ಗೋಕಾಕ:ಯಾರ ಮಡಿಲಿಗೆ ಗೋಕಾಕ ನಗರಸಭೆ ಖುರ್ಚಿ :ಕುತೂಹಲ ಸೃಷ್ಟಿಸಿದ ಸಚಿವ ರಮೇಶ ಮತ್ತು ಅಂಬಿರಾವ ಪಾಟೀಲ ರಾಜಕೀಯ ಆಟ
ಯಾರ ಮಡಿಲಿಗೆ ಗೋಕಾಕ ನಗರಸಭೆ ಖುರ್ಚಿ :ಕುತೂಹಲ ಸೃಷ್ಟಿಸಿದ ಸಚಿವ ರಮೇಶ ಮತ್ತು ಅಂಬಿರಾವ ಪಾಟೀಲ ರಾಜಕೀಯ ಆಟ
ಕೊನೆಗೂ ಕೂಡಿಬಂದ ಅಧಿಕಾರ ಭಾಗ್ಯ : ಆಕಾಂಕ್ಷಿಗಳಲ್ಲಿ ಹೆಚ್ಚಿದ ಪೈಪೋಟಿ
ವಿಶೇಷ ವರದಿ :
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 12 :
ಕಳೆದ ಎರೆಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಸರಕಾರ ಮೀಸಲಾತಿ ಪ್ರಕಟಿಸಿದ ಬೆನ್ನೆಲ್ಲೇ ನಗರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದಿರಿವೆ. ಗೋಕಾಕ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಸ್‍ಸಿ ಮೀಸಲಾತಿ ಆಗಿದೆ. ಇದರಿಂದ ಸಚಿವ ರಮೇಶ ಜಾರಕಿಹೊಳಿ ಹಾಗೂ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಸೂಚಿಸುವ ಅಭ್ಯರ್ಥಿಗಳು ನಗರಸಭೆ ಗದ್ದುಗೆ ಏರಲಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ. ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ನಗರಸಭೆ ಸದಸ್ಯರುಗಳಾದ ದಿ. ಎಸ್.ಎ. ಕೊತವಾಲ ಮತ್ತು ದಿ. ಗಿರೀಶ್ ಖೋತ ಅವರು ನಿಧನರಾಗಿದ್ದರಿಂದ ಯಾರು ಜಾಕ್‍ಪಾಟ್ ಹೊಡೆಯಲಿದ್ದಾರೆ ಎನ್ನುವದು ಯಕ್ಷ ಪ್ರಶ್ನೆಯಾಗಿದೆ.
ಸತತ 4 ಬಾರಿ ಆಯ್ಕೆಯಾಗಿರುವ ವಾರ್ಡ ನಂ. 22 ರ ಹಿರಿಯ ನಗರಸಭೆ ಸದಸ್ಯ ಅಬ್ದುಲ್‍ರಹಮಾನ ದೇಸಾಯಿ, ವಾರ್ಡ ನಂ. 15 ರ ಸದಸ್ಯ ಜಯಾನಂದ ಹುಣಚ್ಯಾಳಿ, ವಾರ್ಡ ನಂ. 3 ಸದಸ್ಯೆ ಶ್ರೀಮತಿ ಶೀಲಾ ವಿರುಪಾಕ್ಷ ಬಿಳ್ಳೂರ, ವಾರ್ಡ ನಂ. 12 ರ ಸದಸ್ಯೆ ಶ್ರೀಮತಿ ಭಾರತಿ ಹತ್ತಿ ಅವರು ಅಧ್ಯಕ್ಷ ಸ್ಥಾನದ ರೇಸ್‍ನಲ್ಲಿದ್ದಾರೆ.
ಉಪಾಧ್ಯಕ್ಷ ಸ್ಥಾನ ಎಸ್.ಸಿ. ಮೀಸಲಾತಿ ಇರುವುದರಿಂದ ವಾರ್ಡ ನಂ. 25ರ ಸದಸ್ಯ ಬಸವರಾಜ ಆರೆನ್ನವರ ಹಾಗೂ ವಾರ್ಡ ನಂ 18 ರ ಸದಸ್ಯ ಹರೀಶ ಬೂದಿಹಾಳ ಅವರುಗಳ ಹೆಸರು ಉಪಾಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿವೆ.
ಗೋಕಾಕ ನಗರಸಭೆಯ ಒಟ್ಟು 31 ಸ್ಥಾನಗಳಲ್ಲಿ ಓರ್ವ ಸದಸ್ಯ ಬಿಜೆಪಿ ಪಕ್ಷದ ಚಿಹ್ನೆ ಮೇಲೆ ಚುನಾವಣೆ ಎದುರಿಸಿ ಗೆದ್ದಿರುವುದನ್ನು ಬಿಟ್ಟರೆ ಉಳಿದ 30 ಸದಸ್ಯರು ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳೇ ನಗರಸಭೆಗೆ ಚುನಾಯಿತರಾಗಿದ್ದಾರೆ.
