RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಕೊರೋನಾ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ನೆರವು : ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ:ಕೊರೋನಾ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ನೆರವು : ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ 

ಕೊರೋನಾ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ನೆರವು : ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

 

ದೂರವಾಣಿ ಮೂಲಕ ಗೋಕಾಕ-ಮೂಡಲಗಿ ತಾಲ್ಲೂಕಿನ ಅಧಿಕಾರಿಗಳ ಸಭೆ ನಡೆಸಿದ ಅರಭಾವಿ ಶಾಸಕ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 19 :

 

ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳಲ್ಲಿ ಕೊರೋನಾ ಸೊಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸಮರ್ಪಕ ಚಿಕಿತ್ಸೆ ಲಭಿಸುವ ದೃಷ್ಟಿಯಿಂದ ಎಲ್ಲ ರೀತಿಯ ಅಗತ್ಯ ನೆರವು ನೀಡುವುದಾಗಿ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಕಟಿಸಿದರು.
ಭಾನುವಾರದಂದು ತಮ್ಮ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ದೂರವಾಣಿ ಮೂಲಕ ನಡೆಸಿದ ಅವರು, ಸೊಂಕಿತರನ್ನು ಹೀನಾಯ ದೃಷ್ಟಿಯಿಂದ ನೋಡದೇ ಅವರಿಗೆ ಧೈರ್ಯ ತುಂಬುವ ಕೆಲಸ ಅಧಿಕಾರಿಗಳು ಮಾಡುವಂತೆ ಅವರು ಸೂಚಿಸಿದರು.
ಉಭಯ ತಾಲ್ಲೂಕುಗಳಲ್ಲಿ ದಿನದಿಂದ ದಿನಕ್ಕೆ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನಾಗರೀಕರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲವೆಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿರುವುದರಿಂದ ತಾವೇ ಸ್ವತಃ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳು, ಊಟೋಪಚಾರ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲು ಸಿದ್ಧರಿರುವುದಾಗಿ ಅವರು ಹೇಳಿದರು.
ಸೊಂಕಿತರಿಗೆ ಕೊರೋನಾ ಟೆಸ್ಟ್ ಮಾಡಲು ತ್ವರೀತಗತಿಯಲ್ಲಿ ರ್ಯಾಪಿಡ್ ಆ್ಯಂಟಿಝೆನ್ ಮತ್ತು ಆ್ಯಂಟಿಬಾಡಿ ಕಿಟ್‍ಗಳನ್ನು ಪೂರೈಸಲಾಗುವುದು. ಆಕ್ಸಿಜನ್ ಪ್ರಮಾಣವನ್ನು ಕಂಡು ಹಿಡಿಯಲು ಡಿಜಿಟಲ್ ಫಲ್ಸ್ ಆಕ್ಸಿಮಿಟರ್ ವ್ಯವಸ್ಥೆ ಮಾಡಲಾಗುವುದು. ಶಂಕಿತರಲ್ಲಿ ಸ್ಥಳದಲ್ಲಿಯೇ ಜ್ವರ ತಪಾಸಣೆ ಮಾಡಲು ಇನ್ಪ್ರಾರೆಡ್ ಥರ್ಮಾಮೀಟರ್ ವ್ಯವಸ್ಥೆ, ರಕ್ತದಲ್ಲಿನ ಆಮ್ಲಜನಕ ಪ್ರಮಾಣವನ್ನು ಕಂಡು ಹಿಡಿಯಲು ಡಿಜಿಟಲ್ ಫಲ್ಸ್ ಆಕ್ಸಿಮೀಟರ್ ವ್ಯವಸ್ಥೆ, ಕೊರೋನಾ ಲಕ್ಷಣ ರಹಿತ ರೋಗಿಗಳಿಗೆ ಔಷಧಿ ಕಿಟ್‍ಗಳನ್ನು ಪೂರೈಸಲಾಗುವುದು ಎಂದು ಹೇಳಿದರು.
ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಸೀಲ್‍ಡೌನ್ ಪ್ರದೇಶದಲ್ಲಿಯ ಸಾರ್ವಜನಿಕರಿಗೆ ಮತ್ತೊಮ್ಮೆ 2 ಲಕ್ಷ ಮಾಸ್ಕ್‍ಗಳನ್ನು ವಿತರಿಸಲಾಗುವುದು. ಅದರಲ್ಲಿ ಸೊಂಕಿತರಿಗೆ ಮತ್ತು ಅವರನ್ನು ಉಪಚರಿಸುವ ವೈದ್ಯಕೀಯ ಸಿಬ್ಬಂದಿಗಳಿಗೆ ಎನ್95, ಕಂಟೆನ್ಮೆಂಟ್ ಝೋನ್‍ನ ಸಾರ್ವಜನಿಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪುರಸಭೆ, ಪಟ್ಟಣ ಪಂಚಾಯತ ಮತ್ತು ಗ್ರಾಮ ಪಂಚಾಯತ ಸಿಬ್ಬಂದಿಗಳಿಗೆ ತ್ರಿ ಲೇಯರ್ ಮಾಸ್ಕ್‍ಗಳನ್ನು ವಿತರಿಸಲಾಗುವುದು. ವೈದ್ಯರಿಗೆ ಮತ್ತು ವೈದ್ಯಕೀಯ ಸಹಾಯಕರಿಗೆ ಪಿ.ಪಿ.ಇ ಕಿಟ್‍ಗಳನ್ನು ಸಹ ನೀಡಲಾಗುವುದು ಎಂದು ಹೇಳಿದರು.
ಪ್ರತಿ ಸೊಂಕಿತರ ಆರೈಕೆಗಾಗಿ ಕೇರ್ ಸೆಂಟರ್‍ಗೆ 14 ದಿನಗಳವರೆಗೆ ಬೇಕಾಗುವ ದಿನಬಳಕೆಯ ವಸ್ತುಗಳು, ವೈದ್ಯಕೀಯ ಸಲಹೆ ಆಧಾರಿತ ಔಷಧೋಪಚಾರ, ಬೆಡ್‍ಸೀಟ್‍ಗಳು, ಊಟೋಪಚಾರ, ಹಣ್ಣು, ಹಾಲು ಸೇರಿ ಫೌಷ್ಟಿಕಾಂಶವುಳ್ಳ ಆಹಾರವನ್ನು ನೀಡುವುದಾಗಿ ಹೇಳಿದರು.
ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ಅಗತ್ಯವಿರುವ ಹಾಸಿಗೆಗಳನ್ನು ಕೂಡಲೇ ವ್ಯವಸ್ಥೆ ಮಾಡಿಕೊಳ್ಳಬೇಕು. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಹಾಗೂ ವಸತಿ ನಿಲಯಗಳನ್ನು ರೋಗಿಗಳ ಚಿಕಿತ್ಸಾ ಕೇಂದ್ರಗಳಿಗೆ ಬಳಸಿಕೊಳ್ಳಬೇಕು. ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಚಿಕಿತ್ಸೆ ನೀಡಬೇಕು. ಇದರಲ್ಲಿ ಅಧಿಕಾರಿಗಳು ನಿರ್ಲಕ್ಷ ತೋರಿಸಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುನ್ನೆಚ್ಚರಿಕೆ ಅಗತ್ಯ : ಸುರಕ್ಷತೆಯ ದೃಷ್ಟಿಯಿಂದ ಕೋವಿಡ್-19 ಸ್ವಾಬ್ ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿರುವ ಯಾವುದೇ ವ್ಯಕ್ತಿ ಪರೀಕ್ಷ ಫಲಿತಾಂಶ ಲಭ್ಯವಾಗುವವರೆಗೆ ಮನೆಯಲ್ಲಿಯೇ ಪ್ರತ್ಯೇಕ ಐಸೋಲೇಷನ್ ವ್ಯವಸ್ಥೆ ಮಾಡಿಕೊಳ್ಳಿ. ಕಡ್ಡಾಯವಾಗಿ ಮಾಸ್ಕ್‍ಗಳನ್ನು ಧರಿಸಿ. ಅನಗತ್ಯವಾಗಿ ಮನೆಯಿಂದ ಹೊರ ಬರಬೇಡಿ. ಮನೆಯಲ್ಲಿಯೇ ಸುರಕ್ಷಿತವಾಗಿರಿ. ಚಿಕ್ಕ ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರ ಆರೋಗ್ಯ ಕಾಳಜಿ ಮಾಡಿ. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಉಸಿರಾಟದ ತೊಂದರೆ, ಜ್ವರ, ಕೆಮ್ಮು, ನೆಗಡಿಯಂತಹ ಕೊರೋನಾ ರೋಗ ಲಕ್ಷಣಗಳನ್ನು ಹೊಂದಿದ್ದರೆ ವೈದ್ಯಕೀಯ ಸಹಾಯಕ್ಕಾಗಿ ಆಪ್ತಮಿತ್ರ 14410 ಗೆ ಕರೆ ಮಾಡಿ. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ದಿಲ್‍ಶಾದ ಮಹಾತ, ಗೋಕಾಕ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಆಂಟಿನ, ತಜ್ಞ ವೈದ್ಯ ಡಾ.ಆರ್.ಎಸ್. ಬೆಣಚಿನಮರಡಿ, ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಭಾರತಿ ಕೋಣಿ, ಮೂಡಲಗಿ ಬಿಇಓ ಅಜೀತ ಮನ್ನಿಕೇರಿ, ಮೂಡಲಗಿ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಹಿರಿಯ ಆರೋಗ್ಯ ನಿರೀಕ್ಷಕ ಶಂಕರ ಅಂಗಡಿ ಸೇರಿದಂತೆ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts: