ಗೋಕಾಕ:ಗೋಕಾಕ ತಾಲೂಕಿನ ರೈತರು ರಸಗೊಬ್ಬರಕ್ಕಾಗಿ ಆತಂಕ ಪಡಬೇಕಿಲ್ಲ ಫುಲ್ ರೇಕ್ ರಸಗೊಬ್ಬರ ಸರಬರಾಜಿಗೆ ಕ್ರಮ : ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಗೋಕಾಕ ತಾಲೂಕಿನ ರೈತರು ರಸಗೊಬ್ಬರಕ್ಕಾಗಿ ಆತಂಕ ಪಡಬೇಕಿಲ್ಲ ಫುಲ್ ರೇಕ್ ರಸಗೊಬ್ಬರ ಸರಬರಾಜಿಗೆ ಕ್ರಮ : ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 9 :
ಪ್ರಸಕ್ತ ಹಂಗಾಮಿನಲ್ಲಿ ಒಳ್ಳೆಯ ಮಳೆ ಆಗುತ್ತಿರುವುದರಿಂದ ಮೆಕ್ಕೆಜೋಳ, ಕಬ್ಬು ಬೆಳೆಗಳ ಬಿತ್ತನೆ ಹಾಗೂ ನಾಟಿ ಕೆಲಸಗಳು ನಡೆದಿರುವುದರಿಂದ ರೈತರಿಗೆ ಅಗತ್ಯವಿರುವ ರಸಗೊಬ್ಬರವನ್ನು ಪೂರೈಕೆ ಮಾಡುವಂತೆ ಶಾಸಕ ಹಾಗೂ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಗುರುವಾರದಂದು ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ಹೇಳಿಕೆ ನೀಡಿರುವ ಅವರು, ರೈತರಿಗೆ ರಸಗೊಬ್ಬರದ ಅವಶ್ಯಕತೆ ಇದ್ದು, ಅದರ ಅನುಸಾರ ಕೂಡಲೇ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರವನ್ನು ಸರಬರಾಜು ಮಾಡುವಂತೆ ಈಗಾಗಲೇ ಕೃಷಿ ಅಧಿಕಾರಿಗಳೊಂದಿಗೆ ಮಾತನಾಡಿರುವುದಾಗಿ ಅವರು ಹೇಳಿದ್ದಾರೆ.
ಇದರಿಂದ ಗೋಕಾಕ ಹಾಗೂ ಮೂಡಲಗಿ ತಾಲ್ಲೂಕುಗಳ ರೈತರು ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ. ಅವಶ್ಯವಿರುವ 2500 ಟನ್ (ಫುಲ್ ರೇಕ್) ಯೂರಿಯಾ ಗೊಬ್ಬರವನ್ನು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. 2-3 ದಿನಗಳಲ್ಲಿ ರಸಗೊಬ್ಬರ ರೈತರಿಗೆ ಸಿಗಲಿದೆ ಎಂದು ಹೇಳಿದ್ದಾರೆ.
ಉಭಯ ತಾಲೂಕುಗಳಲ್ಲಿ ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಸೂರ್ಯಕಾಂತಿ ಹಾಗೂ ಅರಿಷಿನ ಬೆಳೆಗಳಿವೆ. ಶೇ 90 ರಷ್ಟು ಪ್ರದೇಶವು ನೀರಾವರಿಯಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 45600 ಹೆಕ್ಟರ್ ಪ್ರದೇಶ ಬಿತ್ತನೆ ಗುರಿ ಹೊಂದಿದ್ದು, ಪ್ರಸ್ತುತ ಶೇ 78 ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. 35568 ಹೆಕ್ಟರ್ ಪ್ರದೇಶ ಬಿತ್ತನೆಯಾಗಿದೆ. ಈಗಾಗಲೇ ಬಿತ್ತನೆಯಾದ ಸೊಯಾಬಿನ್, ಮೆಕ್ಕೆಜೋಳ, ಕಬ್ಬು ಬೆಳೆಗಳಿಗೆ ಯೂರಿಯಾ ಗೊಬ್ಬರವನ್ನು ಮೇಲು ಗೊಬ್ಬರವಾಗಿ ಉಪಯೋಗಿಸುತ್ತಿದ್ದು, ರೈತರಿಗೆ ರಸಗೊಬ್ಬರ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಿಗೆ ಈ ಹಂಗಾಮಿನಲ್ಲಿ ಎಪ್ರೀಲ್‍ನಿಂದ ಸೆಪ್ಟೆಂಬರವರೆಗೆ 11850 ಮೆ.ಟನ್ ಯೂರಿಯಾ ರಸಗೊಬ್ಬರದ ಬೇಡಿಕೆ ಇದ್ದು, ರೈತರಿಗೆ ಪಿಕೆಪಿಎಸ್ ಹಾಗೂ ರಸಗೊಬ್ಬರ ಮಳಿಗೆಗಳಿಗೆ ಜುವಾರಿ, ಆರ್‍ಸಿಎಫ್, ಇಫ್ಕೋ, ಕ್ರಿಬ್ಕೋ ಕಂಪನಿಗಳ ಯೂರಿಯಾವನ್ನು ಪೂರೈಸುವಂತೆ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸೂಚನೆ ನೀಡಿರುವುದಾಗಿ ಅವರು ಹೇಳಿದ್ದಾರೆ.
ಬೆಂಗಳೂರಿನ ಅಪರ ಕೃಷಿ ನಿರ್ದೇಶಕ ವ್ಹಿ.ಜೆ. ಪಾಟೀಲ, ಬೆಳಗಾವಿ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ ಅವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸೂಚನೆ ನೀಡಿ ಮೂಡಲಗಿ, ಗೋಕಾಕ ತಾಲೂಕುಗಳ ರೈತರಿಗೆ ಒಂದು ರೇಕ್ ಯೂರಿಯಾ ಗೊಬ್ಬರವನ್ನು ಸರಬರಾಜು ಮಾಡುವಂತೆ ಅವರು ಸೂಚಿಸಿದ್ದಾರೆ.