ಗೋಕಾಕ:ಸಿ.ಡಿ ಪ್ರಕರಣ ಕುರಿತು ಸಿಓಡಿ ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ : ಉರಿಯುತ್ತಿರುವ ಬೆಂಕಿಯಲ್ಲಿ ಜಿಗಿದು ಶಾಸಕರ ಬೆಂಬಲಿಗನಿಂದ ಆತ್ಮಹತ್ಯೆಗೆ ಯತ್ನ
ಸಿ.ಡಿ ಪ್ರಕರಣ ಕುರಿತು ಸಿಓಡಿ ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ : ಉರಿಯುತ್ತಿರುವ ಬೆಂಕಿಯಲ್ಲಿ ಜಿಗಿದು ಶಾಸಕರ ಬೆಂಬಲಿಗನಿಂದ ಆತ್ಮಹತ್ಯೆಗೆ ಯತ್ನ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 5 :
ಸಿ.ಡಿ ಪ್ರಕರಣ ಕುರಿತು ಸಿಓಡಿ ತನಿಖೆ ನಡೆಸುವಂತೆ ಆಗ್ರಹಿಸಿ ಶಾಸಕ ರಮೇಶ ಬೆಂಬಲಿಗರಿಂದ ಶುಕ್ರವಾರದಂದು ನಗರದಲ್ಲಿ ಬೃಹತ್ ಪ್ರತಿಭಟನೆಗಳು ನಡೆದು, ಗಣಪತಿ ರಜಪೂತ ಎಂಬಾತನು ಬೆಂಕಿ ಹತ್ತಿ ಉರಿಯುತ್ತಿದ್ದ ಟಾಯರಗಳಲ್ಲಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿದೆ.
ಕಳೆದ ಮೂರುದಿನಗಳಿಂದ ರಾಜ್ಯದಲ್ಲಿ ಭಾರಿ ಕೋಲಾಹಲ ಎಬ್ಬಿಸಿರುವ ಶಾಸಕ ರಮೇಶ ಜಾರಕಿಹೊಳಿ ಅವರ ಸಿ.ಡಿ ಪ್ರಕರಣವು ಶಾಸಕರ ಬೆಂಬಲಿಗರನ್ನು ಕೆರಳಿಸುವಂತೆ ಮಾಡಿದ್ದು, ಇದರ ಭಾಗವಾಗಿ ಶುಕ್ರವಾರದಂದು ತಾಲೂಕಿನ ಕೊಣ್ಣೂರ ಗ್ರಾಮದ ವ್ಯಾಪ್ತಿಯ ಸಾವಿರಾರು ಅಭಿಮಾನಿಗಳು ಹಾಗೂ ಮಾಲದಿನ್ನಿ ಉಪ್ಪಾರಟ್ಟಿ ಭಾಗದ ಸಾವಿರಾರು ಅಭಿಮಾನಿಗಳು ಪಟ್ಟಣ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾ.ಪಂ , ಗ್ರಾಮ ಪಂಚಾಯಿತಿ ಸದಸ್ಯರುಗಳನ್ನು ಒಳಗೊಂಡ ಶಾಸಕ ರಮೇಶ ಜಾರಕಿಹೊಳಿ ಅವರ ಸಾವಿರಾರು ಅಭಿಮಾನಿಗಳು ಸುಮಾರು 15 ಕಿ.ಮಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಹಶೀಲ್ದಾರ ಹಾಗೂ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ನಗರದಲ್ಲಿ ಪ್ರತಿಭಟನೆಗಳ ಕಾವು ಜೋರು ಪಡೆಯುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಬಸಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತ್ತಲ್ಲದೆ ಸ್ವಯಂ ಪ್ರೇರಣೆಯಿಂದ ವ್ಯಾಪಾರಸ್ಥರು ತಮ್ಮ ಅಂಗಿಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿದ್ದರಿಂದ ಗೋಕಾಕ ನರಗದ ಪ್ರಮುಖ ವೃತ್ತಗಳು ಬಿಕ್ಕೋ ಎನ್ನುತ್ತಿದ್ದವು
ಮಾಲದಿನ್ನಿ ಭಾಗದಿಂದ ಮೆರವಣಿಗೆ ಮುಖಾಂತರ ನಗರದ ನಾಕಾ ನಂ 1 ರವರೆಗೆ ಬಂದ್ ಶಾಸಕರ ಬೆಂಬಲಿಗರು ನಾಕಾದಲ್ಲಿ ರಸ್ತೆ ತಡೆ ನಡೆಯಿಸಿ ಶಾಸಕರ ಪರ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕಪಡಿಸಿ ಶಾಸಕರ ರಮೇಶ ಜಾರಕಿಹೊಳಿ ಅವರನ್ನು ತೇಜೋವಧೆ ಮಾಡಮಾಡಲು ವ್ಯವಸ್ಥಿತ ಸಂಚು ರೂಪಿಸಲಾಗಿದ್ದು, ಆದಷ್ಟು ಬೇಗ ಈ ಪ್ರಕರಣದ ಹಿಂದಿನ ಷಡ್ಯಂತ್ರವನ್ನು ಬೇಧಿಸಬೇಕೆಂದು ಆಗ್ರಹಿಸಿದರು
ಕೊಣ್ಣೂರ , ಮರಡಿಮಠ, ಪಾಲ್ಸ , ಮೇಲ್ಮಟ್ಟಿ, ಗೋಡಚನಮಲ್ಕಿ, ಮಾಣಿಕವಾಡಿ ಗ್ರಾಮದಿಂದ ಸಹಸ್ರಾರು ಸಂಖ್ಯೆಯಲ್ಲಿ ನಗರದ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಶಾಸಕ ರಮೇಶ ಜಾರಕಿಹೊಳಿ ಅವರ ಅಪಾರ ಬೆಂಬಲಿಗರು ಟಾಯರಗಳಿಗೆ ಬೆಂಕಿ ಹಚ್ಚಿ ಶಾಸಕರ ಪರ ಘೋಷಣೆನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರ ನೇತೃತ್ವದಲ್ಲಿ ಬಂದೋಬಸ್ತ್ ನಿರತರಾಗಿದ್ದರು ಈ ಸಂದರ್ಭದಲ್ಲಿ ಪೊಲೀಸರ ಕಣ್ಣತಪ್ಪಿಸಿ ನಗರದ ಹಾಳಬಾಗ ಗಲ್ಲಿಯ ನಿವಾಸಿ ಶಾಸಕರ ಬೆಂಬಲಿಗ ಗಣಪತಿ ರಜಪೂತ (55) ಎಂಬಾತನು ಬೆಂಕಿ ಹತ್ತಿ ಉರಿಯುತ್ತಿದ್ದ ಟಾಯರಗಳಲ್ಲಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಅಘಾತಕಾರಿ ಘಟನೆ ಜರುಗಿತು ಇದರಿಂದ ಬಸವೇಶ್ವರ ವೃತ್ತದಲ್ಲಿಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತು. ಸ್ಥಳದಲಿ ಇದ್ದ ಕಾರ್ಯನಿರತ ಪೊಲೀಸರು ತಕ್ಷಣ ದಾವಿಸಿ ಬಂದು ಆತನನ್ನು ರಕ್ಷಿಸಿ ಸಮೀಪದ ಸರಕಾರಿ ಆಸ್ವತ್ರೆಗೆ ದಾಖಲಿಸಿದ್ದಾರೆ.
ಧಗಧಗಿಸುವ ಬೆಂಕಿಯಲ್ಲಿ ಹಾರಿದ ಗಣಪತಿ ಎಂಬಾತನಿಗೆ ಗಂಭೀರವಾದ ಗಾಯಗಳು ಆಗಿದ್ದು ಕಂಡು ಬಂದಿದೆ. ಸ್ಥಳದಲ್ಲೆಇದ್ದ ಅಗ್ನಿಶಾಮಕ ದಳದವರು ಟಾಯರಗಳಿಗೆ ಹಚ್ಚಲಾಗಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಈ ಸಂದರ್ಭದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಸಾವಿರಾರು ಅಭಿಮಾನಿಗಳು ಉಪಸ್ಥಿತರಿದ್ದರು .