ಗೋಕಾಕ:ಏಸು ಕ್ರಿಸ್ತನ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ : ಶೇಖರಗೋಳ
ಏಸು ಕ್ರಿಸ್ತನ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ : ಶೇಖರಗೋಳ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 23 :
ದೇವರನ್ನು ಪೂರ್ಣ ಮನಸ್ಸಿನಿಂದ ಆತ್ಮ ಹಾಗೂ ಸತ್ಯದಿಂದ ಆರಾಧಿಸುವ ಏಸು ಕ್ರಿಸ್ತನ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಯುವ ಮುಖಂಡ ನಾಗಪ್ಪ ಶೇಖರಗೋಳ ಹೇಳಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಬುಧವಾರದಂದು ತಾಲೂಕಾ ಕ್ರೈಸ್ತ ಸಮುದಾಯ ಟ್ರಸ್ಟ್ ಏರ್ಪಡಿಸಿದ್ದ ಕ್ರಿಸಮಸ್ ಹಬ್ಬದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಪ್ರಪಂಚವು ಸುಂದರವಾಗಿ ಕಂಡಾಗ ಮಾತ್ರ ಪ್ರತಿ ಮನುಕುಲವು ದೈವ ಸ್ವರೂಪಿಯಾಗುತ್ತದೆ ಎಂದು ಹೇಳಿದರು.
ಕ್ಷಮೆ ಇರುವಲ್ಲಿ ಪ್ರೀತಿ-ವಿಶ್ವಾಸ ಮೊಳೆಯುತ್ತದೆ. ಎಲ್ಲ ಮನುಕುಲದವರು ಒಂದೇ ಎಂಬ ಉದಾತ್ತ ಮನೋಭಾವನೆ ಉಂಟಾದಾಗ ಮಾತ್ರ ಇಡೀ ಪ್ರಪಂಚವು ಸುಂದರವಾಗಿ ಕಾಣುತ್ತದೆ.ಏಸು ಕ್ರಿಸ್ತನ ಶಿಷ್ಯರ ಒಗ್ಗಟ್ಟಿನ ಕೆಲಸ, ವ್ಯವಸ್ಥಿತ ರೂಪುರೇಷೆ ಕ್ರೈಸ್ತ ತತ್ವಗಳ ಬಗ್ಗೆ ಬದ್ಧತೆ ಮುಂತಾದ ಕಾರಣಗಳಿಂದ ಪ್ರಪಂಚವು ಜಾತಿ-ಮತ-ಪಂಥಗಳ ಬೇಧವಿಲ್ಲದೆ ಆಚರಿಸುವ ಕ್ರಿಸಮಸ್ ಹಬ್ಬವಾಗಿದೆ. ಶಾಂತಿ, ಪ್ರೀತಿ ಹಾಗೂ ದೀನತೆಯ ಸಂದೇಶವು ಪ್ರತಿ ದಿನವು ಹಬ್ಬವಾಗಿ ಮಾರ್ಪಡಾಗಲಿ ಎಂದು ಹಾರೈಸಿದರು.
ಟ್ರಸ್ಟ್ ಗೌರವಾಧ್ಯಕ್ಷ ಏಬಿನೇಜರ್ ಕರಬನ್ನವರ ಪ್ರಾಸ್ತಾವಿಕವಾಗಿ ಮಾತನಾಡಿ, ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಅವರ ಸಹೋದರರಿಗೆ ಇನ್ನೂ ಉನ್ನತ ಮಟ್ಟದ ಅಧಿಕಾರ ಹಾಗೂ ಆಯುರಾರೋಗ್ಯ ಭಾಗ್ಯ ಕರುಣಿಸಲಿ.ನಾಡು ಸಮೃದ್ಧವಾಗಲಿ. ಎಲ್ಲೆಡೆ ಶಾಂತಿ ನೆಮ್ಮದಿ ನೆಲೆಸಲಿ ಎಂದು ಏಸುವಿನಲ್ಲಿ ಪ್ರಾರ್ಥಿಸಿದರು.
ಡಿಎಸ್‍ಎಸ್ ಮುಖಂಡರಾದ ರಮೇಶ ಸಣ್ಣಕ್ಕಿ, ಸತ್ತೆಪ್ಪ ಕರವಾಡಿ, ಮೇಥೋಡಿಸ್ಟ್ ಚರ್ಚನ ಜಿಲ್ಲಾ ಮೇಲ್ವಿಚಾರಕ ವಾಯ್.ಎಸ್.ಮೂಡಲಗಿ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಎಲ್ಲ ಸಭಾ ಪಾಲಕರು ಇದ್ದರು.