ಗೋಕಾಕ:ಉಪವಾಸ ಸತ್ಯಾಗ್ರಹಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ : ಜಯ ಮೃತ್ಯುಂಜಯ ಮಹಾಸ್ವಾಮಿಜೀ ಕರೆ
ಉಪವಾಸ ಸತ್ಯಾಗ್ರಹಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ : ಜಯ ಮೃತ್ಯುಂಜಯ ಮಹಾಸ್ವಾಮಿಜೀ ಕರೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 25 :
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ದಿ. ೨೮ ರಂದು ಬೆಳಗಾವಿ ಸುವರ್ಣ ಸೌಧದ ಮುಂದೆ ನಡೆಸುವ ಉಪವಾಸ ಸತ್ಯಾಗ್ರಹಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಜೀ ಕರೆ ನೀಡಿದರು.
ರವಿವಾರದಂದು ಇಲ್ಲಿಯ ವಿವೇಕಾನಂದ ನಗರದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕಾ ಘಟಕದಿಂದ ಹಮ್ಮಿಕೊಂಡ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ ಪಂಚಮಸಾಲಿ ಸಮಾಜಕ್ಕೆ ಸರ್ಕಾರದಿಂದ ೨ಎ ಮೀಸಲಾತಿಯನ್ನು ಕಲ್ಪಿಸಬೇಕು. ಎಲ್ಲ ಬಡ ಲಿಂಗಾಯತ ಉಪ ಸಮಾಜಗಳಿಗೂ ಓಬಿಸಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಎಲ್ಲ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಲು ಕಾರಣಿಕರ್ತರಾಗಬೇಕೆಂದು ತಿಳಿಸಿದರು.
ಲಿಂಗಾಯತ ಪಂಚಮಸಾಲಿ ಸಮಾಜವು ರಾಜ್ಯದಲ್ಲಿ ಬಹುಸಂಖ್ಯಾತ ಸಮುದಾಯವಾಗಿದ್ದರೂ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆಯಲ್ಲಿ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಕೃಷಿಯನ್ನೇ ಕುಲಕಸಬನ್ನಾಗಿಸಿಕೊಂಡಿರುವ ಈ ಸಮಾಜ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಬೆಳೆದ ಬೆಳೆಗೆ ಸೂಕ್ತವಾದ ಬೆಲೆ ಲಭಿಸದೇ ಅಭಿವೃದ್ದಿಯಲ್ಲಿ ಕುಂಠಿತವಾಗಿದೆ. ಈಗಾಗಲೇ ಅನೇಕ ನಮ್ಮ ಸಹೋದರ ಸಮಾಜಗಳಿಗೆ ೨ಎ ಮೀಸಲಾತಿಯನ್ನು ನೀಡಲಾಗಿದೆ. ನಮ್ಮ ಸಮಾಜ ಯಾವುದೇ ಸರ್ಕಾರದ ಸೌಲಭ್ಯ ಹಾಗೂ ಸವಲತ್ತುಗಳನ್ನು ಪಡೆದ ವಂಚಿತವಾಗಿದೆ. ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರುವದಿಲ್ಲ. ಬೀದಿಗಿಳಿದು ಪ್ರತಿಭಟಿಸುವುದಕ್ಕಿಂತ ಕೊರೋನಾ ಸೋಂಕಿನ ಕಾರಣದಿಂದ ಉಪವಾಸ ಸತ್ಯಾಗ್ರಹದ ಮೂಲಕ ಸರ್ಕಾರ ಗಮನ ಸೆಳೆಯಲು ಈ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಮ್.ಸಿ.ಮಾಸ್ತಿಹೊಳಿ, ಸಿದ್ದನಗೌಡ ಪಾಟೀಲ, ಪ್ರಕಾಶ ಭಾಗೋಜಿ, ಎಮ್.ಎಸ್.ವಾಲಿ, ಈಶ್ವರ ಭಾಗೋಜಿ, ಸಿ.ಬಿ.ಗಿಡ್ನನವರ, ಈರಣ್ಣ ವಾಲಿ, ಶಿವಾನಂದ ಬನ್ನೂರ, ಸೇರಿದಂತೆ ಅನೇಕರು ಇದ್ದರು.