾಸ್ಕ್, ಕೈಗವಸು, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಆಶಾ ಕಾರ್ಯಕರ್ತೆಯರು, ವೈಧ್ಯಕೀಯ ಸಹಾಯಕರು, ಪೊಲೀಸ್, ಸ್ಕೌಟ್ ಗೈಡ್ಸ್ ಮತ್ತು ಸೇವಾದಳದವರನ್ನು ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ಉಪಮುಖ್ಯ ಅಧೀಕ್ಷಕರು, ಕಸ್ಟೋಡಿಯನ್, ಮೊಬೈಲ್ ಸ್ವಾಧಿನ ಅಧಿಕಾರಿ, ಸ್ಥಾನಿಕ ಜಾಗೃತ ದಳ, ಮಾರ್ಗಾಧಿಕಾರಿಗಳು, ಕೊಠಡಿ ಮೇಲ್ವಿಚಾರಕರುಗಳನ್ನು ಪರೀಕ್ಷಾ ಮಂಡಳಿ ನಿಯಮಾನುಸಾರ ನೇಮಕ ಮಾಡಿ ಸಭೆಗಳನ್ನು ಜರುಗಿಸಿ ಕಟ್ಟುನಿಟ್ಟಿನಿಂದ ಪರೀಕ್ಷೆಗಳನ್ನು ಜರುಗಿಸಲು ತಿಳಿಸಿದೆ.
ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಪರೀಕ್ಷಾ ದಿನಗಳಂದು ಸ್ಥಳೀಯ ಸಂಸ್ಥೆಗಳಿಂದ ಸ್ಯಾನಟೈಸರ್ ಮಾಡುವದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಲಾಗಿದೆ. ಚುನಾಯಿತ ಪ್ರತಿನಿಧಿಗಳು, ಶಾಲಾ ಆಡಳಿತ ಮಂಡಳಿಯವರು, ಸಂಘ ಸಂಸ್ಥೆಯವರು, ಸ್ವಯಂ ಸೇವಕರು, ಸಾರ್ವಜನಿಕರು ಪರೀಕ್ಷೆಗಳು ಸುಗಮವಾಗಿ ಜರುಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಹಾಜರಾಗಲು ಅನುಕೂಲ ಮಾಡಿಕೊಡಬೇಕು. ಶಾಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಸಹಾಯವಾಣಿಯ ಸದುಪಯೋಗ ಪಡೆದುಕೊಂಡು ಎಸ್.ಎಸ್.ಎಲ್.ಸಿ ಪರೀಕ್ಷೆಗಳಿಂದ ಯಾರು ವಂಚಿತರಾಗಲು ಅವಕಾಶ ನೀಡಬಾರದು ಎಂದು ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಸಮನ್ವಯಾಧಿಕಾರಿ ಬಿ.ಎಚ್ ಮೋರೆ, ಎಸ್.ಎಸ್.ಎಲ್.ಸಿ ಪರೀಕ್ಷಾ ನೋಡಲ್ ಅಧಿಕಾರಿ ಬಿ.ಎಸ್ ಸತೀಶ, ಇಸಿಒ ಟಿ ಕರಿಬಸವರಾಜು, ಬಿ.ಆರ್.ಪಿಗಳಾದ ಗೋಪಾಲ ಪತ್ತಾರ, ಸದಾಶಿವ ಭಜಂತ್ರಿ, ಐ.ಎಸ್ ಬಡಿಗೇರ, ಶಂಕರ ಮೂಡಲಗಿ, ಎಸ್.ವಿ ಕೊಣ್ಣೂರೆ, ಕೆ.ಎಲ್ ಮೀಶಿ ಉಪಸ್ಥಿತರಿದ್ದರು.