ಘಟಪ್ರಭಾ:ಕುರುಬರನ್ನು ಎಸ್.ಟಿ ಗೆ ಸೇರ್ಪಡೆ ಮಾಡಬೇಕು : ಮಾರುತಿ ಮರಡಿ
ಕುರುಬರನ್ನು ಎಸ್.ಟಿ ಗೆ ಸೇರ್ಪಡೆ ಮಾಡಬೇಕು : ಮಾರುತಿ ಮರಡಿ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಫೆ 3 :
ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯಕ್ಕಾಗಿ ಕುರುಬರನ್ನು ಎಸ್.ಟಿ ಗೆ ಸೇರ್ಪಡೆ ಮಾಡಬೇಕು ನಿರ್ಲಕ್ಷಿಸಿದರೆ ಸಂಘಟಿತ ಕುರುಬ ಸಮುದಾಯದಿಂದ ರಾಜಕೀಯ ಪಕ್ಷಗಳು ಬಹುದೊಡ್ಡ ಪೆಟ್ಟನ್ನು ಎದುರಿಸಬೇಕಾಗುತ್ತದೆ ಎಂದು ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಮಾರುತಿ ಮರಡಿ ಮೌರ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಫೆ.7 ರಂದು ಬೆಂಗಳೂರಿನಲ್ಲಿ ನಡೆಯುವ ಕುರುಬರ ಎಸ್.ಟಿ ಮೀಸಲಾತಿ ಸಮಾವೇಶದಲ್ಲಿ 15 ಲಕ್ಷ ಜನ ಪಾಲ್ಗೋಳ್ಳಲಿದ್ದಾರೆ. ಸಂಕ್ರಮಣದಿಂದ ಕಾಗಿನೆಲೆ ಕನಕಗುರು ಪೀಠದಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ಹೊರಟ್ಟಿದ್ದು, ಕುರುಬರಿಗೆ ಎಸ್.ಟಿ ಮೀಸಲಾತಿ ಬೇಕು ಎಂಬ ಕೂಗನ್ನು ಸಂವಾದ, ಜನಾಭಿಪ್ರಾಯ, ಸಭೆಗಳು, ಸಮಾವೇಶ, ಧರಣಿಗಳ ಮೂಲಕ ಬಿಸಿ ಮುಟ್ಟಿಸಿದ್ದು, ಇನ್ನು ಹೋರಾಟ ರೂಪ ಉಗ್ರತೆಯಾಗುವುದು ಅನಿವಾರ್ಯವಾಗಿದೆ ಎಂದರು.
ಕರ್ನಾಟಕದ ನಾಲ್ಕು ಜಿಲ್ಲೆಗಳಾದ ಕೊಡಗು, ಗುಲಬರ್ಗಾ, ಬೀದರ, ಯಾದಗಿರಿ ಜಿಲ್ಲೆಗಳಲ್ಲಿ ಎಸ್.ಟಿ ಇದ್ದು ಅದನ್ನು ಕರ್ನಾಟಕ ರಾಜ್ಯವ್ಯಾಪ್ತಿ ಜಾರಿಗೊಳಿಸಿ ಅನೇಕ ದಶಕಗಳಿಂದಲೂ ಕುರುಬರನ್ನು ಎಸ್,ಟಿಗೆ ಸೇರಿಸುವ ಬೇಡಿಕೆ ಸರ್ಕಾರಗಳ ಮುಂದೆ ಇಟ್ಟಿದ್ದರು. ನಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಸಹನೆಯಿಂದ ಕಾದು ಕುಳಿತವರಿಗೆ ಸಹನೆಯ ಕಟ್ಟೆ ಒಡೆದಂತ್ತಾಗಿದೆ. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿ ಸ್ವಯಂ ಪ್ರೇರಿತರಾಗಿ ಸಮಾವೇಶದಲ್ಲಿ ಬಾಗವಹಿಸಲಿದ್ದಾರೆಂದು ಮೌರ್ಯ ತಿಳಿಸಿದರು.
ಎಸ್.ಟಿ ಮೀಸಲಾತಿ 3% ರಷ್ಟು ಇದ್ದು ಕುರುಬರನ್ನು ಸೇರಿಸಿ 9% ರಷ್ಟು ಮೀಸಲಾತಿ ನೀಡಬೇಕು ಮತ್ತು ಸ್ವಾತಂತ್ರ್ಯಕ್ಕೂ ಮುನ್ನ ಕುರುಬರನ್ನು ವಿವಿದ ಹೆಸರುಗಳಿಂದ ಕರೆಯುತ್ತಿದ್ದರು. 1977 ರ ಜು.27 ರಂದು ಸರ್ಕಾರ ಆದೇಶ ಹೊರಡಿಸಿದಾಗ ಕುರುಬ ಪದವನ್ನು ಬಿಟ್ಟು ಉಳಿದೆಲ್ಲ ಕುರುಬರ ಪಂಗಡಗಳನ್ನು ಇಡೀ ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಇದರಿಂದ ಕುರುಬರು ಪರಿಶಿಷ್ಟ ಜಾತಿ, ಪಂಗಡ ಮೀಸಲಾತಿ ಪಡೆಯಲು ಸಾದ್ಯವಾಗಿಲ್ಲ. ಇನ್ನಾದರೂ ಎಚ್ಚೆತ್ತು ಕುರುಬರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಹಾಲುಮತ ಮಹಾಸಭಾದ ಜಿಲ್ಲಾದ್ಯಕ್ಷ ವಿನಾಯಕ ಕಟ್ಟಿಕಾರ ಒತ್ತಾಯಿಸಿದ್ದಾರೆ.
ಆ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ವೀರು ಮೋಡಿ, ರಾಮೋಜಿ ಮಾಳಗಿ, ಪ್ರಕಾಶ ಪಾಟೀಲ, ಸಿದ್ದು ದೇವರಮನಿ, ಜ್ಞಾನೇಶ್ವರ ಭಂಗೇರ, ಕಲಗೌಡ ಖಿಲಾರಿ, ಸಿದ್ದು ಮರಡಿ, ಸಿದ್ದು ವಡೇರ, ಬಸವರಾಜ ಸರವರ ಸಂಘಟನೆಯ ಅನೇಕರು ಉಪಸ್ಥಿತರಿದ್ದರು.