ಅವಿರೋಧ ಆಯ್ಕೆ : ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ, ಭೀಮಶಿ ಜಾರಕಿಹೊಳಿ ಮತ್ತು ರಮೇಶ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳ ಮಧ್ಯೆ ಹಿಂದೆ ತೀವ್ರ ಪೈಪೋಟಿ ಯಿಂದ ನಡೆದಿದ್ದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹೊರತು ಪಡಿಸಿದರೆ ಜಾರಕಿಹೊಳಿ ಗುಂಪಿನ ಕೈಗೆ ಬಂದ ನಂತರ ಎಲ್ಲಾ ಚುನಾವಣೆಗಳು ಅವಿರೋಧವಾಗಿ ನಡೆದಿವೆ. ಆದರೆ ಈ ಬಾರಿ ನಡೆಯುವ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿತ್ತು, ಸತೀಶ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಹಾಗೂ ಸಚಿವ ರಮೇಶ ಜಾರಕಿಹೊಳಿ ಮತ್ತು ಅಂಬಿರಾವ ಪಾಟೀಲ ಅವರ ಬಣಗಳ ಮಧ್ಯ ತೀವ್ರ ಪೈಪೋಟಿ ನಡೆಯಬೇಕಿತ್ತು. ಆದರೆ ಸಚಿವ ರಮೇಶ ಜಾರಕಿಹೊಳಿ ಅವರ ಬೆಂಗಳೂರಿನ ಹೊಸ ಮನೆಯ ಗೃಹ ಪ್ರವೇಶಕ್ಕೆ ಲಖನ್ ಜಾರಕಿಹೊಳಿ ಅವರು ಹೋಗಿ ಬಂದಾಗಿನಿಂದ ಲಖನ್ ಜಾರಕಿಹೊಳಿ ಸಚಿವ ರಮೇಶ ವಿರುದ್ಧ ಎಲ್ಲಿಯೂ ಮಾತನಾಡದೆ ಮೌನವಾಗಿದ್ದು, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಸತೀಶ ಜಾರಕಿಹೊಳಿ ಅವರು ಗೋಕಾಕ ನಗರದಲ್ಲಿ ಮಾಡುವ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಬೆಂಬಲಿತ ನಗರಸಭೆ ಸದಸ್ಯರಿಗೆ ಹೋಗದಂತೆ ಲಖನ್ ಜಾರಕಿಹೊಳಿ ಫರ್ಮಾನು ಹೊರಡಿಸಿದ್ದಾರೆಂದು ಹೇಳಲಾಗುತ್ತಿದೆ. ಇದರಿಂದ ಗೋಕಾಕ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಅವಿರೋಧವಾಗಿ ನಡೆಯುವ ಸಾಧ್ಯತೆಗಳು ಹೆಚ್ಚಿವೆ.
ಲಖನ್ ಬೆಂಬಲಿತ ಅಭ್ಯರ್ಥಿಗಳಿಲ್ಲ ಸ್ಥಾನ : ಬಹುದಿನಗಳಿಂದ ನೆನೆಗುದಿಗೆ ಬಿದ್ದು ಈಗಷ್ಟೇ ಸರಕಾರ ಪರಿಷ್ಕೃತ ಮೀಸಲಾತಿ ಪ್ರಕಟಿಸಿದೆ. ಜಿಲ್ಲೆಯಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗೆ ಅಭ್ಯರ್ಥಿ ನಾ ಮುಂದೆ, ತಾ ಮುಂದೆ ಎಂದು ಪೈಪೋಟಿ ನಡೆಸುತ್ತಿದ್ದರೆ ಗೋಕಾಕ ನಗರಸಭೆಗೆ ಆಯ್ಕೆಯಾದ ಲಖನ್ ಜಾರಕಿಹೊಳಿ ಬೆಂಬಲಿತ ಒಟ್ಟು 12 ನಗರಸಭೆ ಸದಸ್ಯರಿಗೆ ಈ ಭಾರಿ ಅಧಿಕಾರ ಅನುಭವಿಸುವ ಭಾಗ್ಯ ಸಿಗುವುದೇ ಎನ್ನುವದು ಯಕ್ಷಪ್ರಶ್ನೆಯಾಗಿದೆ. ಗೋಕಾಕ ವಿಧಾನಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಲಖನ್ ಜಾರಕಿಹೊಳಿ ಸೇರಿದಂತೆ ಅವರ ಬೆಂಬಲಿತ ನಗರಸಭೆ ಸದಸ್ಯರು ಸಚಿವ ರಮೇಶ ಜಾರಕಿಹೊಳಿ ಅವರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದನ್ನು ಗೋಕಾಕ ಜನತೆ ಅದರಲ್ಲೂ ರಮೇಶ ಜಾರಕಿಹೊಳಿ ಮತ್ತು ಅಂಬಿರಾವ ಪಾಟೀಲ ಅವರ ಬೆಂಬಲಿತ ನಗರಸಭೆ ಸದಸ್ಯರು ಇನ್ನು ಮರೆತಿಲ್ಲ. ಆಗ ನಡೆದ ಬೆಳವಣಿಗೆ ಈಗ ನಡೆಯುವ ನಗರಸಭೆ ಚುನಾವಣೆಯ ಮೇಲೆ ಆಗಾಧ ಪರಿಣಾಮ ಬೀರಲಿದೆ ಎನ್ನಲಾಗಿದ್ದು ಆಡಳಿತದಲ್ಲಿ ಲಖನ್ ಜಾರಕಿಹೊಳಿ ಗುಂಪಿನ 12 ಜನರಿಗೆ ಸ್ಥಾನ ದೊರೆಯುವುದು ಕಷ್ಟ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಗರದ ಜನತೆಯಲ್ಲಿ ಕುತೂಹಲ ಮೂಡಿಸಿದ್ದು ಎಲ್ಲೆಡೆ ಇದೇ ವಿಷಯದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.