ಗೋಕಾಕ:ಕೊರೋನಾ ಸೋಂಕು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಬೆಟಗೇರಿ ಗ್ರಾಮದ ವಾರದ ಸಂತೆ ರದ್ದು
ಕೊರೋನಾ ಸೋಂಕು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಬೆಟಗೇರಿ ಗ್ರಾಮದ ವಾರದ ಸಂತೆ ರದ್ದು
ಅಡಿವೇಶ ಮುಧೋಳ.
ಸರ್ಕಾರ ಲಾಕ್‍ಡೌನ್ ತೆರವುಗೊಳಿಸಿದರೂ ಕರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇನ್ನೂ ಕೆಲವು ಹಳ್ಳಿಗಳಲ್ಲಿ ಜನಸಂದಣಿಗೆ ಸಂಪೂರ್ಣ ಅವಕಾಶ ನೀಡಿರುವುದಿಲ್ಲಾ ಅಂಬುವುದಕ್ಕೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮವೇ ಸಾಕ್ಷಿ.!
ಬೆಟಗೇರಿ ಗ್ರಾಮ ಸುತ್ತಲಿನ ಹತ್ತೂರಿನ ಜನರ ವ್ಯಾಪಾರ ವಹಿವಾಟದ ಕೇಂದ್ರ ಸ್ಥಳವಾಗಿದ್ದರಿಂದ ನಿತ್ಯ ನೂರಾರು ಜನ ಇಲ್ಲಿಗೆ ಬಂದು ಹೋಗುತ್ತಾರೆ. ರವಿವಾರದ ಸಂತೆಗೆ ಹತ್ತು ಸಾವಿರಕ್ಕೂ ಹೆಚ್ಚು ಜನ ಸೇರುತ್ತಾರೆ ಹೀಗಾಗಿ ಜನಸಂದಣಿಯಾಗುವ ನಿರೀಕ್ಷೆಯಿಂದ ಇಲ್ಲಿಯ ಹಿರಿಯ ನಾಗರಿಕರು ಕರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಗಸ್ಟ್ ತಿಂಗಳಲ್ಲಿ ಬರುವ ಪ್ರತಿ ರವಿವಾರದ ಸಂತೆಯನ್ನು ಸಂಪೂರ್ಣ ರದ್ದುಗೊಳಿಸಿದ್ದಾರೆ.
ಗ್ರಾಮದಲ್ಲಿ ಭಾನುವಾರ ಸಂತೆ ರದ್ದುಗೊಳಿಸಿದ ಹಿನ್ನಲೆಯಲ್ಲಿ ಆಗಸ್ಟ್ 2.ರ ರವಿವಾರದ ಸಂತೆಗೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ನೂರಾರು ಜನರು, ಬೀದಿ ವ್ಯಾಪಾರಸ್ಥರು, ಹಣ್ಣು, ತರಕಾರಿ ಸೇರಿದಂತೆ ವಿವಿಧ ವಸ್ತುಗಳ ಮಾರಾಟಗಾರರು ಗ್ರಾಮಕ್ಕೆ ಬಂದು ತಮ್ಮೂರಿನತ್ತ ಮರಳಿ ಹೋದ ದೃಶ್ಯ ನಡೆಯಿತು.
ಲಾಕ್‍ಡೌನ್ ತೆರವುಗೊಳಿಸಿದ್ದರಿಂದ ಗೋಕಾಕ ತಾಲೂಕಿನ ಹಲವಾರು ಹಳ್ಳಿಗಳಲ್ಲಿ ಸೇರುವ ವಾರದ ಸಂತೆಗೆ ನೂರಾರು ಜನ ಬೀದಿ ವ್ಯಾಪಾರಸ್ಥರು, ಹಣ್ಣು, ತರಕಾರಿ ಸೇರಿದಂತೆ ವಿವಿಧ ವಸ್ತುಗಳ ಮಾರಾಟಗಾರರು ಹೋಗುತ್ತಿದ್ದಾರೆ. ಸಂತೆ ರದ್ದುಗೊಳಿಸಿದ ವಿಷಯ ತಿಳಿದು ಬಂದ ದಾರಿಗೆ ಸುಂಕವಿಲ್ಲದೇ ಮರಳಿ ಮನೆಗೆ ಹೋಗುವಂತಾಗಿದೆ. ಸಂತೆ ಸೇರುವ ದಿನದ ಮುಂಚೆ ಸಂತೆ ರದ್ದುಪಡಿಸಿದ ಸಂಗತಿಯನ್ನು ಸ್ಥಳೀಯ ಹಿರಿಯ ನಾಗರಿಕರು ಬಹಿರಂಗಪಡಿಸಬೇಕು ಅಂಬುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.
ಗ್ರಾಮದ ಹಿರಿಯ ನಾಗರಿಕರ ಮಾರ್ಗದರ್ಶನದಂತೆ ಇನ್ನೂ ಅಗಸ್ಟ ತಿಂಗಳಲ್ಲಿ ಬರುವ ಪ್ರತಿ ರವಿವಾರದ ಸಂತೆಯನ್ನು ರದ್ದುಗೊಳಿಸಲಾಗಿದೆ. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ಸಹಕರಿಸಬೇಕು. ಹಣ್ಣು, ತರಕಾರಿ ಸೇರಿದಂತೆ ವಿವಿಧ ವಸ್ತುಗಳನ್ನು ಗ್ರಾಮದಲ್ಲಿರುವ ಮನೆ ಮನೆಗೆ ಹೋಗಿ ಮಾರಾಟ ಮಾಡಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ ಮನವಿ ಮಾಡಿಕೊಂಡಿದ್ದಾರೆ.
ಲಾಕ್‍ಡೌನ್ ತೆರವುಗೊಂಡಿದೆ ಹೊರತು ಕರೊನಾ ಸೋಂಕು ಹರಡುವಿಕೆ ಇನ್ನೂ ಕಡಿಮೆ ಆಗಿಲ್ಲ, ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳೀಯರು ತಪ್ಪದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಗ್ರಾಮ ಪಂಚಾಯತಿ ಪಿಡಿಒ ಎಚ್.ಎನ್.ಬಾವಿಕಟ್ಟಿ ತಿಳಿಸಿದ್ದಾರೆ.