ಗೋಕಾಕ:ಟೈರ್ ಗೆ ಬೆಂಕಿ ಹಚ್ಚಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ರೈತರ ಪ್ರತಿಭಟನೆ
ಟೈರ್ ಗೆ ಬೆಂಕಿ ಹಚ್ಚಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ರೈತರ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 28 :
ರೈತರಿಗೆ ಮರಣ ಶಾಸನವಾಗಿರುವ ಎಪಿಎಮ್‍ಸಿ ಹಾಗೂ ಭೂಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಸೋಮವಾರದಂದು ರೈತ ಸಂಘದವರು ಕರೆ ನೀಡಿದ ಬಂದ್ ಕರೆಯು ಬಹುತೇಕ ಯಶಸ್ವಿಯಾಗಿದೆ.
ಮುಂಜಾನೆ 10 ಗಂಟೆಗೆ ಗೋಕಾಕ ನಗರದ ನಾಕಾ ನಂ 1ರ ರಾಜ್ಯ ಹೆದ್ದಾರಿಯಲ್ಲಿ ಸೇರಿದ ರೈತ ಸಂಘದ ಹಾಗೂ ವಿವಿಧ ಕನ್ನಡ ಪರ ಸಂಘಟನೆ ಮತ್ತು ದಲಿತ ಸಂಘಟನೆಯ ಕಾರ್ಯಕರ್ತರು, ಮುಖಂಡರು ರಸ್ತೆ ತಡೆ ನಡೆಸಿ, ಟೈರ್ ಬೆಂಕಿ ಹಚ್ಚಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ರೈತರು ತಮ್ಮ ಎತ್ತಿನ ಬಂಡಿಗಳಿಂದ ಆಗಮಿಸಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದರಿಂದ ಸಾರ್ವಜನಿಕರು ಪರದಾಡಿದರು.
ನಂತರ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಸಂಚರಿಸಿ ನಂತರ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ, ಧರಣಿ ಸತ್ಯಾಗ್ರಹ ನಡೆಸಿದರು.
ಪ್ರತಿಭಟನಾಕಾರನ್ನುದ್ದೇಶಿಸಿ ವಿವಿಧ ಸಂಘಟನೆಗಳ ಮುಖಂಡರಾದ ಭೀಮಶಿ ಗದಾಡಿ, ಗಣಪತಿ ಈಳಿಗೇರ, ಕುಮಾರ ತಿಗಡಿ, ಲಕ್ಷ್ಮಣ ತಳಗಡೆ, ರಮೇಶ ಮಾದರ, ಸಂತೋಷ ಖಂಡ್ರಿ, ಆಯಿಶಾ ಸನದಿ, ವಿವೇಕ ಜತ್ತಿ ಅವರು ಮಾತನಾಡಿ, ರೈತರಿಗೆ ಮಾರಕವಾಗಿರುವ ಎಪಿಎಮ್‍ಸಿ ಹಾಗೂ ಭೂಸುಧಾರಣಾ ಕಾಯ್ದೆ ಹಾಗೂ ಕಾರ್ಮಿಕರ ಕಾಯ್ದೆ ತಿದ್ದುಪಡಿಯನ್ನು ಖಂಡಿಸಿದರು. ಎಲ್ಲಾ ವಲಯಗಳನ್ನು ಖಾಸಗಿಕರಣಗೊಳಿಸಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮುಕ್ತ ಆಹ್ವಾನ ನೀಡುತ್ತಿವೆ. ಇದರಿಂದ ರೈತ ಸೇರಿದಂತೆ ಇಡೀ ದೇಶದ ಜನತೆ ಸಂಕಷ್ಟಕ್ಕಿಡಾಗುತ್ತಾರೆ ಎಂಬುವುದು ಕನಿಷ್ಠ ಜ್ಞಾನವಿಲ್ಲದೇ ಇರುವ ಸರ್ಕಾರಗಳಾಗಲಿ ಹಾಗೂ ಜನಪ್ರತಿನಿಧಿಗಳು ಯಾಕೇ ಬೇಕೆಂದು ಪ್ರಶ್ನಿಸಿದ ಅವರು ಖಾಸಗಿಕರಣವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನೂರಾರು ರೈತ ಮುಖಂಡರು ಭಾಗವಹಿಸಿದರು