ಬೆಳಗಾವಿ:ರಾಜೀವ ಟೋಪಣ್ಣವರಗೆ ಬೆಳಗಾವಿ ಬೈ ಎಲೆಕ್ಷನ್ ಟಿಕೆಟ್ : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ರಾಜೀವ ಟೋಪಣ್ಣವರಗೆ ಬೆಳಗಾವಿ ಬೈ ಎಲೆಕ್ಷನ್ ಟಿಕೆಟ್ : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ರಾಷ್ಟ್ರಕ್ಕೆ ಮೋದಿ , ರಾಜ್ಯಕ್ಕೆ ಯಡಿಯೂರಪ್ಪ ಬೆಳಗಾವಿ ಲೋಕಸಭೆಗೆ ಟೋಪಣ್ಣವರ : ಸಾಮಾಜಿಕ ಜಾಲತಾಣಗಳಲ್ಲಿ ರಾಜೀವ ವೈರಲ್
ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಅ 15 :
ಕೇಂದ್ರ ರೈಲ್ವೆ ರಾಜ್ಯ ಸಚಿವ ದಿವಂಗತ. ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬರುವ 6 ತಿಂಗಳ ಒಳಗಾಗಿ ಉಪ ಚುನಾವಣೆ ಎದುರಾಗಲಿದ್ದು, ಉಪ ಚುನಾವಣೆ ದಿನಾಂಕ ಘೋಷಣೆಯಾದ ನಂತರವಷ್ಟೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ಮೊನ್ನೆಯಷ್ಟೇ ಜಿಲ್ಲೆಗೆ ಬಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ ಅವರು ಹೇಳಿದ್ದರು ಸಹ ಅಭ್ಯರ್ಥಿಯಾಗಲು ಪಕ್ಷದಲ್ಲಿ ತೆರೆಮರೆಯ ಕಸರತ್ತು ಶುರುವಾಗಿದೆ.
ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ನಗರದ ಯುವ ನಾಯಕ ಕನ್ನಡಪರ ಹೋರಾಟಗಾರ ರಾಜೀವ ಟೋಪಣ್ಣವರ ಅವರ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ರಾಷ್ಟ್ರಕ್ಕೆ ಮೋದಿ, ರಾಜ್ಯಕ್ಕೆ ಯಡಿಯೂರಪ್ಪ , ಬೆಳಗಾವಿ ಲೋಕಸಭೆಗೆ ರಾಜೀವ ಟೋಪಣ್ಣವರ ಎಂಬ ಘೋಷ ವಾಕ್ಯಯೊಂದಿಗೆ ಟೋಪಣ್ಣವರ ಅವರ ಭಾವಚಿತ್ರ ಉಳ್ಳ ಟ್ಯಾಂಪಲೇಟಗಳು ಸಾಮಾಜಿಕ ಜಾಲತಾಣಗಳನ್ನು ಆವರಿಸಿವೆ.
ಸುಮಾರು ದಶಕಗಳ ಕಾಲ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡಪರ ಸಂಘಟನೆ ಮೂಲಕ ಬೆಳಕಿಗೆ ಬಂದ ರಾಜೀವ ಟೋಪಣ್ಣವರ ಅವರು ಎಂಇಎಸ್ ಪ್ರಾಬಲ್ಯವನ್ನು ಕಡಿಮೆ ಮಾಡುವಲ್ಲಿ ಅವಿರತ ಹೋರಾಟಗಳನ್ನು ಮಾಡಿ ಜಿಲ್ಲೆಯಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ಬೆಳಗಾವಿಯಲ್ಲಿ ಸುರ್ವಣಸೌಧ ಸ್ಥಾಪನೆ, ಕನ್ನಡ ವಿರೋಧಿ ದೋರಣೆ ತೋರಿದ ಮಹಾನಗರ ಪಾಲಿಕೆ ವಜಾ ಮಾಡುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ, ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಆಗ್ರಹಿಸಿ ಹೋರಾಟ, ಬೆಳಗಾವಿ ಮಹಾನಗರ ಪಾಲಿಕೆ ಮೇಲಿನ ಭಗವಾಧ್ವಜ ತೆರುವು ಮಾಡುವಂತೆ ಆಗ್ರಹಿಸಿ ಹೋರಾಟ , ಬೆಳಗಾವಿ ಮಹಾನಗರ ಪಾಲಿಕೆಗೆ ಕನ್ನಡ ಮೇಯರ ಆಯ್ಕೆ ಸೇರಿದಂತೆ ಹತ್ತಾರು ಪ್ರಮುಖ ಹೋರಾಟಗಳನ್ನು ಮಾಡಿ ಬೆಳಗಾವಿ ಜಿಲ್ಲೆಯಲ್ಲಿ ಟೋಪಣ್ಣವರ ತಮ್ಮದೆ ಆದ ಕಾರ್ಯಕರ್ತರ ಪಡೆಯನ್ನು ಕಟ್ಟಿಕೊಂಡು ಜಿಲ್ಲೆಯಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದಾರೆ. ಮೂಲತಃ ಸಾಪ್ಟ್ ವೇರ ಇಂಜಿನಿಯರ ಆಗಿರುವ ರಾಜೀವ ಅವರು ಯಡಿಯೂರಪ್ಪ ಅವರ ನಾಯಕತ್ವವನ್ನು ಮೆಚ್ಚಿ ಕೆಲ ವರ್ಷಗಳ ಹಿಂದೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ . ಪಕ್ಷ ಸೇರ್ಪಡೆಯಾದ ನಂತರ ಪಕ್ಷದಲ್ಲಿ ಸಕ್ರೀಯವಾಗಿ ಗುರಿತಿಸಿಕೊಂಡಿರುವ ರಾಜೀವ ಟೋಪಣ್ಣವರ ಅವರು ಪಕ್ಷ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಜಿಲ್ಲೆಯಾದ್ಯಂತ ಪ್ರಚಾರ : ಇನ್ನೂ ಬೆಳಗಾವಿ ಲೋಕಸಭೆಗೆ ಆಯೋಗ ಚುನಾವಣೆಗೆ ದಿನಾಂಕ ನಿಗಧಿ ಮಾಡಿಲ್ಲದಿದ್ದರು ಸಹ ಈಗಾಗಲೇ ರಾಜೀವ ಟೋಪಣ್ಣವರ ಅವರು ಜಿಲ್ಲೆಯಾದ್ಯಂತ ತಮ್ಮ ಬೆಂಬಲಿಗರಿಗೆ ಮತ್ತು ಆಪ್ತರಿಗೆ ವಿಷಯವನ್ನು ಮುಟ್ಟಿಸಿ ಅಭ್ಯರ್ಥಿಯಾದರೆ ತಮಗೆ ಬೆಂಬಲ ನೀಡುವಂತೆ ವಿನಂತಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಜಯೇಂದ್ರ ಭೇಟಿ : ಬೆಳಗಾವಿ ಲೋಕಸಭೆ ಆಕಾಂಕ್ಷಿಯಾಗಿರುವ ರಾಜೀವ ಟೋಪಣ್ಣವರ ಅವರು ಮುಂಬರುವ ಲೋಕಸಭಾ ಉಪ ಚುನಾವಣೆ ವಿಷಯವಾಗಿ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸುಪುತ್ರ ವಿಜಯೇಂದ್ರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ವಿಜಯೇಂದ್ರ ಅವರಿಂದ ಪೂರಕವಾಗಿ ಪ್ರತಿಕ್ರಿಯೆ ದೊರೆತಿದೆ ಎಂದು ತಿಳದು ಬಂದಿದೆ.
ತೀವ್ರ ಪೈಪೋಟಿ : ಮೊದಲ ಪಂತಿಯ ಬಿಜೆಪಿಯ ಪ್ರಭಾವಿ ನಾಯಕರುಗಳಾದ ಪ್ರಭಾಕರ ಕೋರೆ , ರಮೇಶ ಕತ್ತಿ , ಸಂಜಯ ಪಾಟೀಲ , ಅಭಯ ಪಾಟೀಲ , ಶಂಕರಗೌಡ ಪಾಟೀಲ ಸೇರಿದಂತೆ ಇತರ ನಾಯಕರು ಬೆಳಗಾವಿ ಲೋಕಸಭೆ ಮೇಲೆ ಕಣ್ಣಿಟ್ಟಿದ್ದು, ಹೈಕಮಾಂಡ್ ಮಟ್ಟದಲ್ಲಿ ಲಾಭಿ ನಡೆಸುತ್ತಿದ್ದಾರೆ. ಇನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಯುವ ನಾಯಕ ಧನಂಜಯ ಜಾಧವ , ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ ಸೇರಿದಂತೆ ರಾಜೀವ ಟೋಪಣ್ಣವರ ಅವರು ಹೆಸರು ಬೆಳಗಾವಿ ಲೋಕಸಭೆಗೆ ಕೇಳಿ ಬರುತ್ತಿದೆ.
ಹೈಕಮಾಂಡ್ ಅಭಯ : ಯಾರು ಎಷ್ಟೆ ಲಾಬಿ ನಡೆಸಿದರು ಕೊನೆ ಗಳಿಗೆಯಲ್ಲಿ ಬಿಜೆಪಿ ಹೈಕಮಾಂಡ್ ಒಲವು ತೋರುವ ಆಸಾಮಿಯೇ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲಿದ್ದು , ಇತರ ನಾಯಕರು ಒಗ್ಗಟ್ಟಾಗಿ ಪಕ್ಷ ಸೂಚಿಸುವ ಅಭ್ಯರ್ಥಿಯನ್ನು ಬೆಂಬಲಿಸಲ್ಲಿದ್ದಾರೆ. ಪೈಪೋಟಿ ಒಡ್ಡಿರುವ ಅಭ್ಯರ್ಥಿಗಳ ಪೈಕಿ ಒಬ್ಬರನ್ನು ಪಕ್ಷ ಅಭ್ಯರ್ಥಿ ಎಂದು ಘೋಷಿಸುತ್ತದೆಯೋ ಅಥವಾ ಪಕ್ಷಕ್ಕಾಗಿ ದುಡಿಯುವ ಪ್ರಾಮಾಣಿಕ , ಸಾಮಾನ್ಯ ಕಾರ್ಯಕರ್ತನಿಗೆ ಮಣೆ ಹಾಕುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ ಒಟ್ಟಾಯಾಗಿ ಬಿಜೆಪಿ ಹೈಕಮಾಂಡ್ ಯಾರ ಕಡೆ ಅಭಯ ಹಸ್ತ ಚಾಚಲಿದೆ ಎಂಬುದು ನಿಗೂಢವಾಗಿದೆ.
ಅಂಗಡಿ ಕುಟುಂಬದ ಪರ ಸಚಿವ ರಮೇಶ ಒಲವು : ದಿವಂಗತ ಸುರೇಶ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆಗೆ ಸುರೇಶ ಅಂಗಡಿ ಅವರ ಧರ್ಮಪತ್ನಿ ಶ್ರೀಮತಿ ಮಂಗಳಾ ಅಂಗಡಿ ಅವರನ್ನೇ ಅಭ್ಯರ್ಥಿಯಾಗಿಸಲು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಒಲವು ತೋರಿದ್ದಾರೆ. ದಿ.ಸುರೇಶ ಅಂಗಡಿ ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ . ಅವರ ಕುಟುಂಬ ವರ್ಗದವರನ್ನು ಚುನಾವಣೆಗೆ ನಿಲ್ಲಿಸಲು ಕ್ರಮ ಕೈಗೋಳ್ಳಲಾಗುವುದು ಎಂದು ಸಚಿವರು ಮಾಧ್ಯಮದವರ ಎದುರು ಹೇಳಿದ್ದಾರೆ. ಇದರಿಂದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಪೈಪೋಟಿ ನಡೆಸಿರುವ ಅಭ್ಯರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಬೆಂಬಲ ದೊರೆಯುವುದು ಕಷ್ಟಸಾಧ್ಯವಾದರೂ ಸಹ ಪಕ್ಷ ಆಯ್ಕೆ ಮಾಡುವ ಅಭ್ಯರ್ಥಿಗೆ ಸಚಿವರು ಸಂಪೂರ್ಣ ಬೆಂಬಲ ನೀಡುವ ಎಲ್ಲಾ ಲಕ್ಷಣಗಳು ಇವೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಕೇಂದ್ರ ರೈಲ್ವೆ ರಾಜ್ಯ ಸಚಿವ ದಿ. ಸುರೇಶ ಅಂಗಡಿ ಅವರ ಉತ್ತರಾಧಿಕಾರಿಯಾಗಲು ತೆರೆಮರೆಯಲ್ಲಿ ಬಿಜೆಪಿ ಪಕ್ಷದಲ್ಲೇ ಭಾರಿ ಪೈಪೋಟಿ ನಡೆದಿದ್ದು, ಚುನಾವಣೆ ಘೋಷಣೆಯಾಗಿ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುವದೇ ಯಕ್ಷ ಪ್ರಶ್ನೇಯಾಗಿದೆ.