ಗೋಕಾಕ :ಪಂಚಾಯತಿಯ ನೌಕರರ ಅನುಮೋದನೆಯ ಪ್ರಸ್ತಾವಣೆಗಳನ್ನು ಸರಕಾರಕ್ಕೆ ಸಲ್ಲಿಸಲು ಆಗ್ರಹ
ಪಂಚಾಯತಿಯ ನೌಕರರ ಅನುಮೋದನೆಯ ಪ್ರಸ್ತಾವಣೆಗಳನ್ನು ಸರಕಾರಕ್ಕೆ ಸಲ್ಲಿಸಲು ಆಗ್ರಹ
ಗೋಕಾಕ ಸೆ 7: ತಾಲೂಕಿನ 56 ಗ್ರಾ. ಪಂ.ಗಳಲ್ಲಿ ಅನೇಕ ವರ್ಷಗಳಿಂದ ಜಿ. ಪಂ.ಯ ಅನುಮೋದನೆಯಿಲ್ಲದೆ ದುಡಿಯುತ್ತಿರುವ ಗ್ರಾಮ ಪಂಚಾಯತಿಯ ನೌಕರರ ಅನುಮೋದನೆಯ ಪ್ರಸ್ತಾವಣೆಗಳನ್ನು ಎರಡು ದಿನದೊಳಗೆ ಸಲ್ಲಿಸಬೇಕೆಂದು ಆಗ್ರಹಿಸಿ ಗ್ರಾ. ಪಂ. ನೌಕರರ ತಾಲೂಕ ಸಂಘದ ವತಿಯಿಂದ ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ತಾ.ಪಂ. ವ್ಯವಸ್ಥಾಪಕರಿಗೆ ಮಂಗಳವಾರದಂದು ಮನವಿ ಸಲ್ಲಿಸಲಾಯಿತು.
ಗ್ರಾ. ಪಂ.ಗಳಿಂದ ತಾ. ಪಂ.ಗೆ ಹಾಗೂ ತಾ. ಪಂ.ಯಿಂದ ಜಿ. ಪಂ.ಗೆ ಸಲ್ಲಿಸದಿದ್ದರೆ ತಾಲೂಕ ಪಂಚಾಯತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮ ಪಂಚಾಯತಿ ನೌಕರರ ತಾಲೂಕಾ ಸಮಿತಿಯು ಎಚ್ಚರಿಕೆ ನೀಡಿದೆ.
ಗ್ರಾ. ಪಂ.ಗಳಲ್ಲಿ ದುಡಿಯುತ್ತಿರುವ ಕ್ಲರ್ಕ, ಕರವಸೂಲಿಗಾರ, ವಾಟರಮನ್, ಜವಾನ, ಸ್ವೀಫರ ನೂರಾರು ಜನ ಜಿ.ಪಂ. ಯಿಂದ ಅನುಮೋದನೆಯಿಲ್ಲದೆ ಹಾಗೇ ದುಡಿಯುತ್ತಿದ್ದು ಇದರಿಂದ ಸರಕಾರ ಜಾರಿಗೆ ತಂದ ಇ.ಎಫ್.ಎಮ್.ಎಸ್ ಮೂಲಕ ನೌಕರರಿಗೆ ವೇತನ ಪಾವತಿ ವ್ಯವಸ್ಥೆಯಿಂದ ವಂಚಿತರಾಗುತ್ತಿದ್ದಾರೆ ಆದ್ದರಿಂದ ಗ್ರಾ. ಪಂ.ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ನೌಕರರಿಗೂ ಸಹ ಇ.ಎಫ್.ಎಮ್.ಎಸ್ ಮೂಲಕ ವೇತನ ಪಾವತಿಸುವುದಾಗಬೇಕು.
ಅನುಮೋದನೆಯಿಂದ ವಂಚಿತರಾದ ಎಲ್ಲ ಸಿಬ್ಬಂದಿಗಳಿಗೆ ಅನುಮೋದನೆ ನೀಡಬೇಕು ಅಂತಾ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಗ್ರಾ.ಪಂ.ನೌಕರರ ಸಂಘದ ತಾಲೂಕ ಅಧ್ಯಕ್ಷ ಶಂಕರ ಘೋಡಗೇರಿ, ಉಪಾಧ್ಯಕ್ಷ ಮಡ್ಡೆಪ್ಪ ಭಜಂತ್ರಿ, ಪ್ರಧಾನ ಕಾರ್ಯದರ್ಶಿ ಕಲ್ಲಪ್ಪ ಮಾದರ, ರಮೇಶ ಹೋಳಿ, ಕರಿಮಸಾಬ ಬಾಗವಾನ, ಮಡ್ಡೆಪ್ಪ ನಿಡಗುಂದಿ, ಸೇರಿದಂತೆ ಗ್ರಾ. ಪಂ. ನೌಕರರು ಉಪಸ್ಥಿತರಿದ್ದರು.