ಗೋಕಾಕ:ಸರ್ಕಾರಿ ಶಾಲೆಗಳಲ್ಲಿ ಕಲಿತವರು ಈಗ ಉನ್ನತವಾದ ಹುದ್ದೆಗಳಲ್ಲಿದ್ದಾರೆ : ಬಿಇಒ ಎಸ್.ಸಿ.ಕರಿಕಟ್ಟಿ
ಸರ್ಕಾರಿ ಶಾಲೆಗಳಲ್ಲಿ ಕಲಿತವರು ಈಗ ಉನ್ನತವಾದ ಹುದ್ದೆಗಳಲ್ಲಿದ್ದಾರೆ : ಬಿಇಒ ಎಸ್.ಸಿ.ಕರಿಕಟ್ಟಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 22 :
ಸರ್ಕಾರಿ ಶಾಲೆಗಳ ಉಳುವಿಗಾಗಿ ಸರ್ಕಾರಿ ಶಾಲೆಗಳಲ್ಲಿ ಕಲಿತ ಹಳೆ ವಿದ್ಯಾರ್ಥಿಗಳ ಶ್ರಮಿಸಬೇಕಾಗಿರುವುದು ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ ಎಂದು ಧಾರವಾಡ ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಸಿ.ಕರಿಕಟ್ಟಿ ಹೇಳಿದರು.
ಅವರು ಇಲ್ಲಿಯ ನಾಕಾ ನಂ 1ರ ರಾಯಲ್ ಆರ್ಕೆಡ್ ಹಾಲ್‍ನಲ್ಲಿ ಜರುಗಿದ ನಗರದ ಜಿಎನ್‍ಎಸ್ ಶಾಲೆಯ 1999-2000ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುಗಳಿಗೆ ಗೌರವ ನಮನ ಹಾಗೂ ಸ್ನೇಹಿತರ ಪುನರ್ ಮಿಲನ ಹಾಗೂ ಗುರುಸ್ಮøತಿ ಹಾಗೂ ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಯಾವುದಕ್ಕೂ ಕೊರತೆಯಿಲ್ಲ, ಸರ್ಕಾರಿ ಶಾಲೆಗಳಲ್ಲಿ ಕಲಿತವರು ಈಗ ಉನ್ನತವಾದ ಹುದ್ದೆಗಳಲ್ಲಿದ್ದಾರೆ. ನೈಜವಾದ ಭಾವನೆಗಳನ್ನು ವಿದ್ಯಾರ್ಥಿಗಳ ದೆಸೆಯಲ್ಲಿಯೇ ಬಿತ್ತುವ ಕಾರ್ಯವನ್ನು ಸರ್ಕಾರಿ ಶಾಲೆಗಳು ಮಾಡುತ್ತಿವೆ. ಸರ್ಕಾರಿ ಶಾಲೆಯಲ್ಲಿ ಕಲಿತವರ ತಾತ್ಸಾರ ಮನೋಭಾವನೆಯಿಂದ ಹಿನ್ನಡೆಯಾಗುತ್ತಿದೆ. ಅದಕ್ಕಾಗಿ ಸ್ವಾಭಿಮಾನ ಹಾಗೂ ಬದ್ಧತೆಯಿಂದ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಸೇರಿಸುವ ಮೂಲಕ ಉಳಿವಿಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಕೆಲವೊಂದು ನೂನ್ಯತೆಗಳಿವೆ ಅವುಗಳನ್ನು ಸರಿಪಡಿಸುವ ಕಾರ್ಯವನ್ನು ಮಾಡುವ ಮಾಡಲು ನಾವೆಲ್ಲರೂ ಪಣತೊಡೋಣ. “ನನ್ನ ಶಾಲೆ, ನನ್ನ ಕೊಡುಗೆ” ಎಂದು ಶಾಲೆಗಳಿಗೆ ಪ್ರೋತ್ಸಾಹ ನೀಡಲು ಅವಕಾಶವಿದ್ದು ಅದರಡಿಯಲ್ಲಿ “ನನ್ನ ಶಾಲೆ, ನನ್ನ ಹೆಮ್ಮೆ” ಎಂಬತೆ ಗತವೈಭವದಿಂದ ಮೆರೆದ ಇಲ್ಲಿಯ ಸರ್ಕಾರಿ ಹೊಸ ಮಾಧ್ಯಮಿಕ ಶಾಲೆಯ ಶ್ರೇಯೋಭಿವೃದ್ದಿಗಾಗಿ ಇಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಮಾಡಬೇಕು. ನಿಮ್ಮೊಂದಿಗೆ ನಿಮಗೆ ವಿದ್ಯೆಯನ್ನು ಧಾರೆಯೆರೆದ ಶಿಕ್ಷಕ ವೃಂದದೊಂದಿಗೆ ನಾವು ಕೂಡ ಸಹಕಾರ ನೀಡುವುದಾಗಿ ತಿಳಿಸಿದರು.
ನಿವೃತ್ತ ಬಿಇಒ ಶ್ರೀಮತಿ ಕೆ.ಎ.ಸನದಿ ಅವರು ಮಾತನಾಡಿ, ದಿನ ನಿತ್ಯದ ಬದುಕಲ್ಲಿ ಎಷ್ಟೇ ತೊಂದರೆಗಳು ಬಂದರೂ ಕೂಡಾ ಧೈರ್ಯಗೆಡೆದೇ ಶಿಸ್ತುನ್ನು ಮೈಗೂಡಿಸಿಕೊಳ್ಳಿ, ಕಾಯಕವೇ ಕೈಲಾಸವೆಂಬಂತೆ ಯಾವ ಕೆಲಸವು ಕನಿಷ್ಠವಲ್ಲ, ಬದ್ಧತೆಯನ್ನು ಪ್ರೀತಿಸಿ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಸಮಾಜದ ನಿರ್ಮಾಣದ ಜೊತೆಗೆ ತಮ್ಮ ಮಕ್ಕಳಿಗೆ ಶಿಕ್ಷಣ, ಉತ್ತಮ ಸಂಸ್ಕಾರ ನೀಡಿ, ತಾವು ಕಲಿತ ಶಾಲೆಯ ಅಭಿವೃದ್ದಿಗಾಗಿ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಕಟ್ಟಿ, ತಮ್ಮಲ್ಲಿ ಯುವ-ಭಾರತವಿದೆ. ವರ್ತಮಾನದ ಭಾರತವನ್ನು ಕಟ್ಟಿ, ಇದೇ ನೀವು ನಮಗೆ ನೀಡಿದ ಗುರುದಕ್ಷಿಣೆಯಾಗಿದೆ ಎಂದು ಮಾರ್ಮಿಕವಾಗಿ ನುಡಿದರು. ಮುಖ್ಯ ಅತಿಥಿಗಳಾಗಿ ಸತೀಶ ಶುಗರ್ಸನ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ ವಾಡೇನ್ನವರ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ವಿದ್ಯಾದಾನ ಮಾಡಿದ ಶಿಕ್ಷಕರಾದ ಎಮ್.ಪಿ.ಗಾಣಗಿ, ಎಂ.ಎಂ.ಹಾದಿಮನಿ, ಸಿ.ಎಸ್. ಮೇಗಲಮನಿ, ಎ.ಕೆ.ಜಮಾದಾರ, ಬಿ.ಎಸ್.ಸೊಲಬನ್ನವರ, ಎಚ್.ಡಿ.ಬೇಗ, ಎಂ.ಎ.ಬಾಗೇವಾಡಿ, ಡಿ.ವಿ.ಕಾಂಬಳೆ, ಎಂ.ಎಸ್.ವಕ್ಕುಂದ, ಡಿ.ಸಿ.ಜುಗಳಿ, ಎಸ್.ಪಿ.ಹಿರೇಮಠ, ಎಸ್.ಎಸ್.ಮುನವಳ್ಳಿ, ಎಸ್.ಎಂ.ಕಲಗುಡಿ, ಆರ್.ಕೆ.ಹಂದಿಗುಂದ, ಎಂ.ಆರ್.ಹರಿದಾಸ, ಯು.ಕೆ.ವಿಭೂತಿ, ಬಿ.ಡಿ.ಸೊಗಲಿ, ಜಿ.ಎಸ್.ಪಾಟೀಲ ಶಿಕ್ಷೇತರ ಸಿಬ್ಬಂದಿಗಳಾದ ಎಂ.ಎಚ್.ಕಾಲೇಬಾಯಿ, ಎಸ್.ಜಿ.ಆಲತಗಿ, ಆರ್.ಎಲ್.ಬಬಲಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಎನ್‍ಎಸ್ ಶಾಲೆಯ 1999-2000ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ 10001/- ರೂಗಳನ್ನು ಶಾಲಾಭಿವೃದ್ದಿಗಾಗಿ ನೀಡಲಾಯಿತು.
ಅಗಲಿದ ಗುರುವೃಂದ ಹಾಗೂ ಮಿತ್ರರಿಗೆ ಶೃದ್ಧಾಂಜಲಿ ಸಲ್ಲಿಸಿ ಮೌನ ಆಚರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ರಾಮಚಂದ್ರ ಕಾಕಡೆ ಸ್ವಾಗತಿಸಿದರು. ಶೈಲಾ ಕೊಕ್ಕರಿ ನಿರೂಪಿಸಿದರು. ದೀಪಾ ಕಂಬಾರ ವಂದಿಸಿದರು.