ಗೋಕಾಕ:ರೈತರ ಬೇಡಿಕೆಗಳಿಗೆ ಪೂರಕವಾಗಿ ಸ್ವಂದಿಸಲು ಸರಕಾರಗಳು ಎಡವಿವೆ : ಅಶೋಕ ಪೂಜಾರಿ ಆರೋಪ
ರೈತರ ಬೇಡಿಕೆಗಳಿಗೆ ಪೂರಕವಾಗಿ ಸ್ವಂದಿಸಲು ಸರಕಾರಗಳು ಎಡವಿವೆ : ಅಶೋಕ ಪೂಜಾರಿ ಆರೋಪ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 13 :
ರೈತರ ಬೇಡಿಕೆಗಳಿಗೆ ಪೂರಕವಾಗಿ ಸ್ವಂದಿಸಲು ಸರಕಾರಗಳು ಎಡವಿವೆ ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಆರೋಪಿಸಿದ್ದಾರೆ.
ಬುಧವಾರದಂದು ನಗರದ ಅವರ ಕಾರ್ಯಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಉತ್ತರ ಭಾರತದ ರೈತ ಸಂಘಟನೆಗಳು ಇಡೀ ದೇಶದ ರೈತರ ಧ್ವನಿಯಾಗಿ ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರಕಾರ ಅವರ ಹೋರಾಟಕ್ಕೆ ಪೂರಕವಾಗಿ ಸ್ವಂದಿಸುತ್ತಿಲ್ಲದಿರುವುದು ದುರಂತವಾಗಿದ್ದು, ಈ ಹೋರಾಟದ ಭಾಗವಾಗಿ ನಾವೆಲ್ಲರೂ ರೈತರಿಗೆ ಬಲ ತುಂಬಬೇಕಾಗಿದೆ.
ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸರ ನೇತೃತ್ವದಲ್ಲಿ ಅಂದಿನ ಸರಕಾರ ಹಾಗೂ ದೇಶದ ಬೇರೆ ಬೇರೆ ರಾಜ್ಯಗಳಲಿದ್ದ ರೈತಪರ ಪ್ರಗತಿಪರ ಸರಕಾರಗಳು ರೈತಪರ ಕಾನೂನುಗಳನ್ನು ಜಾರಿಗೆ ತರುವ ಮುಖಾಂತರ ಜಮೀನದಾರ ಪದ್ದತಿಗಳಿಗೆ ಕಡಿವಾಣ ಹಾಕಿದ್ದರು. ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ತಂದು ರೈತರಿಗೆ ಆತ್ಮಸ್ಥೈರ್ಯ ತುಂಬಿದ್ದರು ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾನೂನನ್ನು ತಿದ್ದುಪಡಿ ಮಾಡಿ ರೈತರಿಗೆ ಮೋಸವೆಸಗುವ ಕಾರ್ಯಕ್ಕೆ ಕೈ ಹಾಕಿದ್ದಾರೆ
ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುವುದಿಲ್ಲ, ರೈತರ ಜಮೀನನ್ನು ಯಾರೋ ಬಂಡವಾಳ ಶಾಯಿಗಳು ಖರೀದಿಸಿ ರೈತರನ್ನು ಕಾಂಗಾಲು ಮಾಡುವ ಉದ್ದೇಶ ಈ ಕಾಯ್ದೆಗಳಲ್ಲಿ ಅಡಗಿದೆ ಎಂದು ಹರಿಹಾಯ್ದ ಅವರು ಇಂತಹ ಅವೈಜ್ಞಾನಿಕ ಕಾನೂನುಗಳನ್ನು ಜಾರಿಗೆ ತರಲು ತುದಿಗಾಲಿನಲ್ಲಿ ನಿಂತಿರುವ ಕೇಂದ್ರ ಸರಕಾರದ ಈ ನಿಲುವಿನಿಂದ ಮುಂದಿನ ದಿನಗಳಲ್ಲಿ ರೈತರು ತಮ್ಮ ಜಮೀನುಗಳನ್ನು ಕಳೆದುಕೊಳ್ಳುವಲ್ಲಿ ಎರೆಡು ಮಾತ್ತಿಲ್ಲ.
