ಗೋಕಾಕ:ಕೋವಿಡ್ ಲಸಿಕೆ ನೀಡುವ ಕಾರ್ಯಕ್ಕೆ ನಾಳೆ ಸಚಿವ ರಮೇಶ ಚಾಲನೆ : ಡಾ.ಮುತ್ತಣ್ಣ ಕೊಪ್ಪದ ಮಾಹಿತಿ
ಕೋವಿಡ್ ಲಸಿಕೆ ನೀಡುವ ಕಾರ್ಯಕ್ಕೆ ನಾಳೆ ಸಚಿವ ರಮೇಶ ಚಾಲನೆ : ಡಾ.ಮುತ್ತಣ್ಣ ಕೊಪ್ಪದ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ.15 :
ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶನಿವಾರದಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಚಾಲನೆ ನೀಡುವರು ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ ತಿಳಿಸಿದರು.
ಶುಕ್ರವಾರದಂದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಕೋವಿಡ್ ಲಸಿಕೆ ಪ್ಯಾಕ್‍ಗಳು ಆಸ್ಪತ್ರೆಗೆ ಬಂದಿದ್ದು, ಶನಿವಾರದಿಂದ ನಗರದ ಸರಕಾರಿ ಆಸ್ಪತ್ರೆ ಹಾಗೂ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಲಸಿಕೆ ನೀಡುವ ಕಾರ್ಯ ನಡೆಯುವುದು.
ಲಸಿಕೆ ನೀಡಲು ತಾಲೂಕಿನಾದ್ಯಂತ 45 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, ಮೊದಲ ಹಂತದಲ್ಲಿ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಅಂಗನವಾಡಿ ಸಹಾಯಕರಿಗೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಪ್ರತಿನಿತ್ಯ 100 ಜನರಂತೆ ಒಟ್ಟು 5000 ಫಲಾನುಭವಿಗಳಿಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದರು.
ಗರ್ಭಿಣಿ ಮತ್ತು 18 ವರ್ಷದ ಒಳಗಿನ ಮಕ್ಕಳನ್ನು ಹೊರತುಪಡಿಸಿ ಉಳಿದ ಎಲ್ಲ ವಯಸ್ಸಿನ ಜನರು ಈ ಲಸಿಕೆ ಪಡೆದುಕೊಳ್ಳಲು ಅರ್ಹರಾಗಿದ್ದು, ಹಂತ ಹಂತವಾಗಿ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡಲಾಗುವುದು ಎಂದ ಡಾ.ಕೊಪ್ಪದ ಅವರು ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಲಸಿಕಾ ಕೇಂದ್ರದಲ್ಲಿ ಇಬ್ಬರು ವೈದ್ಯರನ್ನು ನೇಮಿಸಲಾಗಿದ್ದು, ಲಸಿಕಾ ಅಧಿಕಾರಿಗಳು ಲಸಿಕೆ ಪಡೆಯುವ ಪ್ರತಿಯೊಬ್ಬರ ದಾಖಲಾತಿಗಳನ್ನು ಪಡೆದು ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಪ್ರತಿಕಾಗೋಷ್ಠಿಯಲ್ಲಿ ಗೋಕಾಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ ಉಪಸ್ಥಿತರಿದ್ದರು.