ಗೋಕಾಕ:ಸಂಭ್ರಮದ ನಾಗರ ಪಂಚಮಿ ಹಬ್ಬ ಆಚರಣೆ
ಸಂಭ್ರಮದ ನಾಗರ ಪಂಚಮಿ ಹಬ್ಬ ಆಚರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಜು 25 :
ಮಹಾಮಾರಿ ಕರೊನಾ ಸೋಂಕು ಹರಡುತ್ತಿರುವ ಹಾವಳಿಯ ನಡುವೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಶುಕ್ರವಾರ ಜು.24 ಮತ್ತು ಶನಿವಾರ ಜು.25 ರಂದು ನಾಡಿಗೆ ದೊಡ್ಡದಾದ ನಾಗರ ಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಶುಕ್ರವಾರ ಜು.24 ರಂದು ಗ್ರಾಮದ ಹಲವಡೆವಿರುವ ಹಾವಿನ ಹುತ್ತಗಳಿಗೆ ಹಾಲಿನ ಅಭಿಷೇಕ, ಪೂಜೆ, ಪುನಸ್ಕಾರ ದೇವಸ್ಥಾನಗಳಲ್ಲಿಯೂ ಸಹ ಪುರಜನರಿಂದ ನಡೆದು, ಸಂಜೆ ಹೊತ್ತಿನಲ್ಲಿ ಎಲ್ಲರ ಮನೆಗಳಲ್ಲಿ ಮಣ್ಣಿನಿಂದ ರೂಪಿಸಿದ ನಾಗರ ಹಾವಿನ ಮೂರ್ತಿಗೆ ಹತ್ತಿ ಅರಳಿಯಿಂದ ಮಾಡಿದ ಹೊಂಗನೂಲು ಹಾಕಿ, ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ, ಹಾಲಿನ ಅಭಿಷೇಕ ಮಾಡಿದ ಬಳಿಕ ರುಚಿಕರ ಉಂಡಿ, ತಿಂಡಿ ತಿನಿಸುಗಳನ್ನು ಆದಿಶೇಷನಿಗೆ ನೈವೇದ್ಯ ಸಮರ್ಪಿಸಿದ ಬಳಿಕ ಮನೆ ಮಂದಿಯಲ್ಲ ಒಟ್ಟೂಟ್ಟಿಗೆ ಕುಳಿತು ಸಿಹಿ ಸಿಹಿಯಾದ ತರತರಹದ ಉಂಡಿ, ತಿಂಡಿ ತಿನಸುಗಳನ್ನು ತಿಂದು ಆಸ್ವಾದಿಸಿದರು.
ಶನಿವಾರ ಜು.25 ರಂದು ಜಿಟಿ ಜಿಟಿ ಮಳೆಯ ಹನಿಯ ಮೋಜಿನಲ್ಲಿ ಹೆಣ್ಣು ಮಕ್ಕಳು ನವನವೀನ ಉಡುಗೆ-ತೊಡುಗೆ ತೊಟ್ಟು ಗ್ರಾಮದ ಮನೆಗಳಲ್ಲಿ ಕಟ್ಟಿದ ಜೋಕಾಲಿ ಹಾಗೂ ಊರಿನ ಹಲವಡೆ ಗಿಡ-ಮರಗಳ ರಂಬೆ-ಕೊಂಬೆಗಳಿಗೆ ಹಗ್ಗದಿಂದ ಕಟ್ಟಿದ ಜೋಕಾಲಿ ಜೀಕುವ ಹಾಗೂ ಬಾಲಕರು ಕೊಬರಿ ಬಟ್ಟಲಿನ ಬಿಂಗರಿಕೆ ಆಡಿಸುವ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೇ ಯುವಕ-ಯುವತಿಯರು, ವೃದ್ಧರು ಸೇರಿದಂತೆ ಬಾಲಕ-ಬಾಲಕಿಯರು ನಾಗರ ಪಂಚಮಿ ಹಬ್ಬದ ಪ್ರಯುಕ್ತ ಜೋಕಾಲಿ ಆಡಿ ನಲಿದು ಸಂಭ್ರಮಿಸಿದರು.
ಸ್ಥಳೀಯ ಹಿರಿಯ ನಾಗರಿಕ ಪುಂಡಲೀಕಪ್ಪ ಪಾರ್ವತೇರ ಅವರು, ನಾಗರ ಪಂಚಮಿ ಹಬ್ಬ ತಮ್ಮ ತಮ್ಮ ಬಂಧು ಬಳಗದವರಿಗೆ ಸಿಹಿಯಾದ ತಿಂಡಿಗಳನ್ನು ಹಂಚಿಕೊಳ್ಳುವ ಅವಿನಾಭಾವ ಸಂಬಂಧ ಬೆಸೆಯುವ ವೈಶಿಷ್ಟ್ಯ ಪೂರ್ಣ ಹಬ್ಬವಾಗಿದೆ ಎಂದು ನಾಗರ ಪಂಚಮಿ ಹಬ್ಬದ ವೈಶೀಷ್ಟ್ಯದ ಕುರಿತು ಹೇಳಿದರು.