ಘಟಪ್ರಭಾ:ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದ ರೈತರಿಗೆ ಸಹಕಾರಿಯಾಗಿವೆ : ಗುರುಸಿದ್ದಪ್ಪ ಕಡೇಲಿ
ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದ ರೈತರಿಗೆ ಸಹಕಾರಿಯಾಗಿವೆ : ಗುರುಸಿದ್ದಪ್ಪ ಕಡೇಲಿ
ಘಟಪ್ರಭಾ ಸೆ 11: ಗ್ರಾಮೀಣ ಪ್ರದೇಶದ ರೈತರಿಗೆ ಮತ್ತು ಜನಸಾಮಾನ್ಯರಿಗೆ ಆರ್ಥಿಕ ಸದೃಢ ಹೊಂದಲು ಸಹಕಾರಿ ಸಂಘಗಳು ಪೂರಕವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿವೆ ಎಂದು ಕೆಎಂಎಫ್ ನಿರ್ದೇಶಕ ಗುರುಸಿದ್ದಪ್ಪ ಕಡೇಲಿ ಹೇಳಿದರು.
ಅವರು ಸೋಮವಾರದಂದು ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಜರುಗಿದ ಸನ್ 2016-17ನೇ ಸಾಲಿನ ಶಿಂದಿಕುರಬೇಟ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಂಘವು ವರ್ಷದಿಂದ ವರ್ಷಕ್ಕೆ ಲಾಭದಲ್ಲಿ ಮುನ್ನಡೆಸಿಕೊಂಡು ಬಂದಿದೆ. ಇದಕ್ಕೆ ಜನರ ಸಹಕಾರ, ಸಂಘದ ಸದಸ್ಯರ ಮಾರ್ಗದರ್ಶನ, ಸಿಬ್ಬಂದಿ ಪರಿಶ್ರಮ ಕೂಡಿದೆ. ಈ ವರ್ಷ ಸಂಘವು ರೂ. 12,63,433.22 ಲಾಭ ಗಳಿಸಿದೆ. ಸಂಘದಿಂದ ರೈತರಿಗೆ ಹಲವಾರು ಯೋಜನೆಗಳಿದ್ದು ಅವುಗಳ ಸದ್ಬಳಕೆಯನ್ನು ಮಾಡಿಕೊಳ್ಳಬೇಕೆಂದು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಡಿವೇಶ ಕಾಳ್ಯಾಗೋಳ ವಾರ್ಷಿಕ ಮಹಾಸಭೆಯ ನಡುವಳಿಗೆ, ಅಢಾವೆ ಪತ್ರಿಕೆ ಸಭೆಗೆ ಓದಿ ಹೇಳಿದರು.
ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಅತೀ ಹೆಚ್ಚು ಆಕಳು ಮತ್ತು ಎಮ್ಮೆ ಹಾಲು ಪೂರೈಸಿದವರಿಗೆ ಮತ್ತು ಗುಣಮಟ್ಟದ ಹಾಲು ಪೂರೈಸಿದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರವಿ ಕಾಳ್ಯಾಗೋಳ ವಹಿಸಿದ್ದರು. ವೇದಿಕೆ ಮೇಲೆ ಸಂಘದ ಉಪಾಧ್ಯಕ್ಷೆ ಗೌರವ್ವ ಬೋಳನೆತ್ತಿ, ಸದಸ್ಯರುಗಳಾದ ಚಂದ್ರಕಾಂತ ಇಟ್ಯಾಗೋಳ, ಪರುಶರಾಮ ಮಲಕನ್ನವರ, ಚಂದ್ರು ಹೊಸಪೇಟಿ, ಸಿದ್ದಲಿಂಗ ನೇರ್ಲಿ, ಮುತ್ತೇಪ್ಪ ಜೊತ್ತೇನ್ನವರ, ಮಾರುತಿ ಶಿರಗುರಿ, ಶಂಕರ ಕಟ್ಟಿಮನಿ, ಶೋಭಾ ಸಾಂಗಲಿ ಇದ್ದರು.
ಶ್ರೀಕಾಂತ ಕಸ್ತೂರಿ ಸ್ವಾಗತಿಸಿದರು. ಎ.ಆರ್.ಕಾಳ್ಯಾಗೋಳ ನಿರೂಪಿಸಿ, ವಂದಿಸಿದರು.