RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:ಹಿಂದಿನ ಇಂಧನ ಸಚಿವ ಡಿ.ಕೆ.ಶಿವುಕುಮಾರ ಅವರ ಸಹಕಾರ ನೆನಪಿಸಿ ಕೃತಜ್ಞತೆ ಸಲ್ಲಿಸಿದ ಸಚಿವ ರಮೇಶ

ಗೋಕಾಕ:ಹಿಂದಿನ ಇಂಧನ ಸಚಿವ ಡಿ.ಕೆ.ಶಿವುಕುಮಾರ ಅವರ ಸಹಕಾರ ನೆನಪಿಸಿ ಕೃತಜ್ಞತೆ ಸಲ್ಲಿಸಿದ ಸಚಿವ ರಮೇಶ 

ಹಿಂದಿನ ಇಂಧನ ಸಚಿವ ಡಿ.ಕೆ.ಶಿವುಕುಮಾರ ಅವರ ಸಹಕಾರ ನೆನಪಿಸಿ ಕೃತಜ್ಞತೆ ಸಲ್ಲಿಸಿದ ಸಚಿವ ರಮೇಶ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 28 :

 
33/11 ಕೆ.ವ್ಹಿ ವಿದ್ಯುತ್ ಕೇಂದ್ರ ಮತ್ತು 11 ಕೆ.ವ್ಹಿ ಭೂಗತ ಕೇಬಲ್ ಅಳವಡಿಕೆ ಕಾಮಗಾರಿಗೆ ಕಾಂಗ್ರೆಸ್ ಸರಕಾರದ ಹಿಂದಿನ ವಿದ್ಯುತ್ ಮಂತ್ರಿಯ ಸಾಕಷ್ಟು ಸಹಕಾರ ನೀಡಿದ್ದರು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಮ್ಮ ರಾಜಕೀಯ ವಿರೋಧಿ ಡಿಕೆಶಿ ಅವರ ಸಹಕಾರವನ್ನು ನೆನೆದರು.

ರವಿವಾರದಂದು ಇಲ್ಲಿಯ ಹೊರವಲಯದ ಮಾರ್ಕೇಂಡೇಯ ನಗರದಲ್ಲಿ ಹೆಸ್ಕಾಂ ವತಿಯಿಂದ 4.47 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿದ ನೂತನ 33/11ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಹಾಗೂ ಸುಮಾರು 122 ಕೀಮಿ ಉದ್ದದ 37.91 ಕೋಟಿ ರೂ.ಗಳ ವೆಚ್ಚದ ಭೂಗತ ಕೇಬಲ್ ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು .

ನಾನು ಸಹಕಾರಿ ಮಂತ್ರಿ ಇದ್ದಾಗ ಅಂದಿನ ವಿದ್ಯುತ್ ಮಂತ್ರಿ ಅವರು ಈ ಕಾಮಗಾರಿ ಒಳ್ಳೆಯ ಸಹಕಾರ ನೀಡಿದ್ದರು . ಈಗ ನಾನು ಎಷ್ಟೇ ವಿರೋಧವಾಗಿದ್ದರು ಅವರು ಮಾಡಿದ ಉಪಕಾರಕ್ಕೆ ಅವರಿಗೆ ಸಮಸ್ತ ಗೋಕಾಕ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ ಅವರ ಹೆಸರು ಪ್ರಸ್ತಾಪ ಮಾಡದೆ ಅವರ ಸಹಕಾರವನ್ನು ನೆನೆದರು.

ಈ ಯೋಜನೆಯಿಂದ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುವುದಲ್ಲದೆ ಗೋಕಾಕ ಭಾಗಕ್ಕೆ ತಡೆ ರಹಿತ ವಿದ್ಯುತ್ ಪೂರೈಕೆಯಾಗಲಿದೆ. ಅಲ್ಲದೆ ತಾಲೂಕಾ ಮಟ್ಟದಲ್ಲಿ 122 ಕಿ .ಮೀ ಭೂಗತ ಕೇಬಲ್ ಅಳವಡಿಕೆ ಮಾಡಿರುವ ಯೋಜನೆ ರಾಜ್ಯದಲ್ಲಿ ಪ್ರಥಮವಾಗಿದೆ. ಇದಕ್ಕೆ ಎಲ್ಲಾ ಅಧಿಕಾರಿ ವರ್ಗದವರು ಟೀಂ ಆಗಿ ಕಾರ್ಯನಿರ್ವಹಿಸಿದ್ದಾರೆ. ಹಿಗೇಯೆ ಎಲ್ಲ ಅಧಿಕಾರಿಗಳು ಟೀಂ ಆಗಿ ಕೆಲಸ ಮಾಡಿ ಗೋಕಾಕ ಮತ್ತು ಬೆಳಗಾವಿ ಜಿಲ್ಲೆಯನ್ನು ರಾಜ್ಯದಲ್ಲಿಯೇ ಮಾದರಿಯಾಗಿ ಮಾಡೋಣ ಎಂದು ಸಚಿವರು ಹೇಳಿದರು

ಇಂಧನ ಇಲಾಖೆ ಮಹತ್ವದ ಇಲಾಖೆಯಾಗಿದ್ದು ರೈತರ, ಕೈಗಾರಿಕೆಗಳ ಅಭಿವೃದ್ದಿಗೆ ಜನತೆಯ ಬದುಕಿನ ಬಹುದೊಡ್ಡ ಭಾಗವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರೇ ಮಹತ್ವದ ಖಾತೆಯನ್ನು ನಿರ್ವಹಿಸುತ್ತಿದ್ದು, ಅಭಿವೃದ್ದಿ ಕಾರ್ಯದಲ್ಲಿ ಯಾವಗಲೂ ಮುಂಚೂಣಿಯಲ್ಲಿ ನಿಂತು ಕಾರ್ಯವನ್ನು ನಿರ್ವಹಿಸುತ್ತಾರೆ ಅಂತವರನ್ನು ಪಡೆದ ನಾವು ಪುಣ್ಯವಂತರು ಎಂದು ಸಚಿವರು ಹೇಳಿದರು.