ಕೇಂದ್ರ ಸರಕಾರದ ರೈತರನ್ನು ಗುರಿಯಾಗಿ ಮಾಡುತ್ತಿರುವ ಕಾನೂನುಗಳನ್ನು ಅರಿತಿರುವ ಸುಪ್ರೀಂಕೋರ್ಟ್ ಭೂ ಸುಧಾರಣೆಗೆ ಕಾನೂನಿಗೆ ತಡೆಯಾಜ್ಞೆ ನೀಡಿರುವುದು ಸ್ವಾಗತಾರ್ಹವಾಗಿದ್ದು,
ಸುಪ್ರೀಂಕೋರ್ಟ್ ನ ಈ ನಿರ್ಧಾರದಿಂದ ಈ ಕಾಯ್ದೆ ರೈತರ ಪರವಾಗಿಲ್ಲ ಎಂಬುವುದು ಸ್ವಷ್ಠವಾಗಿದೆ. ಇದನ್ನು ಮನಗಂಡು ಕೇಂದ್ರ ಸರಕಾರ ತಾವು ತರಲು ಹೋರಟಿರುವ ಕಾನೂನನ್ನು ತಕ್ಷಣ ಹಿಂದೆ ಪಡೆಯಬೇಕು ಎಂದು ಆಗ್ರಹಿಸಿದರು.
ಈ ವಿಷಯದ ಕುರಿತು ಸುಪ್ರೀಂಕೋರ್ಟ್ ನವರ 4 ಜನ ಪರಿಣಿತರ ಸಮಿತಿಯನ್ನು ನೇಮಿಸಿದ್ದಾರೆ. ಆ ಸಮಿತಿ ನಡೆಸುತ್ತಿರುವ ಸಮೀಕ್ಷೆಗಳಿಗೆ ಸಹ ಕೆಲವರು ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಆ ಸಮಿತಿಯಿಂದ ಬರುವ ವಿಚಾರಗಳನ್ನು ಪರಾಮರ್ಶೆ ಮಾಡಿ ಅದರ ಸಾಧಕ ಭಾದಕಗಳನ್ನು ಪರಿಗಣಿಸಿ ಕಾನೂನನ್ನು ಜಾರಿ ಮಾಡಬೇಕು ಮತ್ತು ಸುಪ್ರೀಂಕೋರ್ಟ್ ನೇಮಿಸಿರು ಪರಿಣಿತರ ಸಮಿತಿಯು ಸಹ ಯಾರ ಮುಲಾಜಿಲ್ಲದೆ ಪ್ರಾಮಾಣಿಕವಾಗಿ ಸಮೀಕ್ಷೆ ನಡೆಯಿಸಿ ತಮ್ಮ ವರದಿಯನ್ನು ಸುಪ್ರೀಂಕೋರ್ಟ್ ಗೆ ಒಪ್ಪಿಸಬೇಕೆಂದು ಎಂದು ಹೇಳಿದರಲ್ಲದೆ ಕೇಂದ್ರ ಸರಕಾರ ರೈತರಿಗೆ ಮಾರಕವಾಗುವಂತಹ ಕಾನೂನುಗಳನ್ನು ಜಾರಿಗೆ ತಂದಿದ್ದು ಅದನ್ನು ಶೀಘ್ರದಲ್ಲೇ ಹಿಂದೆ ಪಡೆಯಬೇಕೆಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಸಿ.ಬಿ.ಗಿಡನ್ನವರ, ಪ್ರಕಾಶ ಬಾಗೋಜಿ, ದಸ್ತಗೀರ ಪೈಲವಾನ, ಸಿದ್ದು ಶಿರಸಂಗಿ, ಸತೀಶ ಪೂಜಾರಿ ಇದ್ದರು.