ಗೋಕಾಕ:ಸೋಂಕಿತರ ವ್ಯವಸ್ಥಿತ ಉಪಚಾರದ ಮೂಲಕ ಮಾತ್ರ ಕೋವಿಡ್‍ನ್ನು ನಿಯಂತ್ರಿಸಲು ಸಾಧ್ಯ : ಮುಖಂಡ ಅಶೋಕ ಪೂಜಾರಿ
ಸೋಂಕಿತರ ವ್ಯವಸ್ಥಿತ ಉಪಚಾರದ ಮೂಲಕ ಮಾತ್ರ ಕೋವಿಡ್‍ನ್ನು ನಿಯಂತ್ರಿಸಲು ಸಾಧ್ಯ : ಮುಖಂಡ ಅಶೋಕ ಪೂಜಾರಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ 20 :
ಕೋವಿಡ್ ನಿಯಂತ್ರಣಕ್ಕೆ ಲಾಕ್‍ಡೌನ್ ಮಾತ್ರ ಅಂತಿಮವಲ್ಲ ಎಂಬ ವಾಸ್ತವ ಸತ್ಯವನ್ನು ಅರಿತಿರುವ ರಾಜ್ಯ ಸರಕಾರ ಲಾಕಡೌನ್ ಕ್ರಮದಿಂದ ಹಿಂದೆಸರಿದು ರೋಗ ನಿಯಂತ್ರಣಕ್ಕೆ ಇನ್ನುಳಿದ ವಿಧಾನಗಳಿಂದ ಮುಂದಾಗಿರುವದು ಒಂದು ರೀತಿ ಸಮಯೋಚಿತ ನಿರ್ಧಾರವಾಗಿದೆ ಎಂದು ಜೆ.ಡಿ.ಎಸ್. ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ. ಲಾಕಡೌನ ವ್ಯವಸ್ಥೆ ರಾಜ್ಯದಾದ್ಯಂತ ರಾಜ್ಯ ಸರಕಾರದ ನಿಯಂತ್ರಣಕ್ಕೊಳಪಡುವುದರ ಜೊತೆಗೆ ಅನೇಕ ಸಂದರ್ಭಗಳಲ್ಲಿ ಕೆಲವೇ ಮುಖಂಡರುಗಳ ಒತ್ತಾಸೆಯಿಂದ ಕೈಗೊಳ್ಳುವ ಸ್ವಯಂ ಪ್ರೇರಿತ ಲಾಕಡೌನ ಎಂಬ ಲೇಪನದ ಲಾಕಡೌನ ವ್ಯವಸ್ಥೆಗೆ ಕಡಿವಾಣ ಹಾಕುವದು ಸೂಕ್ತ ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಅವರು ಈಗಾಗಲೇ ಕರೋನಾ ವೈರಸ್ ಹರಡುವಿಕೆ ಸಮುಧಾಯ ಮಟ್ಟವನ್ನು ತಲುಪಿದ್ದು, ಕೇವಲ ಸೂಕ್ತ ವೈಧ್ಯಕೀಯ ಸೌಲಭ್ಯಗಳು ಮತ್ತು ಸೋಂಕಿತರ ವ್ಯವಸ್ಥಿತ ಉಪಚಾರದ ಮೂಲಕ ಮಾತ್ರ ಕೋವಿಡ್‍ನ್ನು ನಿಯಂತ್ರಿಸಲು ಸಾಧ್ಯ. ಇದಕ್ಕೆ ಪೂರಕವಾಗಿ ಸಾಮಾಜಿಕ ಅಂತರ, ಮಾಸ್ಕ ಧಾರಣೆ ಹಾಗೂ ಸೈನಿಟೈಜರ್ ಉಪಯೋಗಿಸುವ ಪರಿಣಾಮಕಾರಿ ಮಾರ್ಗಗಳ ಪಾಲನೆ ಅವಶ್ಯಕ. ಆದರೆ ಈಗಾಗಲೇ ಸಮುದಾಯ ಮಟ್ಟದಲ್ಲಿ ವೈರಸ್ ಹರಡುತ್ತಿರುವದರಿಂದ ತಜ್ಞರ ಸಲಹೆ ಮತ್ತು ಅಭಿಪ್ರಾಯಗಳ ಹೊರತಾಗಿಯೂ ದೊಡ್ಡ ಮಟ್ಟದಲ್ಲಿ ವೈರಸ್ ತಗಲುವ ಎಲ್ಲ ಸಾಧ್ಯತೆಗಳು ಇರುವಾಗ ಮುಂದಿನ 4-5 ತಿಂಗಳುಗಳ ವರೆಗೆ ಹಬ್ಬಬಹುದಾದ ಸೋಂಕಿನ ಪ್ರಮಾಣ ಮತ್ತು ಸಂಖ್ಯೆಗೆ ಪೂರಕವಾಗಿ ಸಮರ್ಪಕ ವೈಧ್ಯಕೀಯ ಸೇವೆ ಮತ್ತು ಸೌಲಭ್ಯಗಳು ದೊರೆತಾಗ ಮಾತ್ರ ಸಾವಿನ ಪ್ರಮಾಣವನ್ನು ನಿಯಂತ್ರಿಸಲು ಸಾಧ್ಯವೆಂಬ ಪರಿಕಲ್ಪನೆಯೊಂದಿಗೆ ಮುಂದಾಲೋಚನೆಯ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ.
ಕರೋನಾ ವೈರಸ್ ಸೋಂಕು ಮಾರಣಾಂತಿಕ ಸೋಂಕಲ್ಲ ಎಂದು ತಜ್ಞರು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರಲ್ಲಿ ನೈತಿಕ ಸ್ಥೈರ್ಯ ತುಂಬುವ ಅವಶ್ಯಕತೆ ಇದೆ. ಆದರೆ ಇದೆಲ್ಲಕಿಂತಲೂ ಮಿಗಿಲಾಗಿ ಕರೋನಾ ಸೋಂಕಿತರನ್ನು ಅಶ್ಪುರ್ಷರಂತೆ ಕಾಣುವದು ಹಾಗೂ ಸಮಾಜದಿಂದ ಏನೋ ದೊಡ್ಡ ತಪ್ಪು ಮಾಡಿದವರಂತೆ ಬಹಿಷ್ಕಾರ ಮನೋಭಾವನೆಯಿಂದ ಕಾಣುವದು ಮಾನವೀಯತೆಯ ಎಲ್ಲೆ ಮೀರಿದ ನಡುವಳಿಕೆಯಾಗಿದ್ದು, ಈ ಮನೋಭಾವನೆಯಿಂದ ಹೋರಬಂದು ಅವರನ್ನು ಪ್ರೀತಿ-ವಿಶ್ವಾಸದಿಂದ ಕಂಡು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಪ್ರತಿಯೊಬ್ಬರಿಂದಲೂ ಆಗಬೇಕಾದ ಅವಶ್ಯಕ ಕಾರ್ಯವಾಗಿದೆ ಎಂದು ಸಾರ್ವಜನಿಕರಲ್ಲಿ ವಿನಮ್ರ ಮನೋಭಾವನೆಯಿಂದ ಕೋರಿದ್ದಾರೆ.