ಗೋಕಾಕ:ಕರೊನಾ ವೈರಸ್ ನಿಯಂತ್ರಣಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ : ಎಚ್.ಎನ್.ಬಾವಿಕಟ್ಟಿ
ಕರೊನಾ ವೈರಸ್ ನಿಯಂತ್ರಣಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ : ಎಚ್.ಎನ್.ಬಾವಿಕಟ್ಟಿ
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಜು 9 :
ಗೋಕಾಕ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಕೆಲವು ವ್ಯಕ್ತಿಗಳಿಗೆ ಕರೊನಾ ಸೋಂಕು ತಗಲಿರುವ ಹಾಗೂ ಸೋಂಕು ತಡೆಗಟ್ಟುವ ಹಿನ್ನಲೆಯಲ್ಲಿ ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರು ತಿಳಿಸಿದ ಆದೇಶದಂತೆ ಗುರುವಾರ ಸೇರಿದಂತೆ ಶನಿವಾರ ಜು.11ರವರೆಗೆ ಪ್ರತಿದಿನ ಮಧ್ಯಾಹ್ನ 1 ಗಂಟೆಯಿಂದ ಬೆಳಗ್ಗೆ 5 ಗಂಟೆ ತನಕ ಹಾಗೂ ರವಿವಾರ ಜು.12 ರಂದು ಸಂಪೂರ್ಣ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಲಾಕ್‍ಡೌನ್ ಜಾರಿಗೊಳಿಸಲಾಗಿದೆ.
ಗ್ರಾಮದಲ್ಲಿ ಗುರುವಾರ, ಶುಕ್ರವಾರ, ಶನಿವಾರದಂದು ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಅಂಗಡಿ-ಮುಂಗಟ್ಟುಗಳ ಬಾಗಿಲು ತೆರೆಯಲು ಹಾಗೂ ಹಣ್ಣು, ತರಕಾರಿ ಮಾರಾಟ ಮಾಡಲು ಮಾತ್ರ ಅವಕಾಶವಿದೆ. ಸ್ಥಳೀಯರು ಸ್ವಯಂ ಪ್ರೇರಿತರಾಗಿ ಮುಖಕ್ಕೆ ತಪ್ಪದೇ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳವುದರ ಜೊತೆಗೆ ಸ್ವಚ್ಚತೆ ಸೇರಿದಂತೆ ಕರೊನಾ ವೈರಸ್ ನಿಯಂತ್ರಣಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಗ್ರಾಪಂ ಪಿಡಿಒ ಎಚ್.ಎನ್.ಬಾವಿಕಟ್ಟಿ ಸ್ಥಳೀಯರಿಗೆ ತಿಳಿಸಿದ್ದಾರೆ.
ಗ್ರಾಮದಲ್ಲಿ ಲಾಕ್‍ಡೌನ್ ಜಾರಿಗೊಳಿಸಲಾದ ಕುರಿತು ಗ್ರಾಪಂ ಸಿಬ್ಬಂದಿ ಗ್ರಾಮದ ಪ್ರಮುಖ ಬೀದಿ, ಸ್ಥಳಗಳಲ್ಲಿ ಗುರುವಾರದಂದು ಲೌಡ್‍ಸ್ಪಿಕರ್ ಮೂಲಕ ಸಾರ್ವಜನಿಕರಿಗೆ ತಿಳಿಸುವ ಪ್ರಚಾರ ಕೈಗೊಂಡರು. ಗುರುವಾರ ಜು.9 ರಂದು ಮಧ್ಯಾಹ್ನ 1 ಗಂಟೆಗೆ ಗ್ರಾಮದ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಬಾಗಿಲು ಹಾಕಿದರು. ಹಣ್ಣು, ತರಕಾರಿ ಸಹ ಮಾರಾಟ ಮಾಡದೇ ಗೋಕಾಕ ತಾಲೂಕಾ ಆಡಳಿತ ಮತ್ತು ಗ್ರಾಮ ಪಂಚಾಯಿತಿದವರು ಜಾರಿಗೊಳಿಸಲಾದ ಲಾಕ್‍ಡೌನ್ ಕ್ರಮಕ್ಕೆ ಸ್ಥಳೀಯರು ಬೆಂಬಲ ವ್ಯಕ್ತಪಡಿಸಿ ಸಹಕರಿಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ, ಗೌಡಪ್ಪ ಮಾಳೇದ, ಸುರೇಶ ಬಾಣಸಿ, ಬಸವರಾಜ ಪಣದಿ, ವಿಠಲ ಚಂದರಗಿ, ಶಿವಾನಂದ ಐದುಡ್ಡಿ, ಈರಣ್ಣ ದಂಡಿನ ಸೇರಿದಂತೆ ಗ್ರಾಪಂ ಸದಸ್ಯರು, ಮತ್ತೀತರರು ಇದ್ದರು.