ಐಎಎಸ್ ಗಿಂತ ಬಡ್ತಿ ಹೊಂದಿದ ಅಧಿಕಾರಿಗಳ ಉತ್ತಮ : ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವರು ತಾಂತ್ರಿಕ ಇಲಾಖೆಗಳಲ್ಲಿ ಐಎಎಸ್ ಅಧಿಕಾರಿಗಳಿಗಿಂತ ಬಡ್ತಿ ಹೊಂದಿದ ಅಧಿಕಾರಿಗಳು ಉತ್ತಮ . ಐಎಎಸ್ ಶ್ರೇಣಿ ಹೊಂದಿದ ಬಹಳಷ್ಟು ಅಧಿಕಾರಿಗಳು ಕಾನೂನಿನ ನೆಪ ಹೂಡಿ ಕಾಮಗಾರಿಗಳನ್ನು ವಾಪಸ ಕಳುಹಿಸುತ್ತಾರೆ. ಆದರೆ ತಾಂತ್ರಿಕ ವಿಭಾಗದಿಂದ ಬಡ್ತಿಯಾಗಿದ್ದ ಅಧಿಕಾರಿಗಳಿಗೆ ಸ್ಥಳೀಯವಾಗಿ ಸಮಸ್ಯೆಗಳು ಗೊತ್ತಿರುವದರಿಂದ ಕಾಮಗಾರಿಗಳು ಸಲಿಸವಾಗಿ ಆಗುತ್ತವೆ‌. ಇದರರ್ಥ ಐಎಎಸ್ ಅಧಿಕಾರಿಗಳು ಬೇಡ ವೆಂದಲ್ಲ ಅವರು ಆಡಳಿತ ನಡೆಸಲು ಬೇಕು ಎಂದು ತಳಮಟ್ಟದ ಅಧಿಕಾರಿಗಳ ಕಾರ್ಯವೈಖರಿಯನ್ನು ಹೊಗಳಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಸುಮಾರು 122 ಕೀಮಿ ಉದ್ದದ 37.91 ಕೋಟಿ ರೂ.ಗಳ ವೆಚ್ಚದ ಭೂಗತ ಕೇಬಲ್ ಕಾಮಗಾರಿಯನ್ನು ಹೊಂದಿರುವ ಕರ್ನಾಟಕದ ಗೋಕಾಕ ನಗರವು ಮೊದಲ ನಗರವಾಗಿ ಹೊರಹೊಮ್ಮಿದ್ದು ಇದಕ್ಕೆ ಸಚಿವ ರಮೇಶ ಜಾರಕಿಹೊಳಿ ಅವರ ಪ್ರಯತ್ನ ಮಹತ್ವದಾಗಿದೆ. ಒಳ್ಳೆಯ ಕಾರ್ಯಗಳಿಗೆ ಜನತೆ ಸದಾ ಸಹಕಾರ ನೀಡುತ್ತಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್ಯದಲ್ಲಿ ಹೆಗಲು ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಮ್.ಮುನಿರಾಜ, ಮುಖ್ಯ ಅಭಿಯಂತರ ಎಮ್.ಎಮ್.ಬೇವಿನಮರದ, ಅಧೀಕ್ಷಕ ಅಭಿಯಂತರ ಗಿರಿಧರ ಕುಲಕರ್ಣಿ, ಗುತ್ತಿಗೆದಾರ ರಾಜೇಂದ್ರ ದೇಸಾಯಿ, ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ, ಪೌರಾಯುಕ್ತ ಶಿವಾನಂದ ಹಿರೇಮಠ, ಸ್ಥಳೀಯ ಹೆಸ್ಕಾಂನ ಅಧಿಕಾರಿಗಳಾದ ಕಿರಣ ಸಣ್ಣಕ್ಕಿ, ಎಸ್.ಪಿವರಾಳೆ, ಎಮ್.ಎಸ್.ನಾಗನ್ನವರ, ಗಣಪತಿ ಖಾನಪ್ಪನವರ, ಗಣ್ಯರಾದ ಎಸ್.ಎ.ಕೋತವಾಲ, ಸಿದ್ದಲಿಂಗ ದಳವಾಯಿ,ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮಣ್ಣವರ , ಮಹಾಂತೇಶ ತಾವಂಶಿ, ಶಾಮಾನಂದ ಪೂಜೇರಿ, ಆನಂದ ಗೋಟಡಕಿ, ಸೋಮಶೇಖರ ಮಗದುಮ್ಮ ಶಂಕರ ಧರೆನ್ನವರ ಸೇರಿದಂತೆ ಅನೇಕರು ಇದ್ದರು.

Related posts: