ಘಟಪ್ರಭಾ:ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸ್ವಂತ ವೆಚ್ಚ: ಕೊರೋನಾ ಸೊಂಕಿತರಿಗೆ ಆಮ್ಲಜನಕ ಪೂರೈಕೆ ಘಟಕ ಆರಂಭ : ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸ್ವಂತ ವೆಚ್ಚ:
ಕೊರೋನಾ ಸೊಂಕಿತರಿಗೆ ಆಮ್ಲಜನಕ ಪೂರೈಕೆ ಘಟಕ ಆರಂಭ : ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 8 :
ಕೊರೋನಾ ರೋಗಿಗಳ ಆರೈಕೆಗಾಗಿ ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಕೇಂದ್ರಿಕೃತ ಆಮ್ಲಜನಕ ಘಟಕಗಳನ್ನು ಪ್ರಾರಂಭಿಸಿದ್ದಾರೆಂದು ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದರು.
ಇತ್ತೀಚೆಗೆ ಇಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೊರೋನಾ ಸೊಂಕಿತರಿಗಾಗಿ ಆರಂಭಿಸಲಾದ ಕೇಂದ್ರಿಕೃತ ಆಮ್ಲಜನಕ ಘಟಕದ ಆರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೊಂಕಿತರ ಸುರಕ್ಷತೆ ಮತ್ತು ಆರೈಕೆಗಾಗಿ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸ್ವಂತ ಹಣವನ್ನು ಇದಕ್ಕಾಗಿ ವ್ಯಯಿಸುತ್ತಿದ್ದಾರೆ ಎಂದು ಹೇಳಿದರು.
ಈಗಾಗಲೇ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಕೊರೋನಾ ಸೊಂಕಿತರಿಗಾಗಿ ದಿನಬಳಕೆಯ ವಸ್ತುಗಳನ್ನೊಳಗೊಂಡ ಮೆಡಿಕಲ್ ಕಿಟ್‍ಗಳನ್ನು ನೀಡುತ್ತಿದ್ದಾರೆ. ಕಷ್ಟಕರ ದಿನಗಳಲ್ಲಿ ಸೊಂಕಿತರಿಗೆ ಸಹಾಯ ಮಾಡುತ್ತಿರುವ ಅವರ ಪರೋಪಕಾರ ಗುಣವನ್ನು ಶ್ಲಾಘಿಸಿದ ಅವರು, ರೋಗಿಗಳ ಆರೈಕೆಗಾಗಿ ಮಾಡುತ್ತಿರುವ ಸಮಾಜಮುಖಿ ಕಾರ್ಯಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ತಾಲೂಕಾಡಳಿತದಿಂದ ಅಭಿನಂದನೆ ಸಲ್ಲಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು ಮಾತನಾಡಿ, ಕೊರೋನಾ ಸೊಂಕಿತರಿಗೆ ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು. ಗುಣಮಟ್ಟದ ಚಿಕಿತ್ಸೆ, ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ರೋಗಿಗಳ ಸುರಕ್ಷತೆಗಾಗಿ ಮತ್ತು ಉತ್ತಮ ಆರೈಕೆಗಾಗಿ ಶಾಸಕರು ನಿರಂತರ ಇಲ್ಲಿಯ ಆಗು-ಹೋಗುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಸೊಂಕಿತರು ಗುಣಮುಖರಾಗಿ ಮತ್ತೇ ಎಂದಿನಂತೆ ದೈನಂದಿನ ಕೆಲಸದಲ್ಲಿ ತೊಡಗುವಂತೆ ಅವರು ಆಶಿಸುತ್ತಿದ್ದಾರೆಂದು ಶೇಖರಗೋಳ ತಿಳಿಸಿದರು.
ಈ ಸಂದರ್ಭದಲ್ಲಿ ಮೂಡಲಗಿ ತಹಶೀಲ್ದಾರ ದಿಲ್‍ಶಾದ್ ಮಹಾತ್, ಹಿರಿಯ ತಜ್ಞ ವೈದ್ಯ ಡಾ.ಆರ್.ಎಸ್. ಬೆಣಚಿನಮರಡಿ, ಸಚಿವ ರಮೇಶ ಜಾರಕಿಹೊಳಿ ಕಾರ್ಯಾಲಯದ ಸುರೇಶ ಸನದಿ, ಬಿಇಓ ಅಜೀತ ಮನ್ನಿಕೇರಿ, ಗೋಕಾಕ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಮಹೇಶ ಕೋಣಿ, ಡಾ.ಉದಯ ಅಂಗಡಿ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಘಟಪ್ರಭಾ ಪಿಎಸ್‍ಐ ಎಚ್.ವಾಯ್. ಬಾಲದಂಡಿ, ಎನ್‍ಎಸ್‍ಎಫ್ ಅತಿಥಿ ಗೃಹದ ನಿಂಗಪ್ಪ ಕುರಬೇಟ, ಮುಖಂಡರಾದ ಡಿ.ಎಂ. ದಳವಾಯಿ, ಎಸ್.ಐ. ಬೆನವಾಡೆ, ಮಲ್ಲು ಕೋಳಿ, ಸುರೇಶ ಪೂಜೇರಿ, ಕೆ.ಬಿ. ಪಾಟೀಲ, ಜಗದೀಶ ಚೂರಿ, ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಗಂಗರಡ್ಡಿ, ಪ್ರಾಚಾರ್ಯ ಭಾವಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.