RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:ನೂತನ ಕೃಷಿ ಮಸೂದೆಯಿಂದ ರೈತರಿಗೆ ವರದಾನ-ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ:ನೂತನ ಕೃಷಿ ಮಸೂದೆಯಿಂದ ರೈತರಿಗೆ ವರದಾನ-ಶಾಸಕ ಬಾಲಚಂದ್ರ ಜಾರಕಿಹೊಳಿ 

ನೂತನ ಕೃಷಿ ಮಸೂದೆಯಿಂದ ರೈತರಿಗೆ ವರದಾನ-ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ ಅ 20 : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿತ ಮಸೂದೆಗಳಿಂದ ಕೃಷಿ ಭೂಮಿ ಖರೀದಿಗೆ ಹೆಚ್ಚಿನ ಅವಕಾಶವಿದ್ದು, ರಾಜ್ಯದ ಆರ್ಥಿಕಾಭಿವೃದ್ಧಿಗೆ ಉದ್ಯೋಗ ಸೃಷ್ಠಿಗೆ ಅನುಕೂಲವಾಗಿದೆ ಎಂದು ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಅರಭಾವಿ ಮಂಡಲ ಬಿಜೆಪಿ ರೈತ ಮೋರ್ಚಾದಿಂದ ಇಲ್ಲಿಗೆ ಸಮೀಪದ ಅರಭಾವಿ ಹತ್ತಿರ ಸಭಾಭವನದಲ್ಲಿ ಹಮ್ಮಿಕೊಂಡ ನೂತನ ಕೃಷಿ ಮಸೂದೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರ ಉತ್ಪನ್ನ, ವ್ಯಾಪಾರ ಮತ್ತು ವಾಣಿಜ್ಯ ಮಸೂದೆ, ರೈತರ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆ ಹಾಗೂ ಅಗತ್ಯ ಸರಕುಗಳ ತಿದ್ದುಪಡಿ ಮಸೂದೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಹೇಳಿದರು.
ಕೃಷಿಯೇತರ ಭೂಮಿ ಖರೀದಿಸಲು ಅವಕಾಶ, ಹೈನೋದ್ಯಮ, ಕುರಿ, ಮೇಕೆ, ಕೋಳಿ ಸಾಕಾಣಿಕೆಯಂತಹ ಉಪ ಕಸಬುಗಳಲ್ಲಿ ಯುವಕರು ತೊಡಗಿಸಿಕೊಳ್ಳಲು ಅವಕಾಶವಿದೆ. ಪ್ರತಿ ವರ್ಷ ಕೃಷಿ ವಿಶ್ವವಿದ್ಯಾಲಯದಿಂದ ಹೊರಬರುವ ಸುಮಾರು ನಾಲ್ಕುಸಾವಿರ ಪದವಿಧರರಿಗೆ ಕೃಷಿ ಭೂಮಿ ಖರೀದಿಸಿ ಕೃಷಿಯಲ್ಲಿಯೂ ತೊಡಗಿಸಿಕೊಳ್ಳಲು ಅವಕಾಶವಿದೆ. ಕೃಷಿ ಕ್ಷೇತ್ರದಲ್ಲೂ ಹೂಡಿಕೆದಾರರ ಸೃಷ್ಠಿ, ಕೈಗಾರಿಕೆಗೆ ಸರಿಸಮಾನವಾಗಿ ಕೃಷಿ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳ ಅಭಿವೃದ್ದಿಯು ವೇಗದಿಂದ ಸಾಗುತ್ತದೆ. ಈ ಕಾಯ್ದೆಯ ತಿದ್ದುಪಡಿಯಿಂದ ರೈತರಿಗೆ ಇಷ್ಟೆಲ್ಲಾ ಅನುಕೂಲವಾಗಲಿವೆ ಎಂದು ಹೇಳಿದರು.
ಪ್ರತಿ ವರ್ಷವು ರೈತ ಅಪಾಯ ಅಡತಡೆಗಳನ್ನು ಎದುರಿಸಿಕೊಂಡು ಕೃಷಿಯಲ್ಲಿ ತೊಡಗಬೇಕಿತ್ತು. ಕಡಿಮೆ ಬೆಲೆಗೆ ಉತ್ಪನ್ನ ಮಾರುವುದರಿಂದ ಬೇರೆಲ್ಲಾ ಬೆಲೆಗಳು ಏರಿಕೆಯಾಗುವುದರಿಂದ ಸಾಲ ಮಾಡಿಯೇ ರಾಸಿ ಮಾಡಬೇಕಿತ್ತು. ಇದರಿಂದಾಗಿಯೇ ರೈತರು ಸಾಲ ಬಾಧೆ ತಾಳದೇ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಈ ಹೊಸ ಮಸೂದೆಯಿಂದ ರೈತರಿಗೆ ಇಂತಹ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲವೆಂದು ಹೇಳಿದರು.
ಮಸೂದೆಯಿಂದ ಮಾರುಕಟ್ಟೆಯಲ್ಲಿ ಉತ್ಪನ್ನದ ಬೆಲೆ ಏರಿಕೆಯಾದರೆ ನೇರವಾಗಿ ರೈತರಿಗೆ ಲಾಭವಾಗುತ್ತದೆ ಬೆಲೆ ಕುಸಿದರೆ ಸರ್ಕಾರದ ಬೆಂಬಲ ಬೆಲೆ ಸಹಕಾರಿಯಾಗುತ್ತದೆ. ಆದ್ದರಿಂದ ರೈತ ಪರವಾದ ನೂತನ ಕೃಷಿ ಮಸೂದೆಗಳಿಂದ ರೈತರಿಗೆ ವರದಾನವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಈ ಸಂದರ್ಭದಲ್ಲಿ ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ರೈತ ಮೋರ್ಚಾ ಅಧ್ಯಕ್ಷ ತಮ್ಮಣ್ಣಾ ದೇವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಬಸು ಮಾಳೇದವರ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಮೂಡಲಗಿ ಸೇರಿದಂತೆ ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts: