RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಅತ್ಯಧಿಕ ಮತಗಳ ಮುನ್ನಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ:ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಅತ್ಯಧಿಕ ಮತಗಳ ಮುನ್ನಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ 

ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಅತ್ಯಧಿಕ ಮತಗಳ ಮುನ್ನಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೋದಿ ಅವರ ದೂರದೃಷ್ಟಿ ನಾಯಕತ್ವದಿಂದ ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ.
ಅರಭಾವಿ ಮಂಡಲ ಪ್ರಶಿಕ್ಷಣ ವರ್ಗ ಕಾರ್ಯಾಗಾರದ ಸಮಾರೋಪದಲ್ಲಿ ಹೇಳಿಕೆ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 9 :
ಬರುವ ಲೋಕಸಭಾ ಉಪ ಚುನಾವಣೆಯಲ್ಲಿ ಗೋಕಾಕ ಮತ್ತು ಅರಭಾವಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗೆ ಅತ್ಯಧಿಕ ಮತಗಳ ಮುನ್ನಡೆಯನ್ನು ದೊರಕಿಸಿಕೊಡುವುದಾಗಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸೋಮವಾರದಂದು ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾಯರ್ಸ್ ಸಭಾ ಭವನದಲ್ಲಿ ಅರಭಾವಿ ಮಂಡಲದಿಂದ ನಡೆಯುತ್ತಿರುವ ಪ್ರಶಿಕ್ಷಣ ವರ್ಗ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನೀಡಿರುವ ಮುನ್ನಡೆಗಿಂತ ಈ ಬಾರಿ ಹೆಚ್ಚಿನ ಮತಗಳನ್ನು ನೀಡಿ ದಾಖಲೆ ಮತಗಳ ಅಂತರದಿಂದ ಗೆಲ್ಲಿಸಿಕೊಡುವುದಾಗಿ ಅವರು ಹೇಳಿದರು.
ಬೆಳಗಾವಿ ಲೋಕಸಭಾ ಕ್ಷೇತ್ರವನ್ನು 4 ಬಾರಿ ಪ್ರತಿನಿಧಿಸಿ ಕೇಂದ್ರದಲ್ಲಿ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಅವರ ಅಕಾಲಿಕ ನಿಧನ ನಮ್ಮನ್ನು ಇನ್ನೂ ಕಾಡುತ್ತಿದೆ. ಸಂಸದರಾಗಿ, ಸಚಿವರಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದ ಅಂಗಡಿ ಅವರ ಆತ್ಮಕ್ಕೆ ಶಾಂತಿ ಲಭಿಸಲು ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುವುದಾಗಿ ಅವರು ತಿಳಿಸಿದರು.
ಬಿಜೆಪಿ ಇಂದು ರಾಷ್ಟ್ರಾದ್ಯಂತ ಹೆಮ್ಮರವಾಗಿ ಬೆಳೆಯಲು ಶ್ಯಾಂ ಪ್ರಸಾದ ಮುಖರ್ಜಿ ಹಾಗೂ ಪಂ.ದೀನದಯಾಳ ಉಪಾಧ್ಯಾಯ ಅವರ ಕೊಡುಗೆ ಅಪಾರವಾಗಿದೆ. ಜನಸಂಘದಿಂದ ಆರಂಭಗೊಂಡು ಬಿಜೆಪಿ ಪಕ್ಷವಾಗಿ ಉದಯವಾಯಿತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲಕೃಷ್ಣ ಅಡ್ವಾಣಿ ಅವರು ಬೆವರು ಸುರಿಸಿ ಪಕ್ಷ ಕಟ್ಟಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೀತ ಶಾ ಅವರ ದೂರದೃಷ್ಟಿಯಿಂದಾಗಿ ಬಿಜೆಪಿ ದೇಶಾದ್ಯಂತ ಬೆಳೆದಿದೆ. ವಿಶ್ವದಲ್ಲಿಯೇ ಅತೀ ಹೆಚ್ಚು 18 ಕೋಟಿ ಸದಸ್ಯರನ್ನು ಹೊಂದಿರುವ ಏಕೈಕ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ದೇಶದ ಸಮಗ್ರ ಅಭಿವೃದ್ಧಿಗಾಗಿ ಟೊಂಕಕಟ್ಟಿ ನಿಂತಿದ್ದಾರೆ. ದೇಶವನ್ನು ವಿಶ್ವದಲ್ಲಿಯೇ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಬೇಕೆಂಬುದು ಪ್ರಧಾನಿಗಳ ಅಪೇಕ್ಷೆಯಾಗಿದೆ. ಎಲ್ಲ ವರ್ಗಗಳ ಅಭ್ಯುದಯಕ್ಕೆ ಹಲವಾರು ಕೊಡುಗೆಗಳನ್ನು ನೀಡುತ್ತಿದ್ದಾರೆ. ಪ್ರಧಾನಿಗಳ ಕಾರ್ಯದಕ್ಷತೆ ಇಡೀ ಜಗತ್ತಿಗೆ ಮಾದರಿಯಾಗಿದೆ. ಜಗತ್ತು ಭಾರತದತ್ತ ನೋಡಲು ಮೋದಿ ಅವರ ಪ್ರಗತಿಪರ ಸಾಧನೆಗಳು ಕಾರಣವಾಗಿವೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿತ ಮಸೂದೆಗಳಿಂದ ರಾಜ್ಯದ ಆರ್ಥಿಕಾಭಿವೃದ್ಧಿಗೆ ಉದ್ಯೋಗ ಸೃಷ್ಟಿಗೆ ಅನುಕೂಲವಾಗಿದೆ. ಇದನ್ನು ರೈತರನ್ನು ದಾರಿ ತಪ್ಪಿಸುವ ದೃಷ್ಟಿಯಿಂದ ಕೆಲ ಪಕ್ಷಗಳು ವಿರೋಧಿಸುತ್ತಿವೆ. ಮೊದಲಿನಿಂದಲೂ ರೈತ ಪರ ಯೋಜನೆಗಳನ್ನು ಹಮ್ಮಿಕೊಂಡು ಬರುತ್ತಿರುವ ಬಿಜೆಪಿಯಿಂದ ರೈತರಿಗೆ ವರದಾನವಾಗಿದೆ ಎಂದು ಅವರು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಸಂಜಯ ಪಾಟೀಲ, ಬಿಜೆಪಿ ರಾಜ್ಯ ವಕ್ತಾರ ಮತ್ತು ವಕೀಲ ಎಂ.ಬಿ. ಜಿರಲಿ, ಜಿಲ್ಲಾ ಪಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರಗಳ ಪ್ರಮುಖರು ಅಭ್ಯಾಸ ವರ್ಗದಲ್ಲಿ ಪಾಲ್ಗೊಂಡಿದ್ದರು.
” ಪ್ರಧಾನಿ ನರೇಂದ್ರ ಮೋದಿ ಅವರು ನೀರನ್ನು ಸದ್ಬಳಕೆ ಮಾಡಿಕೊಳ್ಳುವಂತೆ ದೇಶದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ. ನೀರು ದೇವರು ಕೊಟ್ಟ ಪ್ರಸಾದ. ಅದನ್ನು ಎಂದಿಗೂ ಕೇಡು ಮಾಡದಿರಿ. ಆದ್ದರಿಂದ ನೀರನ್ನು ಮಿತವಾಗಿ ಬಳಸಿ. ದೇವರ ಪ್ರಸಾದವೆಂದು ಸ್ವೀಕರಿಸಿ. ನೀರನ್ನು ಸದ್ಬಳಕೆ ಮಾಡಿಕೊಳ್ಳಿ”.
ಬಾಲಚಂದ್ರ ಜಾರಕಿಹೊಳಿ, ಶಾಸಕರು.

Related posts: