RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ : ಸಣ್ಣಕ್ಕಿ

ಗೋಕಾಕ:ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ : ಸಣ್ಣಕ್ಕಿ 

ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ : ಸಣ್ಣಕ್ಕಿ
ಜಿಲ್ಲಾ ಹಾಲು ಒಕ್ಕೂಟದಿಂದ ಮೂಡಲಗಿ ತಾಲೂಕಿನ 65 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ.ಗಳ ಪ್ರೋತ್ಸಾಹಧನದ ಚೆಕ್‍ಗಳ ವಿತರಣೆ
ಗೋಕಾಕ ಸೆ 3 : ಕೊರೋನಾದಂತಹ ಸಂಕಷ್ಟದ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಕಾರ್ಯ ಪ್ರಶಂಸನೀಯವೆಂದು ಮುಖಂಡ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಗುರುವಾರದಂದು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಮೂಡಲಗಿ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಚೆಕ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ಕೋವಿಡ್‍ದಂತಹ ಸಮಯದಲ್ಲಿ ಅವರು ನಿರ್ವಹಿಸಿರುವ ಪಾತ್ರ ಅದ್ಭುತವೆಂದು ಹೇಳಿದರು.
ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಮತಕ್ಷೇತ್ರದ ಪ್ರತಿ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು ವಿತರಿಸುವ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಗಣನೀಯ ಸೇವೆ ಸಲ್ಲಿಸಿದ್ದಾರೆ. ಪ್ರತಿ ಮನೆ ಮನೆಗಳಿಗೆ ತೆರಳಿ ಸಮೀಕ್ಷೆ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಜೊತೆಗೆ ಆರೋಗ್ಯ ಇಲಾಖೆಯವರಿಗೆ ನಾಗರೀಕರ ಅರೋಗ್ಯ ಸುರಕ್ಷತೆಯ ಕುರಿತು ಕಾಲ ಕಾಲಕ್ಕೆ ಮಾಹಿತಿ ನೀಡಿದ್ದಾರೆ. ಇಷ್ಟಾದರೂ ಅವರಿಗೆ ವೇತನ ಕಡಿಮೆಯಾಗಿದೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರ ಸೇವೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ಧನ ವಿತರಿಸುತ್ತಿರುವ ಕೆಎಂಎಫ್‍ನ ಕಾರ್ಯ ಶ್ಲಾಘನೀಯವಾಗಿದೆ. ಕೋವಿಡ್‍ದಂತಹ ಸಮಯದಲ್ಲಿ ಗ್ರಾಹಕರು ಮತ್ತು ರೈತರ ಹಿತದೃಷ್ಟಿಯಿಂದ ಒಂದೂ ದಿನ ರಜೆ ಪಡೆಯದೇ ನಿತ್ಯ ಸೇವೆ ನೀಡಿರುವ ಕೆಎಂಎಫ್ ನೌಕರರ ಕೆಲಸ ಮೆಚ್ಚುವಂತದ್ದಾಗಿದೆ. ಅದರಲ್ಲೂ ಕೊರೋನಾ ಸೇನಾನಿಗಳಿಗೆ ಕೆಎಂಎಫ್ ಉತ್ತಮ ಗೌರವ ನೀಡುತ್ತಿದೆ ಎಂದು ಶ್ಲಾಘಿಸಿದರು.
ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಎಂ.ವ್ಹಿ. ಲಕ್ಕಣ್ಣವರ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಕೆಎಂಎಫ್ ಪರಿಚಯಿಸಿದೆ. ಗ್ರಾಹಕರ ಮತ್ತು ರೈತರ ಏಳ್ಗೆಗಾಗಿ ಸಂಸ್ಥೆ ಕೆಲಸ ನಿರ್ವಹಿಸುತ್ತಿದೆ. 64 ವಿವಿಧ ಬಗೆಯ ಉತ್ಪನ್ನಗಳನ್ನು ನಂದಿನಿ ಹೊಂದಿದೆ. ಆಶಾ ಕಾರ್ಯಕರ್ತೆಯರಿಗೆ ವೇತನ ಕಡಿಮೆ ಇದ್ದರಿಂದ ಕೆಎಂಎಫ್ ಅವರಿಗಾಗಿಯೇ ಗ್ರಾಮ ಹಾಗೂ ತಳಮಟ್ಟದಲ್ಲಿ ನಂದಿನಿ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವ ದೃಷ್ಟಿಯಿಂದ ಕೆಲಸ ನಿರ್ವಹಿಸಿದರೆ ಯೋಗ್ಯ ಸಂಬಳ ಸಿಗಲಿದೆ. ಆಶಾ ಕಾರ್ಯಕರ್ತೆಯರಿಗೆ ಎಷ್ಟು ಗೌರವ ನೀಡಿದರೂ ಅದು ಕಡಿಮೆಯೇ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ.ಗಳ ಪ್ರೋತ್ಸಾಹ ಧನದ ಚೆಕ್‍ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಮಲ್ಲಪ್ಪ ಪಾಟೀಲ, ರಾಮಣ್ಣಾ ಬಂಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ, ದಾಸಪ್ಪ ನಾಯಿಕ, ಲಕ್ಕಪ್ಪ ಲೋಕುರಿ, ಸಹಕಾರ ಇಲಾಖೆಯ ಬಿ.ಕೆ. ಗೋಖಲೆ ಅವರು ಉಪಸ್ಥಿತರಿದ್ದರು. ವಿಸ್ತರಣಾಧಿಕಾರಿ ಕರಬನ್ನವರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Related posts: