ಗೋಕಾಕ:ಸಾರ್ವಜನಿಕರು ಸರಳ ಮತ್ತು ಸಾಂಕೇತಿಕವಾಗಿ ಗಣೇಶ ಉತ್ಸವ ಆಚರಿಸಬೇಕು : ಐ.ಎಮ್.ಬೇಪಾರಿ
ಸಾರ್ವಜನಿಕರು ಸರಳ ಮತ್ತು ಸಾಂಕೇತಿಕವಾಗಿ ಗಣೇಶ ಉತ್ಸವ ಆಚರಿಸಬೇಕು : ಐ.ಎಮ್.ಬೇಪಾರಿ
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಅ 15 :
ಕರೊನಾ ವ್ಯಾಪಕವಾಗಿ ಹರಡುತ್ತಿದ್ದು, ಜನದಟ್ಟನೆ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ, ಸ್ಥಳೀಯ ಸಾರ್ವಜನಿಕರು ಸರಳ ಮತ್ತು ಸಾಂಕೇತಿಕವಾಗಿ ಗಣೇಶ ಉತ್ಸವ ಆಚರಿಸಬೇಕು ಎಂದು ಕುಲಗೋಡ ಪೊಲೀಸ್ ಠಾಣೆ ಎಎಸ್‍ಐ ಐ.ಎಮ್.ಬೇಪಾರಿ ಹೇಳಿದ್ದಾರೆ.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿ ಕಾರ್ಯಲಯದ ಸಭಾಭವನದಲ್ಲಿ ಶುಕ್ರವಾರದಂದು ನಡೆದ ಗಣೇಶೋತ್ಸವ ಆಚರಣೆ ಸ್ಥಳೀಯ ವಿವಿಧ ಸಂಘ-ಸಂಸ್ಥೆ, ಮಂಡಳಿಗಳಿಗೆ ಸರ್ಕಾರದ ಹೊಸ ನಿಯಮಾವಳಿ ತಿಳಿಸಲು ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದರು.
ದೇವಸ್ಥಾನಗಳಲ್ಲಿ 4 ಅಡಿ ಎತ್ತರವಿರುವ ಗಣಪತಿ ಮೂರ್ತಿ ಕೂಡ್ರಿಸಿ, ದರ್ಶನಕ್ಕೆ ಆಗಮಿಸುವ ಪ್ರತಿಯೊಬ್ಬರೂ ತಪ್ಪದೇ ದೈಹಿಕ ಅಂತರ ಕಾಯ್ದುಕೊಳ್ಳುವುದರ ಜೋತೆಗೆ ಮಾಸ್ಕ್ ಧರಿಸುವಂತೆ ಹೇಳಬೇಕು. ಪ್ರತಿದಿನ ಸ್ಯಾನಿಟೈಸ್ ಮಾಡಿಸುವುದು ಸೇರಿದಂತೆ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಎಎಸ್‍ಐ ಬೇಪಾರಿ ತಿಳಿಸಿದರು.
ಬೆಟಗೇರಿ ಬೀಟ್ ಪೊಲೀಸ್ ಪೇದೆ ಬ್ರಹ್ಮಾನಂದ ಬಿರಾದಾರ ಮಾನಾಡಿ, ಈ ಸಲ ಗಣೇಶ ಉತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಬೇಕು. ಗಣಪತಿ ತರುವಾಗ ಮತ್ತು ವಿಸರ್ಜನೆ ಮಾಡುವಾಗ ಧ್ವನಿವರ್ಧಕ, ಸೌಂಡ್ ಸಿಸ್ಟಂ, ಡಾಲ್ಬಿ ಹಚ್ಚಬಾರದು, ಕಾನೂನು ಉಲ್ಲಂಘಿಸಿದವರ ಮೇಲೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗುವುದು. ಮೂರ್ತಿ ಪ್ರತಿಷ್ಠಾಪನೆ ಬಳಿಕ ಗಣಪತಿ ಹತ್ತಿರ ಇಬ್ಬರು ಕಡ್ಡಾಯವಾಗಿ ಇರಬೇಕು ಎಂದು ಸೂಚಿಸಿದರು.
ಯುವ ಮುಖಂಡರಾದ ಈರಣ್ಣ ಸಿದ್ನಾಳ, ಮಾರುತಿ ಚಂದರಗಿ, ಗುಳಪ್ಪ ಪಣದಿ, ಶಿವಾನಂದ ಕಂಬಾರ, ಶಂಕರ ಕಡಕಬಾಂವಿ, ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ, ಸುರೇಶ ಬಾಣಸಿ, ಶಿವಾನಂದ ಐದುಡ್ಡಿ, ಈರಣ್ಣ ದಂಡಿನ ಸೇರಿದಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಸ್ಥಳೀಯ ವಿವಿಧ ಸಂಘ-ಸಂಸ್ಥೆ, ಮಂಡಳಿಗಳ ಪದಾಧಿಕಾರಿಗಳು, ಸದಸ್ಯರು, ಇತರರು ಇದ್ದರು.