ಬೆಳಗಾವಿ:ಸೂಪರ ಸ್ಪೆಷಾಲಿಟಿ ಆಸ್ಪತ್ರೆಗೆ ಬೆಳಗಾವಿ ಅಸ್ತು : ಎಸ್.ಟಿ.ಕಳಸದ ಮಾಹಿತಿ
ಸೂಪರ ಸ್ಪೆಷಾಲಿಟಿ ಆಸ್ಪತ್ರೆಗೆ ಬೆಳಗಾವಿ ಅಸ್ತು : ಎಸ್.ಟಿ.ಕಳಸದ ಮಾಹಿತಿ
ಬೆಳಗಾವಿ ಅ 30: ಕಂದಾಯ ವಿಭಾಗದ ವ್ಯಾಪ್ತಿಯ ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತೆ ನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿರುವುದರಿಂದ, ಕಾಮಗಾರಿ ಆರಂಭದ ಹಾದಿ ಸುಗಮವಾದಂತಾಗಿದೆ.
ಇಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದಾಗಿ ಹಲವು ವರ್ಷಗಳಿಂದಲೂ ಹೇಳಲಾಗುತ್ತಿತ್ತು. ಪ್ರಸಕ್ತ ಸಾಲಿನ ಬಜೆಟ್ನಲ್ಲೂ ಘೋಷಿಸಲಾಗಿತ್ತು. ಇದೀಗ, ಅನುಮೋದನೆಯನ್ನೂ ನೀಡಲಾಗಿದೆ. ಇದರೊಂದಿಗೆ ಹಲವು ದಿನಗಳಿಂದಲೂ ಇದ್ದ ಬೇಡಿಕೆಯೊಂದು ಈಡೇರುವ ಲಕ್ಷಣಗಳು ಗೋಚರಿಸುತ್ತಿವೆ.
ಒಂದೇ ಸೂರಿನಡಿ ಎಲ್ಲ ರೋಗಗಳಿಗೂ ಉಚಿತ ಮತ್ತು ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.
ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಧನ್ವಂತರಿ ವಿಭಾಗದ (ರಾಣಿ ಚನ್ನಮ್ಮ ವೃತ್ತದ ಕಡೆಗೆ ಮುಖ ಮಾಡಿದಂತೆ) ಹಳೆಯ ಕಟ್ಟಡವನ್ನು ಕೆಡವಿ ಆ ಜಾಗದಲ್ಲಿ ಹೊಸ ಆಸ್ಪತ್ರೆ ನಿರ್ಮಿಸಲು ಯೋಜಿಸಲಾಗಿದೆ.
ಏನಿದು ಯೋಜನೆ?: 200 ಹಾಸಿಗೆ, 50 ಐಸಿಯುಗಳ (ತೀವ್ರ ನಿಗಾ ಘಟಕ) ವ್ಯವಸ್ಥೆ ಹೊಂದಿರುವ ಒಟ್ಟು 250 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಇದಾಗಲಿದ್ದು, 6 ಮಹಡಿಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ₹ 195 ಕೋಟಿ ಅನುದಾನ ಒದಗಿಸಲಾಗುತ್ತಿದೆ. ಈ ಹಣದಲ್ಲಿಯೇ ಉಪಕರಣ ಹಾಗೂ ಪೀಠೋಪಕರಗಳನ್ನೂ ಖರೀದಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ವತಿಯಿಂದ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ವಿಭಾಗಗಳನ್ನು ಒಳಗೊಂಡ ನರರೋಗ, ನವಜಾತ ಶಿಶು ಮತ್ತು ಮಕ್ಕಳ, ಹೃದ್ರೋಗ, ರಕ್ತನಾಳ, ಕಿಡ್ನಿ ಸಂಬಂಧಿಸಿದ, ಮುಖದ ಎಲುಬಿನ ಸಂಕೀರ್ಣ, ಜಠರ ಮತ್ತು ಕರುಳು ರೋಗ, ಪ್ಲಾಸ್ಟಿಕ್ ಸರ್ಜರಿ, ನಿರ್ನಾಳ ಗ್ರಂಥಿ, ತುರ್ತು ಚಿಕಿತ್ಸೆ ಮತ್ತು ಕ್ಯಾನ್ಸರ್ ವಿಭಾಗಗಳ ಸ್ಥಾಪನೆಗೆ ಯೋಜಿಸಲಾಗಿದೆ. ಒಟ್ಟು 12 ವಿಭಾಗಗಳಿಗೆ ತಕ್ಕಂತೆ ಪೂರಕ ಪ್ರಯೋಗಾಲಯಗಳನ್ನೂ ಸ್ಥಾಪಿಸಲಾಗುವುದು.
ಅತ್ಯಾಧುನಿಕ ಉಪಕರಣಗಳಿಗಾಗಿ ₹ 52 ಕೋಟಿ ನಿಗದಿಪಡಿಸಲಾಗಿದೆ. ಭಾರತೀಯ ವೈದ್ಯಕೀಯ ಪರಿಷತ್ ಮಾರ್ಗಸೂಚಿ ಪ್ರಕಾರ, ವಿಭಾಗವೊಂದಕ್ಕೆ ತಜ್ಞ ವೈದ್ಯರೂ ಸೇರಿದಂತೆ 10ರಿಂದ 12 ವೈದ್ಯಕೀಯ ಸಿಬ್ಬಂದಿ ಬೇಕಾಗುತ್ತಾರೆ. 200ಕ್ಕೂ ಹೆಚ್ಚು ನರ್ಸಿಂಗ್ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕಾಗುತ್ತದೆ.
ಹೆಚ್ಚಿನ ಆರೋಗ್ಯ ಸೇವೆ ಲಭ್ಯ: 40 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ದಾಟಿರುವ ಮತ್ತು 11 ತಾಲ್ಲೂಕುಗಳನ್ನು ಹೊಂದಿರುವ ಜಿಲ್ಲೆಯಲ್ಲಿ 740 ಹಾಸಿಗೆಯ ಜಿಲ್ಲಾಸ್ಪತ್ರೆ ಮಾತ್ರ ಇದೆ. ತುರ್ತು ಹಾಗೂ ಅತ್ಯಾಧುನಿಕ ಆರೋಗ್ಯ ಸೇವೆ ಪಡೆಯುವುದಕ್ಕಾಗಿ ದುಬಾರಿಯಾದ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾದ ಸ್ಥಿತಿ ರೋಗಿಗಳದಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ನಿತ್ಯ 1500ರಿಂದ 2000 ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತ್ಯವೂ 200ರಿಂದ 250 ಮಂದಿ ಹೊರರೋಗಿಗಳು ಇರುತ್ತಾರೆ. ರೋಗಿಗಳ ಸಂಖ್ಯೆ ಹೆಚ್ಚುವುದರಿಂದ, ಸಮರ್ಪಕ ಸೇವೆ ಒದಗಿಸುವುದಕ್ಕೆ ಕಷ್ಟಸಾಧ್ಯವಾಗುತ್ತಿದೆ. ಹೀಗಾಗಿ, ಇಲ್ಲಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅತ್ಯಗತ್ಯ ಎನ್ನವು ಬೇಡಿಕೆ ಇತ್ತು.
‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯಾಗುವುದರಿಂದ ಜಿಲ್ಲೆಯವರಿಗೆ ಮಾತ್ರವಲ್ಲದೇ, ವಿಜಯಪುರ, ಬಾಗಲಕೋಟೆ, ಧಾರವಾಡ ಜಿಲ್ಲೆಗಳು ಮಾತ್ರವಲ್ಲದೇ, ನೆರೆಯ ಗೋವಾ ಹಾಗೂ ಮಹಾರಾಷ್ಟ್ರದವರಿಗೂ ಅನುಕೂಲವಾಗುತ್ತದೆ. ಬಡವರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಉಚಿತವಾಗಿ, ರಿಯಾಯಿತಿ ದರದಲ್ಲಿ ಒದಗಿಸಬಹುದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಶೀಘ್ರವೇ ಕಾಮಗಾರಿ ಆರಂಭಿಸಿ, ಒಂದು ವರ್ಷದೊಳಗೆ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ’ ಎಂದು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ನಿರ್ದೇಶಕ ಡಾ.ಷಣ್ಮುಖ ಟಿ. ಕಳಸದ ತಿಳಿಸಿದ್ದಾರೆ .
ಖಾಸಗಿ ಅವಲಂಬನೆ ತಗ್ಗಿಸಲು: ‘ಜಿಲ್ಲಾಸ್ಪತ್ರೆಯಲ್ಲಿ ಪ್ರಸ್ತುತ ಕಿಡ್ನಿ ಸಮಸ್ಯೆಗೆ ಸಂಬಂಧಿಸಿದ ಆರೋಗ್ಯ ಸೇವೆ ಮಾತ್ರ ಲಭ್ಯವಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾದಲ್ಲಿ ಅಲ್ಲಿ ವಿವಿಧ 12 ಪ್ರಮುಖ ವಿಭಾಗಗಳು ಕಾರ್ಯಾರಂಭ ಮಾಡುತ್ತವೆ. ಇದರಿಂದ, ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಲಭ್ಯವಿರುತ್ತದೆ. ಮುಖ್ಯವಾಗಿ ಹೃದ್ರೋಗಕ್ಕೆ ಸಂಬಂಧಿಸಿದ ವಿಭಾಗದಿಂದ ಹೆಚ್ಚಿನ ಅನುಕೂಲವಾಗುತ್ತದೆ. ಜನರಿಗೆ ಖಾಸಗಿ ಆಸ್ಪತ್ರೆಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ’ ಎನ್ನುತ್ತಾರೆ ಅವರು.
ಅಂಕಿ-ಅಂಶ
₹195 ಕೋಟಿ ಆಸ್ಪತ್ರೆ ನಿರ್ಮಾಣಕ್ಕೆ ನಿಗದಿಯಾದ ಅನುದಾನ
₹52 ಕೋಟಿ ಉಪಕರಣಗಳಿಗೆ ನಿಗದಿಯಾದ ಹಣ50ತುರ್ತು ನಿಗಾ ಘಟಕಗಳು , 250 ಹಾಸಿಗೆಗಳ ಸಾಮರ್ಥ್ಯ ,12 ಆರಂಭಗೊಳ್ಳಲಿರುವ ವೈದ್ಯಕೀಯ ವಿಭಾಗಗಳು
ಡಾ.ಷಣ್ಮುಖ ಟಿ. ಕಳಸದ
ನಿರ್ದೇಶಕರು, ಬಿಮ್ಸ್ :
ಸರ್ಕಾರದಿಂದ ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು