ಗೋಕಾಕ:ಕನ್ನಡ ಭಾಷೆ ಕಂಗ್ಲೀಷ ಮಯವಾಗುತ್ತಿರುವುದು ಆಘಾತಕಾರಿ ವಿಷಯವಾಗಿದೆ : ಬಿಇಒ ಬಳಗಾರ ವಿಷಾದ
ಕನ್ನಡ ಭಾಷೆ ಕಂಗ್ಲೀಷ ಮಯವಾಗುತ್ತಿರುವುದು ಆಘಾತಕಾರಿ ವಿಷಯವಾಗಿದೆ : ಬಿಇಒ ಬಳಗಾರ ವಿಷಾದ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 1 :
ಶತಮಾನಗಳ ಹಳೆಯ ಕನ್ನಡ ಭಾಷೆ ಕಂಗ್ಲೀಷ ಮಯವಾಗುತ್ತಿರುವುದು ಆಘಾತಕಾರಿ ವಿಷಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ ಬಳಗಾರ ವಿಷಾದ ವ್ಯಕ್ತಪಡಿಸಿದರು
ರವಿವಾರದಂದು ತಾಲೂಕಾಡಳಿತ ವತಿಯಿಂದ ನರಗದ ತಾಲೂಕಾ ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಜರುಗಿದ 65ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು
ಪ್ರತಿನಿತ್ಯ ಮನೆಗಳಲ್ಲಿ ನಾವು ಬಳಸುವ ಭಾಷೆಯಲ್ಲಿ ಹೆಚ್ಚಿನ ಪದಗಳು ಇಂಗ್ಲಿಷ್ ಮಯವಾಗಿರುವುದರಿಂದ ನಮ್ಮ ಕನ್ನಡ ಭಾಷೆಯ ಅಳಿವು ಉಳಿವಿನ ಪ್ರಶ್ನೆ ಬಂದಿದೆ. ಕನ್ನಡ ಪ್ರಜೆಗಳಾದ ನಾವುಗಳು ಇದನ್ನು ಉಳಿಸಿ ಬೆಳೆಸಲು ಮುಂದಾಗಿ ನವೆಂಬರ್ ತಿಂಗಳಾದ್ಯಂತ ಪ್ರತಿ ಮನೆಯಲ್ಲಿ ಕನ್ನಡ ಮಾಸಾಚರಣೆ ಆಚರಿಸಿ ಕನ್ನಡ ಪದಗಳನ್ನು ಬಳಸುವ ರೂಡಿ ಮಾಡಿಕೊಂಡು ಕನ್ನಡ ಭಾಷೆಯನ್ನು ಮನೆಯಿಂದಲೇ ಉಳಿಸಲು ಮುಂದಾಗಬೇಕಾಗಿದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಇಲಾಖೆ ಪ್ರತಿ ವರ್ಷ ” ಅಮ್ಮನ ಆರೈಕೆಗೆ ,ಮಕ್ಕಳ ಹಾರೈಕೆ ” ಎಂಬ ಕಾರ್ಯಕ್ರಮವನ್ನು ಸಂಘಟಿಸಿ ಕನ್ನಡ ಭಾಷೆಯನ್ನು ಗಟ್ಟಿಗೋಳಿಸುವ ಕಾರ್ಯ ಮಾಡುತ್ತಿದೆ.
ಪ್ರಾಂತ ಪ್ರಾಂತಗಳಲ್ಲಿ ಹರಿದು , ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಗ್ಗೂಡಿಸಲು ಶ್ರಮವಹಿಸಿದ ಮಹನೀಯರು ತ್ಯಾಗವನ್ನು ನೆನೆದು ಕನ್ನಡವನ್ನು ಗಟ್ಟಿಯಾಗಿ ಕಟ್ಟಲು ನಾವಿಂದು ಮುಂದಾಗಿ , ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ.
ಯುವ ಪೀಳಿಗೆ ಕನ್ನಡ ಸಾಹಿತ್ಯದ ಅರಿವು ಮೂಡಿಸಲು ಕಾರ್ಯ್ನೋಮುಖವಾಗಿ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕಾಗಿದೆ ಆ ದಿಸೆಯಲ್ಲಿ ಕನ್ನಡದ ಕಿಂಕರರು ಮುಂದಾಗಬೇಕಾಗಿದೆ ಎಂದು ಹೇಳಿದರು
ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಮಾತನಾಡುತ್ತಾ 2500 ವರ್ಷಗಳ ಹಳೆಯ ಭಾಷೆ ಕನ್ನಡ ಇಂದು ನಾಡು , ದೇಶ ಅಷ್ಟೇ ಅಲ್ಲ ಇಡೀ ವಿಶ್ವದಲ್ಲಿ ಬೆಳೆದು ನಿಂತಿರುವ ಪರಿಣಾಮ ಇಂದು ದೇಶ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ನವೆಂಬರ್ 1 ರಂದು ಆಯಾ ಪ್ರದೇಶಗಳಲ್ಲಿ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಕನ್ನಡ ಭಾಷೆಯ ಹೆಮ್ಮೆಯಾಗಿದೆ. ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಏಕಮೇವ ಭಾಷೆ ಕನ್ನಡವನ್ನು ಉಳಿಸಿ ಬೆಳೆಸಿ ಯುವ ಪೀಳಿಗೆಗೆ ಮಾದರಿಯಾಗಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಪಡೆದ 32 ವಿದ್ಯಾರ್ಥಿಗಳಿಗೆ , ಕರೋನಾ ವಾರಿಯರ್ಸ್ ಹಾಗೂ ಸಾಧಕರಿಗೆ ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ ಎಸ್. ಬಿ ಕಟ್ಟಿಮನಿ, ಪೌರಾಯುಕ್ತ ಶಿವಾನಂದ ಹಿರೇಮಠ, ಕಿರಣ ಡಮಾಮಗರ , ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ , ತಾಲೂಕಾ ವೈದ್ಯಾಧಿಕಾರಿ ಡಾ.ಕೊಪ್ಪದ, ಡಬ್ಬನವರ , ಮಾಸನ್ನವರ , ಸೋಮಶೇಖರ್ ಮಗದುಮ್ಮ , ಎಲ್.ಎಸ್ ಚೌರಿ ಸೇರಿದಂತೆ ಇತರರು ಇದ್ದರು.