ಗೋಕಾಕ:ಪರಿಹಾರ ಹಣ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಎಮ್.ಜಿ.ಹಿರೇಮಠ ಅವರಿಗೆ ನೆರೆ ಸಂತ್ರಸ್ತರ ಮನವಿ
ಪರಿಹಾರ ಹಣ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಎಮ್.ಜಿ.ಹಿರೇಮಠ ಅವರಿಗೆ ನೆರೆ ಸಂತ್ರಸ್ತರ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 18 :
ಕಳೆದ ವರ್ಷ ಪ್ರವಾಹದಿಂದ ಮನೆ ಕಳೆದುಕೊಂಡ ನೆರೆ ಸಂತ್ರಸ್ತರು ಸೋಮವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಎಮ್.ಜಿ.ಹಿರೇಮಠ ಅವರನ್ನು ಭೇಟಿ ಮಾಡಿ ತಕ್ಷಣ ಪರಿಹಾರದ ಹಣವನ್ನು ಮಂಜೂರು ಮಾಡುವಂತೆ ವಿನಯಪೂರ್ವಕವಾಗಿ ಬೇಡಿಕೊಂಡರು.
ಜಿಲ್ಲಾಧಿಕಾರಿಗಳು ಪ್ರವಾಹ ಪರಿಸ್ಥಿತಿಯನ್ನು ವಿಕ್ಷೀಸಲು ನಗರಕ್ಕೆ ಆಗಮಿಸಿದ ಸುದ್ದಿಯನ್ನು ತಿಳಿದು ನೆರೆ ಸಂತ್ರಸ್ತರು ಪ್ರವಾಸಿ ಮಂದಿರಕ್ಕೆ ಧಾವಿಸಿ ಬಂದು ತಮ್ಮ ಅಳಲನ್ನು ತೋಡಿಕೊಂಡರು.
ಕಳೆದ ವರ್ಷ ಎಂದು ಕಂಡರಿಯದ ಪ್ರವಾಹ ಬಂದು ಬಹಳಷ್ಟು ಜನರ ಬದುಕನ್ನು ಕಸಿದುಕೊಂಡು ನಿರ್ಗತಿಕರನ್ನಾಗಿ ಮಾಡಿದೆ. ಕೆಲವರಿಗೆ ಸರ್ಕಾರದಿಂದ ಪರಿಹಾರ ಹಣ ಮಂಜೂರಾಗಿ ಅವರು ಈಗಾಗಲೇ ಮನೆಗಳನ್ನು ಕಟ್ಟಿಸಿಕೊಂಡು ವಾಸವಾಗಿದ್ದಾರೆ. ನಮಗೆ ಮನೆಯಿಲ್ಲದೇ ನಿರ್ಗತಿಕರಾಗಿ ಕಳೆದ ಒಂದು ವರ್ಷದಿಂದ ಕಷ್ಟದಲ್ಲಿಯೇ ಬದುಕನ್ನು ನಡೆಸುತ್ತಿದ್ದು ದಯಾಳುಗಳಾದ ತಾವು ಕೂಡಲೇ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು. ನಾವು ಈಗಾಗಲೇ ದುಡಿಯಲು ಹೋಗದೇ ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರುವದಿಲ್ಲ, ನಮ್ಮ ಫಲಾನುಭವಿ ಸಂಖ್ಯೆಗಳು ಡಿಲಿಟ್ ಆಗಿವೆ, ಹೈಡ್ ಆಗಿವೆ ಅಂತಾ ಸಂಬಂಧಿಸಿದ ಅಧಿಕಾರಿಗಳು ತಿಳಿಸುತ್ತಾ ಬಂದಿದ್ದಾರೆ. ನಮಗೆ ಒಂದು ರೂಪಾಯಿ ಪರಿಹಾರ ಹಣ ಬಂದಿಲ್ಲ, ಹಿಂದಿನ ಜಿಲ್ಲಾಧಿಕಾರಿಗಳಿಗೆ ಕೂಡಾ ಮನವಿಯನ್ನು ಸಲ್ಲಿಸಿ ಬೇಡಿಕೊಳ್ಳಲಾಗಿತ್ತು ಎಂದು ನೆನಪಿಸಿದ ನೆರೆ ಸಂತ್ರಸ್ತರು, ತಾವಾದರೂ ನಮಗೆ ಮನೆ ಕಟ್ಟಿಸಿಕೊಳ್ಳಲು ಹಣವನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳ ಕಾಲಿಗೆ ಬಿದ್ದು ಬೇಡಿಕೊಂಡ ಮಹಿಳೆಯೊರ್ವಳ ಸ್ಥಿತಿ ಎಂತವರ ಮನಸ್ಸನ್ನು ಕರಗಿಸುವಂತೆ ಇತ್ತು ಕೂಡಲೇ ಸಂತ್ರಸ್ತರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ತಮ್ಮ ಸಮಸ್ಯೆಯನ್ನು 10 ದಿನಗಳಲ್ಲಿ ಈಡೇರಿಸುವುದಾಗಿ ಭರವಸೆಯನ್ನು ನೀಡಿದರಲ್ಲದೇ ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಇಂತಹ 9ಸಾವಿರ ಪ್ರಕರಣಗಳು ಇದ್ದು ಕೂಡಲೇ ಇತ್ತಥ್ರ್ಯಗೊಳಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ, ಪೌರಾಯುಕ್ತ ಶಿವಾನಂದ ಹಿರೇಮಠ, ಕಂದಾಯ ನಿರೀಕ್ಷಕ ಎಸ್.ಎನ್.ಹಿರೇಮಠ ಇದ್ದರು.