ಗೋಕಾಕ:ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷ ಸಂಘಟಿಸಿ : ಸುಭಾಸ ಪಾಟೀಲ
ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷ ಸಂಘಟಿಸಿ : ಸುಭಾಸ ಪಾಟೀಲ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 11 :
ಮುಂಬರುವ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲು ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರುಗಳು ಶ್ರಮಿಸಬೇಕೆಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಹೇಳಿದರು.
ಗುರುವಾರದಂದು ನಗರದ ಬಿಜೆಪಿ ಕಚೇರಿಯಲ್ಲಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಮುಟ್ಟಿಸುವದರ ಜೊತೆಗೆ ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷ ಸಂಘಟಿಸಿ ಅಭ್ಯರ್ಥಿಯ ಗೆಲುವಿಗೆ ಪದಾಧಿಕಾರಿಗಳು ಶ್ರಮಿಸಬೇಕು ಎಂದರು.
ಈ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವುದರಿಂದ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಈಗಾಗಲೇ ಪ್ರಭಾರಿ ಪ್ರಮುಖರನ್ನು ನೇಮಕ ಮಾಡಿದ್ದು, ಪಕ್ಷದ ಅಭ್ಯರ್ಥಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲು ಸಹಕರಿಸಬೇಕೆಂದರು.
ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ, ಜಿಲ್ಲಾ ಪದಾಧಿಕಾರಿಗಳಾದ ಶಾಮಾನಂದ ಪೂಜೇರಿ, ಬಸವರಾಜ ಹಿರೇಮಠ, ಮಹೇಶ ಮೊಹಿತೆ, ಸಂದೀಪ ದೇಶಪಾಂಡೆ, ಜ್ಯೋತಿ ಕೋಲಾರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಶ್ಯಾಳ, ಸ್ಥಾಯಿ ಸಮಿತಿ ಚೇರಮನ್ನ ಕುತುಬುದ್ದಿನ ಗೋಕಾಕ, ಮುಖಂಡರಾದ ಸುರೇಶ ಸನದಿ, ಅಬ್ಬಾಸ ದೇಸಾಯಿ, ಶಕೀಲ ಧಾರವಾಡ್ಕರ ಸೇರಿದಂತೆ ನಗರಸಭೆ ಸದಸ್ಯರು, ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದ ಪದಾಧಿಕಾರಿಗಳು ಇದ್ದರು.